ಫಾಸ್ಟ್ಯಾಗ್ ಇನ್ನೂ ಹದಿನೈದು ದಿನಗಳ ಕಾಲ ಉಚಿತವಾಗಿ ಲಭ್ಯವಿದೆ...

Fastag 11 jan 20
Published on

ನವದೆಹಲಿ: ಇಲೆಕ್ಟ್ರಾನಿಕ್ ಟೋಲ್ ಸಂಗ್ರಹ ಹೆಚ್ಚಿಸುವ ಸಲುವಾಗಿ ಫಾಸ್ಟ್ಯಾಗ್ ಮೇಲಿನ ಶುಲ್ಕ ಮನ್ನಾ ಯೋಜನೆಯನ್ನು ಫೆ.29ರ ತನಕ ವಿಸ್ತರಿಸಲು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್​ಎಚ್​ಎಐ) ನಿರ್ಧರಿಸಿದೆ.

ಸರ್ಕಾರ ಈಗಾಗಲೇ ದೇಶದ 527 ಕ್ಕೂ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್ಯಾಗ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಟೋಲ್​ಗಳಲ್ಲಿ ಡಿಜಿಟಲ್ ಪಾವತಿ ಮೂಲಕ ಹೆದ್ದಾರಿ ಶುಲ್ಕ ಸಂಗ್ರಹಿಸುವುದನ್ನು ಹೆಚ್ಚಿಸುವ ಸಲುವಾಗಿ ಎನ್​ಎಚ್​ಎಐ, ಫಾಸ್ಟ್ಯಾಗ್ ವೆಚ್ಚ 100 ರೂಪಾಯಿಯನ್ನು ಫೆಬ್ರವರಿ 15-29ರ ಅವಧಿಯಲ್ಲಿ ಮನ್ನಾ ಮಾಡಲು ತೀರ್ಮಾನಿಸಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಇದರಲ್ಲಿರುವ ಮಾಹಿತಿ ಪ್ರಕಾರ, ರಸ್ತೆ ಬಳಕೆದಾರರು ಯಾವುದಾದರೂ ಅಧಿಕೃತ ಪಾಯಿಂಟ್ ಆಫ್ ಸೇಲ್​ ಕೇಂದ್ರಕ್ಕೆ ವಾಹನದ ಅಧಿಕೃತ ನೋಂದಣಿ ಪ್ರಮಾಣಪತ್ರ ಕೊಂಡು ಹೋಗಿ ಫಾಸ್ಟ್ಯಾಗ್​ ಅನ್ನು ಉಚಿತವಾಗಿ ಪಡೆಯಬಹುದಾಗಿದೆ. ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲೂ ಫಾಸ್ಟ್ಯಾಗ್ ಕೇಂದ್ರಗಳಿದ್ದು, ಇದಲ್ಲದೆ, ಪ್ರಾದೇಶಿಕ ಸಾರಿಗೆ ಕಚೇರಿಗಳು, ಕಾಮನ್ ಸರ್ವೀಸ್ ಸೆಂಟರ್​, ಟ್ರಾನ್ಸ್​ಪೋರ್ಟ್ ಹಬ್, ಪೆಟ್ರೋಲ್ ಪಂಪ್​ ಮತ್ತು ಇತರೆಡೆ ಫಾಸ್ಟ್ಯಾಗ್ ಲಭ್ಯ ಇದೆ.

ಹತ್ತಿರದ ಎನ್​ಎಚ್​ಎಐ ಫಾಸ್ಟ್ಯಾಗ್​ ಪಾಯಿಂಟ್ ಆಫ್ ಸೇಲ್ ಸ್ಥಳ ಹುಡುಕಬೇಕಾದರೆ, MyFASTag ಆ್ಯಪ್ ಡೌನ್​ ಲೋಡ್ ಮಾಡಬೇಕು ಅಥವಾ www.ihmcl.com ತಾಣಕ್ಕೆ ಭೇಟಿ ನೀಡಬಹುದು ಅಥವಾ ಎನ್​ಎಚ್​ ಸಹಾಯವಾಣಿ 1033 ಕ್ಕೆ ಕರೆ ಮಾಡಬಹುದು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net