

ಗದಗ: ಬೆಳ್ಳುಳ್ಳಿ ದರ ಏಕಾಏಕಿ ಕುಸಿತ ಕಂಡಿದ್ದರಿಂದ ಆಕ್ರೋಶಗೊಂಡ ರೈತರು ಗದಗ ಎಪಿಎಂಸಿಯಲ್ಲಿ ಶನಿವಾರ ದಿಢೀರ್ ಪ್ರತಿಭಟನೆ ನಡೆಸಿದರು. ಕಳೆದ ವಾರ ಪ್ರತಿ ಕ್ವಿಂಟಾಲ್ಗೆ 20 ರಿಂದ 22 ಸಾವಿರ ರೂ.ವರೆಗೆ ಮಾರಾಟವಾಗಿದ್ದು, ಶನಿವಾರ ಪ್ರತಿ ಕ್ವಿಂಟಾಲ್ಗೆ 7ರಿಂದ 8 ಸಾವಿರ ರೂ. ನಿಗದಿಪಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅರ್ಧಕ್ಕಿಂತ ಹೆಚ್ಚು ದರ ಕುಸಿದರೆ ರೈತರು ಬದುಕುವುದು ಹೇಗೆ ಎಂದು ಅವರು ಪ್ರಶ್ನಿಸಿದರು.
ಬೆಳ್ಳುಳ್ಳಿ ಮಾರಾಟಕ್ಕೆ ಗದಗ ಎಪಿಎಂಸಿ ಪ್ರಮುಖ ಮಾರುಕಟ್ಟೆಯಾಗಿದ್ದು, ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯಿಂದ ನೂರಾರು ಚೀಲ ಬೆಳ್ಳುಳ್ಳಿ ತಂದಿದ್ದೇವೆ. ಬಸವನ ಬಾಗೇವಾಡಿಯಿಂದ ಗದಗ ಎಪಿಎಂಸಿಗೆ ತಂದು ಇಳಿಸಲು ಪ್ರತಿ ಚೀಲಕ್ಕೆ 1 ಸಾವಿರ ರೂ. ಬಾಡಿಗೆ ಕೊಡಬೇಕು. ಬೆಳ್ಳುಳ್ಳಿ ಬೆಳೆಯಲು ಪ್ರತಿ ಎಕರೆಗೆ ಕನಿಷ್ಠ 50 ಸಾವಿರ ರೂ. ಖರ್ಚು ಮಾಡಲಾಗಿದೆ. ಕಷ್ಟಪಟ್ಟು ನಾಲ್ಕಾರು ತಿಂಗಳು ಜತನದಿಂದ ಪೋಷಿಸಿ ಬೆಳೆಸಿ ಉತ್ಪನ್ನ ತಂದರೆ ಕಿಮ್ಮತ್ತು ಇಲ್ಲದಂತೆ ಮಾಡಲಾಗುತ್ತಿದೆ. 20 ಸಾವಿರ ಇದ್ದ ದರ ಇದ್ದಕ್ಕಿದ್ದ ಹಾಗೆ 8 ಸಾವಿರ ರೂ. ಬಂದು ನಿಲ್ಲುತ್ತದೆ ಎಂದರೆ ರೈತನಿಗೆ ಕಿಮ್ಮತ್ತು ಇಲ್ಲದಂತಾಗಿದೆ ಎಂದು ಸುರಪುರ ತಾಲೂಕಿನ ಚಿಂಚೋಳಿ ಗ್ರಾಮದ ವಿಜಯ ತಮ್ಮ ಅಳಲು ತೋಡಿಕೊಂಡರು.
ಸವಾಲು ಕೂಗಿ ಬೆಳ್ಳುಳ್ಳಿ ಖರೀದಿ ಮಾಡಲಾಗುತ್ತಿದೆ. ಇದರಲ್ಲಿ ರೈತರಿಗೆ ಸಾಕಷ್ಟು ಮೋಸವಾಗುತ್ತಿದೆ. ಅಲ್ಲದೇ, ಇದೀಗ ಕಡಿಮೆ ದರಕ್ಕೆ ಮಾರಾಟ ಮಾಡಿದರೆ ಬೆಳೆಗೆ ಖರ್ಚು ಮಾಡಿದ ಹಣವೂ ಬರುವುದಿಲ್ಲ. ಇಲ್ಲಿನ ದಲಾಲರು, ಖರೀದಿದಾರರು ಶಾಮೀಲಾಗಿ ದರವನ್ನು ಕಡಿಮೆ ಮಾಡಿದ್ದಾರೆ ಎಂದು ಬಸವನ ಬಾಗೇವಾಡಿಯ ರೈತ ರಾಮಚಂದ್ರ ಪಾಟೀಲ ಆರೋಪಿಸಿದರು.
ಗದಗ ಎಪಿಎಂಸಿ ಬೆಳ್ಳುಳ್ಳಿ ಮಾರಾಟದ ಪ್ರಮುಖ ಕೇಂದ್ರವಾಗಿದ್ದು, ಪ್ರತಿ ಶನಿವಾರ ಬೆಳ್ಳುಳ್ಳಿ ಖರೀದಿ ನಡೆಯುತ್ತಿದೆ. ಸವಾಲು ಕೂಗಿ ದರ ನಿಗದಪಡಿಸುವ ಪದ್ಧತಿ ಜಾರಿಯಲ್ಲಿದೆ. ಎಪಿಎಂಸಿಗೆ ಶನಿವಾರ 600-800 ಚೀಲ ಆವಕವಾಗಿದೆ. ಗದಗ ಜಿಲ್ಲೆಯಲ್ಲಿ ಬೆಳ್ಳುಳ್ಳಿ ಬೆಳೆಗಾರರು ಇಲ್ಲ. ವಿಜಯಪುರ ಜಿಲ್ಲೆಯಿಂದ ರೈತರು ಇಲ್ಲಿಗೆ ಬೆಳ್ಳುಳ್ಳಿ ತರುತ್ತಾರೆ. ಶನಿವಾರ ಬಸವನಬಾಗೇವಾಡಿಯಿಂದ ನೂರಾರು ರೈತರು ಬೆಳ್ಳುಳ್ಳಿ ಸಮೇತ ಮಾರುಕಟ್ಟೆ ಆಗಮಿಸಿದ್ದಾರೆ. ರಾತ್ರಿ ನಿದ್ದೆಗಟ್ಟು, ಸಾಕಷ್ಟು ಖರ್ಚು ಮಾಡಿಕೊಂಡು ಉತ್ಪನ್ನ ತಂದರೂ ಬೆಲೆ ಇಲ್ಲದಂತಾಗಿದೆ ಎಂದು ಅನೇಕರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಸ್ಯಾಂಪಲ್ ವಾಪಸ್ ಬರಲ್ಲ!
ಖರೀದಿದಾರರ ಬಳಿ ಇರುವಂತಹ ಕೂಲಿ ಕಾರ್ವಿುಕರು ಸ್ಯಾಂಪಲ್ ನೆಪದಲ್ಲಿ ನಾಲ್ಕಾರು ಕೆಜಿ ಬೆಳ್ಳುಳ್ಳಿ ತೆಗೆದುಕೊಂಡು ಹೋಗುತ್ತಾರೆ. ಮೊದಲೇ ದರ ಇಲ್ಲದೆ ಹೈರಾಣಾಗಿದ್ದೇವೆ. ಇಂಥದ್ದರಲ್ಲಿ ನಾಲ್ಕಾರು ಕೆಜಿ ಸ್ಯಾಂಪಲ್ ಕೊಟ್ಟು ನಾವು ಎಲ್ಲಿಗೆ ಹೋಗಬೇಕು ಎಂದು ಅನೇಕ ರೈತರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಪಿಎಂಸಿ ರೈತ ಪ್ರತಿನಿಧಿ ವಿರೂಪಾಕ್ಷಗೌಡ ದೇಸಾಯಿ, ಸ್ಯಾಂಪಲ್ ನೆಪದಲ್ಲಿ ಎರಡ್ಮೂರು ಕೆಜಿ ಉತ್ಪನ್ನ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಿದ್ದೇವೆ. ಅಲ್ಲಲ್ಲಿ ಕೂಲಿ ಕಾರ್ವಿುಕರು ಇಂತಹ ಕೆಲಸ ಮಾಡುತ್ತಿದ್ದು ಮುಂದಿನ ವಾರದಿಂದ ಇದಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗುವುದು ಎಂದು ರೈತರನ್ನು ಸಮಾಧಾನ ಪಡಿಸಿದರು.
ಸ್ಯಾಂಪಲ್ ರೂಪದಲ್ಲಿ ತೆಗೆದುಕೊಂಡಿದ್ದ ಬೆಳ್ಳುಳ್ಳಿಯನ್ನು ಅಂಗಡಿಯೊಂದರಲ್ಲಿ ಇಡಲಾಗಿತ್ತು. ಅದನ್ನು ಮರಳಿ ಸಂಬಂಧಪಟ್ಟ ರೈತರಿಗೆ ಕೊಡಿಸಲಾಗಿದೆ. ದರ ವ್ಯತ್ಯಾಸವಾಗಿದ್ದರಿಂದ ರೈತರು ಅಸಮಾಧಾನಗೊಂಡಿದ್ದಾರೆ. | ಎಸ್.ಬಿ. ನ್ಯಾಮಗೌಡ, ಕಾರ್ಯದರ್ಶಿ, ಎಪಿಎಂಸಿ ಗದಗ