ಶೇ. 4.7ಕ್ಕೆ ಏರಿದ ಜಿಡಿಪಿ ದರ

GDP
Published on

ನವದೆಹಲಿ: ಷೇರುಪೇಟೆಯ ತಲ್ಲಣದ ಮಧ್ಯೆಯೂ ಆರ್ಥಿಕತೆಯಲ್ಲಿ ತುಸು ಪ್ರಗತಿ ಕಂಡಿದೆ. ಪ್ರಸಕ್ತ ಆರ್ಥಿಕ ಸಾಲಿನ ಮೂರನೇ ತ್ರೖೆಮಾಸಿಕದಲ್ಲಿ ದೇಶಿಯ ಒಟ್ಟು ಉತ್ಪನ್ನದ ದರ (ಜಿಡಿಪಿ) ಶೇ.0.2ರಷ್ಟು ಹೆಚ್ಚಳ ಕಾಣುವ ಮೂಲಕ ಶೇ. 4.7ಕ್ಕೆ ಏರಿಕೆಯಾಗಿದೆ.

ಎರಡನೇ ತ್ರೖೆಮಾಸಿಕದಲ್ಲಿ ಶೇ. 4.5ಕ್ಕೆ ಕುಸಿದು ಆರು ವರ್ಷಗಳ ಹಿಂದಿನ ಮಟ್ಟಕ್ಕೆ ತಲುಪಿ ಆತಂಕಕ್ಕೆ ಕಾರಣವಾಗಿತ್ತು. ಆದರೆ, ಸೆಪ್ಟೆಂಬರ್​ನಿಂದ ಡಿಸೆಂಬರ್ ಅವಧಿಯಲ್ಲಿ ಚೇತರಿಕೆಯ ಹಾದಿಗೆ ಮರಳಿರುವುದು 2019-20ರ ವರ್ಷಾಂತ್ಯಕ್ಕೆ ಜಿಡಿಪಿ ಶೇ. 5 ಅಥವಾ ಅದಕ್ಕೂ ಹೆಚ್ಚಿನ ಹಂತಕ್ಕೆ ತಲುಪುವ ಸರ್ಕಾರದ ನಿರೀಕ್ಷೆಗೆ ಭರವಸೆ ಮೂಡಿಸಿದೆ. 2020-21ರಲ್ಲಿ ಜಿಡಿಪಿ ಶೇ. 6ಕ್ಕೆ ತಲುಪಲಿದೆ ಎಂದು ಬಜೆಟ್​ನಲ್ಲಿ ವಿಶ್ವಾಸ ವ್ಯಕ್ತಪಡಿಸಲಾಗಿದೆ.

ಕೈಗಾರಿಕಾ ವಲಯದಲ್ಲಿ ಪ್ರಗತಿ: -ಠಿ; 8 ಕೋಟಿ ಬಂಡವಾಳ ಹೊಂದಿರುವ ಕೈಗಾರಿಕೆಗಳಲ್ಲಿ ಕಳೆದ ಜನವರಿಯಲ್ಲಿ ಶೇ. 2.2ರಷ್ಟು ಪ್ರಗತಿಯಾಗಿದೆ. ಇದೇ ರೀತಿ, ಉತ್ಪಾದನೆ, ಗಣಿ, ತೈಲ ಸಂಸ್ಕರಣೆ, ವಿದ್ಯುತ್, ಕಟ್ಟಡ ನಿರ್ವಣ, ಕೃಷಿಯಲ್ಲಿ ಅಭಿವೃದ್ಧಿ ಆಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎಸ್​ಎಸ್​ಒ) ಬಿಡುಗಡೆ ಮಾಡಿರುವ ವರದಿ ತಿಳಿಸಿದೆ. ಜಿಡಿಪಿಯಲ್ಲಿನ ಜಿಗಿತದ ನಂತರ 2019-20ನೇ ಸಾಲಿನ ಮೊದಲ ತ್ರೖೆಮಾಸಿಕದ ಜಿಡಿಪಿಯನ್ನು ಶೇ.5ರಿಂದ ಶೇ.5.6 ಮತ್ತು ಎರಡನೇ ತ್ರೖೆಮಾಸಿದಲ್ಲಿ ಶೇ. 4.5ರಿಂದ ಶೇ. 5.1ಕ್ಕೆ ಹಣಕಾಸು ಸಚಿವಾಲಯ ಏರಿಕೆ ಮಾಡಿದೆ.

ಸರ್ಕಾರದ ಸುಧಾರಣಾ ಕ್ರಮ

ಜಿಡಿಪಿಯಲ್ಲಿನ ಕುಸಿತದಿಂದ ಕಂಗೆಟ್ಟ ಸರ್ಕಾರ ಅನೇಕ ಆರ್ಥಿಕ ಸುಧಾರಣಾ ಕ್ರಮಗಳನ್ನು ಘೋಷಿಸಿತು. ಕಾರ್ಪೆರೇಟ್ ಕಂಪನಿಗಳ ತೆರಿಗೆಯನ್ನು ಶೇ. 30ರಿಂದ ಶೇ. 22ಕ್ಕೆ ಇಳಿಸಿತು. 2019ರ ಅ.1ರ ನಂತರ ಹೊಸದಾಗಿ ಉದ್ಯಮ ಸ್ಥಾಪಿಸುವವರಿಗೆ ತೆರಿಗೆಯನ್ನು ಶೇ. 25ರಿಂದ 15ಕ್ಕೆ ಕಡಿಮೆ ಮಾಡಿತು. 10 ರಾಷ್ಟ್ರೀಕೃತ ಬ್ಯಾಂಕ್​ಗಳನ್ನು ನಾಲ್ಕು ಬ್ಯಾಂಕ್​ಗಳಲ್ಲಿ ವಿಲೀನಗೊಳಿಸುವ ಘೋಷಣೆ, ಜಿಎಸ್​ಟಿ ಸ್ಲ್ಯಾಬ್​ಗಳನ್ನು ತಗ್ಗಿಸುವ ಪ್ರಸ್ತಾವನೆಯನ್ನು ಸರ್ಕಾರ ಮಾಡಿತು. ಈ ಮಧ್ಯೆ, ಆರ್​ಬಿಐ 2019ರ ಅಕ್ಟೋಬರ್​ನಲ್ಲಿ ಬಡ್ಡಿ ದರದ ಮೂಲಾಂಶದಲ್ಲಿ 25ರಷ್ಟು ಇಳಿಸಿ, ರೆಪೊ ದರವನ್ನು ಶೇ. 5.40ರಿಂದ ಶೇ. 5.15ಕ್ಕೆ ಇಳಿಸಿತು. ನಂತರ ಎರಡು ದ್ವೈಮಾಸಿಕ ಸಭೆಯಲ್ಲೂ ಇದೇ ದರವನ್ನು ಮುಂದುವರಿಸಿತು. ಈ ಸುಧಾರಣಾ ಕ್ರಮದಿಂದ ಜಿಡಿಪಿಯಲ್ಲಿ ಚೇತರಿಕೆ ಕಾಣುತ್ತಿದೆ.

ಜಿಡಿಪಿಯಲ್ಲಿ ಮುನ್ನಡೆ ಆಗುತ್ತಿದೆ ಎಂಬ ವಿಶ್ವಾಸವಿದ್ದ ಕಾರಣ ನನಗೆ ಅಚ್ಚರಿ ಅಥವಾ ಆಘಾತವೇನೂ ಆಗಿಲ್ಲ. ಈ ವೃದ್ಧಿಯಿಂದ ಸಂತಸವಾಗಿರುವುದು ನಿಜ. ಆದರೆ ಇದು ಸಂಖ್ಯೆಗಲ್ಲ, ನಾವು ಪ್ರಗತಿಯ ಹಾದಿಯಲ್ಲಿ ಇದ್ದೇವೆ ಎನ್ನುವುದಕ್ಕೆ. | ನಿರ್ಮಲಾ ಸೀತಾರಾಮನ್ ಕೇಂದ್ರ ಹಣಕಾಸು ಸಚಿವೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net