ಆರ್ಥಿಕ ಸಂಕಷ್ಟದಿಂದ ಮಿದುಳಿಗೆ ವೃದ್ಧಾಪ್ಯ!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಆರ್ಥಿಕ ಸಂಕಷ್ಟವು ಆಧುನಿಕ ಜೀವನದಲ್ಲಿ ಮಾನಸಿಕ ಆರೋಗ್ಯ ಕ್ಷೀಣಿಸಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಇಂದಿನ ವೇಗದ ಜೀವನಶೈಲಿಯಲ್ಲಿ, ಆರ್ಥಿಕ ಅಭದ್ರತೆಯು ಮಾನಸಿಕ ಸಮಸ್ಯೆಗಳನ್ನು ಹೆಚ್ಚಿಸುವುದು ಮಾತ್ರವಲ್ಲದೆ ಯುವಕರು ಮತ್ತು ಮಧ್ಯವಯಸ್ಕರ ದೈನಂದಿನ ಜೀವನದ ಮೇಲೆಯೂ ಗಂಭೀರ ಪ್ರಭಾವ ಬೀರುತ್ತಿದೆ. ನಿರಂತರ ಆರ್ಥಿಕ ಒತ್ತಡದಿಂದಾಗಿ ರಕ್ತದೊತ್ತಡ, ಮಧುಮೇಹ ಮತ್ತು ನಿದ್ರಾಹೀನತೆಯಂತಹ ದೈಹಿಕ ತೊಂದರೆಗಳು ಬೇಗನೇ ಕಾಣಿಸಿಕೊಳ್ಳುತ್ತಿವೆ. ದೈಹಿಕ ಆರೋಗ್ಯದಷ್ಟೇ ಆರ್ಥಿಕ ಸ್ಥಿರತೆ ಮತ್ತು ಮಾನಸಿಕ ಶಾಂತಿ ಕೂಡ ಮಿದುಳಿನ ಸುದೀರ್ಘ ಆರೋಗ್ಯಕ್ಕೆ ಅತ್ಯಗತ್ಯ. ಆರ್ಥಿಕ ಸಂಕಷ್ಟವು ತಾತ್ಕಾಲಿಕ, ಆದರೆ ಅದರಿಂದಾಗುವ ಮಾನಸಿಕ ಹಾನಿಯನ್ನು ಸಕಾಲದಲ್ಲಿ ತಡೆಯುವುದು ಪ್ರತಿಯೊಬ್ಬರ ಆರೋಗ್ಯದ ದೃಷ್ಟಿಯಿಂದ ಅತಿ ಮುಖ್ಯ.

ಆರ್ಥಿಕ ಸಂಕಷ್ಟವು ನಮ್ಮ ಜೀವನಶೈಲಿಯ ಮೇಲೆ ಮಾತ್ರವಲ್ಲದೆ, ನಮ್ಮ ಮಿದುಳಿನ ಮೇಲೆಯೂ ಪ್ರಭಾವ ಬೀರಿ ಅದನ್ನು ಅವಧಿಗಿಂತ ಮುಂಚಿತವಾಗಿಯೇ ವೇಗವಾಗಿ ವೃದ್ಧಾಪ್ಯಕ್ಕೆ ತಳ್ಳುತ್ತಿದೆ. ಇದರೊಂದಿಗೆ 50ನೇ ವಯಸ್ಸಿನಲ್ಲೇ ನೆನಪಿನ ಶಕ್ತಿ ದುರ್ಬಲಗೊಳ್ಳಲು ಪ್ರಾರಂಭವಾಗುತ್ತದೆ ಮತ್ತು ವಿಷಯಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವೂ ಸಾಮಾನ್ಯಕ್ಕಿಂತ ಕಡಿಮೆಯಾಗುತ್ತದೆ.

ಯೂನಿವರ್ಸಿಟಿ ಕಾಲೇಜ್ ಲಂಡನ್​ನ (ಯುಸಿಎಲ್) ಸಂಶೋಧಕರು ನಡೆಸಿದ ಸುದೀರ್ಘ ಅಧ್ಯಯನದಲ್ಲಿ ಈ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈ ಸಂಶೋಧನೆಯು ‘ಇನೋವೇಶನ್ ಇನ್ ಏಜಿಂಗ್’ ಜರ್ನಲ್​ನಲ್ಲಿ ಪ್ರಕಟವಾಗಿದೆ. ಇದರ ಪ್ರಕಾರ, ಕೆಲಸದ ಅವಧಿಯಲ್ಲಿ (ಉದ್ಯೋಗ ಜೀವನದಲ್ಲಿ) ದೀರ್ಘಕಾಲದವರೆಗೆ ಹಣದ ಅಭಾವ ಮತ್ತು ಆರ್ಥಿಕ ಮುಗ್ಗಟ್ಟನ್ನು ಎದುರಿಸಿದ ಜನರಲ್ಲಿ 50 ವರ್ಷ ತಲುಪುವಷ್ಟರಲ್ಲಿ ಮಿದುಳಿನ ಕಾರ್ಯ ನಿರ್ವಹಣೆ ಕ್ಷೀಣಿಸುತ್ತದೆ. ಸಂಶೋಧಕರ ಪ್ರಕಾರ, ಮುಂದಿನ 30 ವರ್ಷಗಳಲ್ಲಿ ಪ್ರಪಂಚದಾದ್ಯಂತ ಮರೆವಿನ ಕಾಯಿಲೆ (ಡಿಮೆನ್ಷಿಯಾ) ಪ್ರಕರಣಗಳು ಮೂರು ಪಟ್ಟು ಹೆಚ್ಚಾಗಿ 15 ಕೋಟಿಗೆ ತಲುಪುವ ಅಂದಾಜಿದೆ. ಜನರನ್ನು ಬಡತನದಿಂದ ಹೊರತರುವುದು ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸುವುದು ಭವಿಷ್ಯದಲ್ಲಿ ಡಿಮೆನ್ಷಿಯಾ ಹಾಗೂ ಮಾನಸಿಕ ಸಮಸ್ಯೆಯ ಪ್ರಕರಣಗಳನ್ನು ತಡೆಯಲು ಪರಿಣಾಮಕಾರಿ ಮಾರ್ಗವಾಗಿದೆ.

ಪುರುಷರ ಮೇಲೆ ಹೆಚ್ಚಿನ ದುಷ್ಪರಿಣಾಮ

ಸತತ ಆರ್ಥಿಕ ಒತ್ತಡದ ಗಂಭೀರ ಪರಿಣಾಮವು ಮೂರು ವಿಶೇಷ ಗುಂಪುಗಳಲ್ಲಿ ಹೆಚ್ಚಾಗಿ ಕಂಡುಬಂದಿದೆ. ಮಹಿಳೆಯರಿಗೆ ಹೋಲಿಸಿದರೆ ನಿರಂತರ ಆರ್ಥಿಕ ಮುಗ್ಗಟ್ಟು ಎದುರಿಸಿದ ಪುರುಷರ ಮಿದುಳು ವೇಗವಾಗಿ ಕುಗ್ಗಿದೆ. ಬಾಲ್ಯದಲ್ಲಿ ಬಡ ಕುಟುಂಬಗಳಲ್ಲಿ ಬೆಳೆದು, ವಯಸ್ಕರಾದ ಮೇಲೆಯೂ ಆರ್ಥಿಕ ಸಮಸ್ಯೆ ಎದುರಿಸಿದವರ ಮಿದುಳಿನಲ್ಲಿ ನೆನಪಿನ ಶಕ್ತಿಗೆ ಸಂಬಂಧಿಸಿದ ಹಿಪೋ›ಕ್ಯಾಂಪಸ್ ಭಾಗವು ವೇಗವಾಗಿ ದುರ್ಬಲಗೊಂಡಿದೆ. ಆಲ್ಝೈಮರ್ಸ್ ಕಾಯಿಲೆಯ ಆನುವಂಶಿಕ ಅಪಾಯ ಹೊಂದಿರುವವರಲ್ಲಿ ಆರ್ಥಿಕ ಸಮಸ್ಯೆಯ ಕಾರಣದಿಂದ ಮಿದುಳಿನಲ್ಲಿ ಅಮಿಲಾಯ್ಡ್ ಪೋ›ಟೀನ್ ಶೇಖರಣೆ ಮತ್ತು ಮಿದುಳಿನ ಗಾತ್ರದ ನಷ್ಟ ವೇಗವಾಗಿ ಸಂಭವಿಸಿದೆ.

ಎಚ್ಚರಿಕೆ ಅಗತ್ಯ

ದೀರ್ಘಕಾಲದ ಆರ್ಥಿಕ ಸಂಕಷ್ಟವು ಮಿದುಳಿನ ಆರೋಗ್ಯದ ಮೇಲೆ ಅತ್ಯಂತ ಗಂಭೀರ ಪರಿಣಾಮ ಬೀರುತ್ತದೆ ಎಂದಿರುವ ಸಂಶೋಧಕರು, 1946ರ ಬ್ರಿಟನ್​ನ ‘ನ್ಯಾಷನಲ್ ಸರ್ವೆ ಆಫ್ ಹೆಲ್ತ್ ಆಂಡ್ ಡೆವಲಪ್​ವೆುಂಟ್’ ಸಮೀಕ್ಷೆಯಲ್ಲಿ ಭಾಗವಹಿಸಿದ್ದ 2,800 ಜನರ 26ರಿಂದ 53 ವರ್ಷದವರೆಗಿನ ಆದಾಯ ಮತ್ತು ಹಣಕಾಸಿನ ಸಂಕಷ್ಟಗಳ ದತ್ತಾಂಶವನ್ನು ವಿಶ್ಲೇಷಿಸಿದ್ದಾರೆ. ಅಲ್ಪಾವಧಿಯ ಹಣಕಾಸಿನ ಅಭಾವಕ್ಕಿಂತಲೂ ಹಲವು ವರ್ಷಗಳ ಕಾಲ ಸತತವಾಗಿ ಕಾಡುವ ಆರ್ಥಿಕ ಸಂಕಷ್ಟವೇ ಮಿದುಳಿನ ಆರೋಗ್ಯಕ್ಕೆ ಭಾರಿ ಪೆಟ್ಟು ನೀಡುತ್ತದೆ ಎಂಬುದು ದತ್ತಾಂಶ ವಿಶ್ಲೇಷಣೆಯಿಂದ ಸ್ಪಷ್ಟವಾಗಿದೆ. ವ್ಯಕ್ತಿಯ 70ನೇ ವಯಸ್ಸಿನಲ್ಲಿ ನಡೆಸಿದ ಮಿದುಳು ಸ್ಕಾ್ಯನ್​ಗಳಲ್ಲಿ, ನಿರಂತರ ಕಡಿಮೆ ಆದಾಯ ಹೊಂದಿದ್ದವರ ಮಿದುಳಿನಲ್ಲಿ ವೆಂಟ್ರಿಕುಲರ್ ವಾಲ್ಯೂಮ್ ಹೆಚ್ಚಿರುವುದು ಕಂಡುಬಂದಿದೆ. ಇದು ಮಿದುಳಿನ ಅಂಗಾಂಶಗಳ ಹಾನಿ ಅಂದರೆ ಮಿದುಳು ಕುಗ್ಗುತ್ತಿರುವುದರ ಪ್ರಮುಖ ಲಕ್ಷಣವಾಗಿದೆ ಎಂದು ಸಂಶೋಧಕರು ವಿವರಿಸಿದ್ದಾರೆ. ವೆಂಟ್ರಿಕಲ್ಸ್ ಎಂಬುದು ಮಿದುಳಿನ ಒಳಗಿರುವ ದ್ರವ ತುಂಬಿದ ಕಾಂಗ್​ನೇಟಿವ್​ಗಳಾಗಿದ್ದು, ಇವುಗಳ ಗಾತ್ರ ಹಿಗ್ಗುವುದು ಮಿದುಳಿನ ಅಂಗಾಂಶಗಳಿಗೆ ಹಾನಿಯಾಗುತ್ತಿರುವುದನ್ನು ಸೂಚಿಸುತ್ತದೆ.

ಅಧ್ಯಯನದ ಮುಖ್ಯ ಸಂಶೋಧನೆಗಳು

ಅವಧಿಗೆ ಮುನ್ನವೇ ವೃದ್ಧಾಪ್ಯ: ನಿರಂತರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ವ್ಯಕ್ತಿಗಳಲ್ಲಿ ಮಿದುಳು ತನ್ನ ನೈಜ ವಯಸ್ಸಿಗಿಂತ ವೇಗವಾಗಿ ಮುಪ್ಪಾಗುವುದು (ಬಲಹೀನಗೊಳ್ಳುವುದು) ಕಂಡುಬಂದಿದೆ.


50ರ ಹರಯದಲ್ಲೇ ನೆನಪಿನ ಶಕ್ತಿ ಕ್ಷೀಣ: ಸಾಮಾನ್ಯವಾಗಿ 65-70 ವರ್ಷಗಳ ನಂತರ ಕಂಡುಬರುವ ನೆನಪಿನ ಶಕ್ತಿ ಕುಂಠಿತಗೊಳ್ಳುವ ಲಕ್ಷಣಗಳು, ತೀವ್ರ ಆರ್ಥಿಕ ಒತ್ತಡದಲ್ಲಿರುವವರಲ್ಲಿ 50ನೇ ವಯಸ್ಸಿನಲ್ಲೇ ಸ್ಪಷ್ಟವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.
ಗ್ರಹಿಕಾ ಸಾಮರ್ಥ್ಯದ ಕುಸಿತ: ಹೊಸ ವಿಷಯಗಳನ್ನು ಅರ್ಥಮಾಡಿಕೊಳ್ಳುವುದು, ನಿರ್ಧಾರಗಳನ್ನು ತೆಗೆದು ಕೊಳ್ಳುವುದು, ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ದೈನಂದಿನ ಗೊಂದಲಗಳನ್ನು ನಿಭಾಯಿಸುವ ಸಾಮರ್ಥ್ಯ ಸಾಮಾನ್ಯರಿಗಿಂತ ವೇಗವಾಗಿ ಕಡಿಮೆಯಾಗುತ್ತದೆ.

ಮಿದುಳಿನ ಮೇಲೆ ಪ್ರಭಾವ

ನಿರಂತರ ಕಾರ್ಟಿಸೋಲ್ ಹಾರ್ವೇನ್ ಸ್ರವಿಕೆ: ಹಣಕಾಸಿನ ಬಿಕ್ಕಟ್ಟು ದೀರ್ಘಕಾಲದ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ಈ ಹಂತದಲ್ಲಿ ಮಿದುಳು ಕಾರ್ಟಿಸೋಲ್ ಎಂಬ ಒತ್ತಡದ ಹಾರ್ವೇನ್ ಅನ್ನು ನಿರಂತರವಾಗಿ ಸ್ರವಿಸುತ್ತದೆ. ಮಿದುಳಿನಲ್ಲಿ ನೆನಪಿನ ಶಕ್ತಿಯನ್ನು ನಿಯಂತ್ರಿಸುವ ಹಿಪ್ಪೊಕ್ಯಾಂಪಸ್ ಭಾಗದ ಕೋಶಗಳನ್ನು ಈ ಹಾರ್ವೇನ್ ಕ್ರಮೇಣ ಹಾನಿಗೊಳಿಸುತ್ತದೆ.
ನಿದ್ರಾಹೀನತೆ ಮತ್ತು ನರಗಳ ದಣಿವು: ಹಣಕಾಸಿನ ಚಿಂತೆಗಳು ರಾತ್ರಿಯ ನಿದ್ರೆಯ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ನಿದ್ರೆಯ ಕೊರತೆಯಿಂದಾಗಿ ಮಿದುಳು ತನ್ನನ್ನು ತಾನು ಪುನಶ್ಚೇತನಗೊಳಿಸಿಕೊಳ್ಳುವ ಅವಕಾಶವನ್ನು ಕಳೆದುಕೊಳ್ಳುತ್ತದೆ.
ಪೋಷಕಾಂಶಗಳ ಕೊರತೆ: ಆರ್ಥಿಕ ಸಂಕಷ್ಟದಲ್ಲಿರುವಾಗ ಪೌಷ್ಟಿಕ ಆಹಾರದ ಸೇವನೆ ಕಡಿಮೆಯಾಗಬಹುದು, ವ್ಯಾಯಾಮ ಅಥವಾ ಆರೋಗ್ಯಕರ ಜೀವನಶೈಲಿಗೆ ಗಮನ ನೀಡಲು ಸಾಧ್ಯವಾಗುವುದಿಲ್ಲ. ಇದು ಮಿದುಳಿಗೆ ರಕ್ತಸಂಚಾರವನ್ನು ಕಡಿಮೆ ಮಾಡಿ, ದೈಹಿಕ ಹಾಗೂ ಮಾನಸಿಕವಾಗಿ ಬೇಗನೇ ಮುಪ್ಪಾಗುವಂತೆ ಮಾಡುತ್ತದೆ.

ಮಾನಸಿಕ ಸಮಸ್ಯೆಗಳು ಏಕೆ ಹೆಚ್ಚುತ್ತಿವೆ?

ಖಿನ್ನತೆ ಮತ್ತು ಆತಂಕ: ನಿರಂತರ ಹಣಕಾಸಿನ ಚಿಂತೆ ಗಳು ವ್ಯಕ್ತಿಯಲ್ಲಿ ಭವಿಷ್ಯದ ಬಗೆಗಿನ ಭಯ, ಆತಂಕ ಮತ್ತು ಅಸಹಾಯಕತೆಯ ಭಾವನೆಯನ್ನು ಹೆಚ್ಚಿಸಿ, ಕ್ರಮೇಣ ತೀವ್ರ ಖಿನ್ನತೆಗೆ ದೂಡುತ್ತವೆ.


ಒಂಟಿತನ: ಹಣಕಾಸಿನ ಕೊರತೆಯಿಂದಾಗಿ ಸ್ನೇಹಿತರು ಅಥವಾ ಸಂಬಂಧಿಕರ ಕಾರ್ಯಕ್ರಮಗಳಿಂದ ದೂರವಿರಲು ಪ್ರಾರಂಭಿಸುತ್ತಾರೆ. ಇದು ಏಕಾಂಗಿತನವನ್ನು ಹೆಚ್ಚಿಸಿ ಮಾನಸಿಕ ಆರೋಗ್ಯವನ್ನು ಇನ್ನಷ್ಟು ಹಾಳುಮಾಡುತ್ತದೆ.
ಸ್ವಾಭಿಮಾನದ ಕೊರತೆ: ಸಮಾಜದಲ್ಲಿ ಅಥವಾ ಕುಟುಂಬದಲ್ಲಿ ತಮಗೆ ಸೂಕ್ತ ಆರ್ಥಿಕ ಸ್ಥಾನಮಾನ ಸಿಗುತ್ತಿಲ್ಲ ಎಂಬ ಭಾವನೆ ವ್ಯಕ್ತಿಯಲ್ಲಿ ಕೀಳರಿಮೆ ಮತ್ತು ಆತ್ಮವಿಶ್ವಾಸದ ಕೊರತೆಯನ್ನು ಉಂಟುಮಾಡುತ್ತದೆ.

ಒತ್ತಡದ ಬದುಕು

ಯುವ ಪೀಳಿಗೆಗೆ ಉನ್ನತ ಶಿಕ್ಷಣಕ್ಕಾಗಿ ಪಡೆದ ಸಾಲ ತೀರಿಸುವ ಒತ್ತಡ ಒಂದೆಡೆಯಾದರೆ, ಸೂಕ್ತ ಉದ್ಯೋಗ ಸಿಗದಿರುವುದು ಅಥವಾ ಕೆಲಸ ಕಳೆದುಕೊಳ್ಳುವ ಭಯ ಅವರಲ್ಲಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಇತರರ ‘ಆಡಂಬ ರದ ಜೀವನಶೈಲಿ’ಯನ್ನು ನೋಡಿ, ತಮ್ಮ ಬಳಿ ಹಣವಿಲ್ಲವೆಂದು ಮಾನಸಿಕವಾಗಿ ಕುಗ್ಗುವುದು.
ಮನೆ ಕಟ್ಟುವುದು, ವಾಹನ ಕೊಳ್ಳುವುದು ಅಥವಾ ಮದುವೆಯಾಗುವಂತಹ ನಿರ್ಧಾರಗಳನ್ನು ಆರ್ಥಿಕ ಮುಗ್ಗಟ್ಟಿನಿಂದಾಗಿ ಮುಂದೂಡುವುದು ಅಥವಾ ರದ್ದುಗೊಳಿಸುವುದು.
ಇನ್ನು ಸ್ಯಾಂಡ್​ವಿಚ್ ಜನರೇಷನ್ ಅಂದರೆ ಮಧ್ಯವಯಸ್ಕರಿಗೆ ವೃದ್ಧ ಪಾಲಕರ ವೈದ್ಯಕೀಯ ವೆಚ್ಚಗಳು ಮತ್ತು ಬೆಳೆಯುತ್ತಿರುವ ಮಕ್ಕಳ ಶಿಕ್ಷಣದ ವೆಚ್ಚ ಎರಡನ್ನೂ ಒಂದೇ ಸಮಯದಲ್ಲಿ ನಿರ್ವಹಿಸುವ ತೀವ್ರ ಆರ್ಥಿಕ ಹಾಗೂ ಮಾನಸಿಕ ಹೊರೆ. ಅಲ್ಲದೆ, ಭವಿಷ್ಯಕ್ಕೆ ಸೂಕ್ತ ಉಳಿತಾಯ ಇಲ್ಲದಿರುವುದು ಅಥವಾ ವೃದ್ಧಾಪ್ಯದ ದಿನಗಳ ಕುರಿತಾದ ತೀವ್ರ ಭಯ.

ತಡೆಗಟ್ಟುವಿಕೆ - ಜಾಗರೂಕತೆ

ಆರ್ಥಿಕ ಸವಾಲುಗಳು- ಪ್ರತಿಯೊಬ್ಬರ ಜೀವನ ದಲ್ಲೂ ಬರಬಹುದು, ಆದರೆ ಮಿದುಳಿನ ಆರೋಗ್ಯ ಕಾಪಾಡಿಕೊಳ್ಳಲು ಈ ಕೆಳಗಿನ ಕ್ರಮಗಳು ಸಹಕಾರಿ.
ಒತ್ತಡ ನಿರ್ವಹಣೆ: ಯೋಗ, ಧ್ಯಾನ ಹಾಗೂ ದೈಹಿಕ ವ್ಯಾಯಾಮಗಳು ಕಾರ್ಟಿಸೋಲ್ ಮಟ್ಟ ವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಸಾಮಾಜಿಕ ಬೆಂಬಲ: ಆರ್ಥಿಕ ಸಮಸ್ಯೆಯನ್ನು ಗೌಪ್ಯವಾಗಿಟ್ಟುಕೊಂಡು ಒಳಗೊಳಗೇ ಕೊರಗುವ ಬದಲು, ಕುಟುಂಬದ ನಿಕಟ ಸದಸ್ಯರು ಅಥವಾ ವಿಶ್ವಾಸಾರ್ಹ ಸ್ನೇಹಿತರೊಂದಿಗೆ ಮುಕ್ತವಾಗಿ ಮಾತನಾಡಿ. ನಿಮ್ಮ ಕಷ್ಟಗಳನ್ನು ಹಂಚಿಕೊಳ್ಳುವುದು ಮತ್ತು ಮಾನಸಿಕ, ಭಾವನಾತ್ಮಕ ಬೆಂಬಲವನ್ನು ಪಡೆಯುವುದು ಒತ್ತಡದ ತೀವ್ರತೆಯನ್ನು ತಗ್ಗಿಸುತ್ತದೆ.
ಸಾಕಷ್ಟು ನಿದ್ರೆ: ಕನಿಷ್ಠ 7ರಿಂದ 8 ಗಂಟೆಗಳ ನಿದ್ರೆ ಮಿದುಳಿನ ನರಕೋಶಗಳ ಚೇತರಿಕೆಗೆ ನೆರವಾಗುತ್ತದೆ.
ಮಾನಸಿಕ ಚಟುವಟಿಕೆಗಳು: ಹೊಸ ಕೌಶಲ ಕಲಿಯುವುದು, ಪತ್ರಿಕೆ/ಪುಸ್ತಕ ಓದುವುದು ಅಥವಾ ಒಗಟುಗಳನ್ನು ಬಿಡಿಸುವುದರಿಂದ ಮಿದುಳಿನ ಕಾರ್ಯಕ್ಷಮತೆ ಚುರುಕಾಗಿರುತ್ತದೆ.

ವಿತ್ತೀಯ ಪರಿಹಾರೋಪಾಯಗಳು

ಬಜೆಟ್ ಯೋಜನೆ: ದಿನನಿತ್ಯದ ಮತ್ತು ಮಾಸಿಕ ಖರ್ಚುಗಳ ಸ್ಪಷ್ಟ ಬಜೆಟ್ ರೂಪಿಸಿಕೊಳ್ಳಿ. ಅನಗತ್ಯ ಅಥವಾ ಪ್ರದರ್ಶನಕಾರಿ ಖರ್ಚುಗಳನ್ನು ಸಂಪೂರ್ಣವಾಗಿ ನಿಯಂತ್ರಿಸಿ.


ತುರ್ತು ನಿಧಿ: ಕನಿಷ್ಠ 3ರಿಂದ 6 ತಿಂಗಳ ದೈನಂದಿನ ಖರ್ಚಿಗೆ ಆಗುವಷ್ಟು ಹಣವನ್ನು ತುರ್ತು ನಿಧಿಯನ್ನು (ಎಮೆರ್ಜೆನ್ಸಿ ಫಂಡ್) ಸಣ್ಣ ಪ್ರಮಾಣದಲ್ಲಾದರೂ ಹಂತ-ಹಂತವಾಗಿ ಎತ್ತಿಡಿ.
ಸಾಲ ನಿರ್ವಹಣೆ: ಹೆಚ್ಚಿನ ಬಡ್ಡಿ ಇರುವ ಸಾಲಗಳನ್ನು (ಕ್ರೆಡಿಟ್ ಕಾರ್ಡ್, ಪರ್ಸನಲ್ ಲೋನ್) ಮೊದಲು ತೀರಿಸಲು ಆದ್ಯತೆ ನೀಡಿ. ಸಾಲದ ಹೊರೆ ಹೆಚ್ಚಾದಾಗ ಹಣಕಾಸು ಸಲಹೆಗಾರರ ನೆರವು ಪಡೆಯಿರಿ.
ಹೆಚ್ಚುವರಿ ಆದಾಯದ ಮೂಲ: ಸಮಯವಿದ್ದರೆ ಪರ್ಯಾಯ ಕೌಶಲಗಳನ್ನು ಕಲಿತು ಅರೆಕಾಲಿಕ ಅಥವಾ ಫ್ರೀಲಾನ್ಸ್ ಕೆಲಸಗಳ ಮೂಲಕ ಸಣ್ಣಮಟ್ಟದ ಹೆಚ್ಚುವರಿ ಆದಾಯದ ಹರಿವನ್ನು ಕಂಡುಕೊಳ್ಳಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net