ರಿಯಲ್ ಎಸ್ಟೇಟ್ ಕ್ಷೇತ್ರ|ಪರಿಸರ ಸ್ನೇಹಿ ಕಟ್ಟಡ ಕರ್ನಾಟಕ ನಂ.2

green house jan 24 2020
Published on

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಪ್ರಗತಿಯತ್ತ ಮುಖ ಮಾಡುತ್ತಿರುವ ಕರ್ನಾಟಕಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಪರಿಸರ ಸ್ನೇಹಿ ಕಟ್ಟಡಗಳ ವಿನ್ಯಾಸ ರೂಪಿಸುವಲ್ಲಿ ಮುಂಚೂಣಿಯಲ್ಲಿರುವ ರಾಜ್ಯವು ದೇಶದಲ್ಲೇ 2ನೇ ಸ್ಥಾನ ಪಡೆದಿದೆ.

ಗ್ರೀನ್ ಬಿಜಿನೆಸ್ ಸರ್ಟಿಫಿಕೇಷನ್ ಇಂಕ್(ಜಿಬಿಸಿಐ) ಪ್ರಕಟಿಸಿರುವ ದೇಶದ ಟಾಪ್ 10 ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕವು 2ನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 301 ಯೋಜನೆಗಳಿದ್ದು, 96.91 ಲಕ್ಷ ಚ.ಮೀ.ವಿಸ್ತೀರ್ಣದ ಜಾಗವನ್ನು ನಿರ್ವಿುಸುವ ಗುರಿ ಹೊಂದಲಾಗಿದೆ.

ಹಸಿರು ಕಟ್ಟಡಗಳ ನಿರ್ಮಾಣ ಕ್ಷೇತ್ರದಲ್ಲಿ ರಾಜ್ಯವು ಇತರ ರಾಜ್ಯಗಳಿಗಿಂತ ಮುಂಚೂಣಿಯಲ್ಲಿದೆ. ಇಂತಹ ಕಟ್ಟಡಗಳ ಹಾಗೂ ಜಾಗಕ್ಕೆ ಸಂಬಂಧಿಸಿ ಲೀಡ್ ಪ್ರಮಾಣ ಪತ್ರವನ್ನು ವಿತರಿಸಲಾಗುತ್ತದೆ. ಅಲ್ಲದೆ, ರಾಜ್ಯವು ಆರ್ಥಿಕ ಪ್ರಗತಿ ಹಾಗೂ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡುತ್ತಿದ್ದು, ನಾಗರಿಕರಿಗೆ ಆರೋಗ್ಯ ಹಾಗೂ ಸಮರ್ಪಕವಾದ ಕಟ್ಟಡ ಸೌಲಭ್ಯವನ್ನು ಒದಗಿಸುವಲ್ಲಿ ದೃಢ ಹೆಜ್ಜೆ ಇಟ್ಟಿದೆ.

ಭಾರತದಲ್ಲಿ 1,400 ಕ್ಕೂ ಹೆಚ್ಚು ಲೀಡ್ ಪ್ರಮಾಣೀಕೃತ ಕಟ್ಟಡಗಳಿದ್ದು, ಈ ಪೈಕಿ ಶಾಲೆಗಳು, ಆಸ್ಪತ್ರೆಗಳು, ಕಚೇರಿಗಳು ಮತ್ತು ವಸತಿ ಸಮುಚ್ಚಯಗಳಿವೆ. ಈ ಕಟ್ಟಡಗಳು ಜನರಿಗೆ ಆರೋಗ್ಯಕರವಾದ ವಾತಾವರಣವನ್ನು ನೀಡುತ್ತವೆ. ಇದರ ಜತೆಗೆ ಇಂಧನ ಮತ್ತು ನೀರು ಉಳಿತಾಯ ಮಾಡುತ್ತವೆ. ವಾಯು ಮಾಲಿನ್ಯದ ಪ್ರಮಾಣವನ್ನು ಕಡಿಮೆ ಮಾಡುತ್ತವೆ. ಅಲ್ಲದೆ, ಗ್ರೀನ್ ಬಿಲ್ಡಿಂಗ್ ಕ್ಷೇತ್ರದಲ್ಲಿ ಭಾರತ ನಾಯಕನ ಸ್ಥಾನದಲ್ಲಿದೆ. ಕಟ್ಟಡಗಳು ಮತ್ತು ಜಾಗಕ್ಕೆ ಸಂಬಂಧಿಸಿದಂತೆ ಲೀಡ್ ಪ್ರಮಾಣವನ್ನು ನೀಡಲಾಗುತ್ತದೆ. ಈ ವಿಚಾರದಲ್ಲಿ ಭಾರತ ಆರ್ಥಿಕ ಪ್ರಗತಿಯತ್ತ ಮುನ್ನುಗ್ಗುತ್ತಿದೆ ಎಂದು ಜಿಬಿಸಿಐನ ಸಿಇಒ ಮಹೇಶ್ ರಾಮಾನುಜಂ ಹೇಳಿದರು.

ಏನಿದು ಲೀಡ್?

ಲೀಡರ್​ಷಿಪ್ ಇನ್ ಎನರ್ಜಿ ಆಂಡ್ ಎನ್ವಿರಾನ್​ವೆುಂಟಲ್ ಡಿಸೈನ್(ಲೀಡ್) ಸುಸ್ಥಿರತೆಯ ಸಂಕೇತವಾಗಿದೆ. ಇದರ ಮೂಲಕ ಕಡಿಮೆ ಇಂಗಾಲ ಹೊರಸೂಸುವ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು, ಸಂಪನ್ಮೂಲಗಳನ್ನು ಸಂರಕ್ಷಿಸುವುದು ಮತ್ತು ವೆಚ್ಚವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ. ಈ ಮೂಲಕ ಸುಸ್ಥಿರವಾದ ಪದ್ಧತಿಗಳಿಗೆ ಆದ್ಯತೆ ನೀಡುವುದು ಮತ್ತು ಆರೋಗ್ಯಕರವಾದ ವಾತಾವರಣವನ್ನು ಸೃಷ್ಟಿಸಲಾಗುತ್ತದೆ. ಆದ್ದರಿಂದ, ಈ ಸಂಸ್ಥೆಯು ಕಟ್ಟಡಗಳನ್ನು ಅಧ್ಯಯನ ನಡೆಸಿ ‘ಲೀಡ್’ ಪ್ರಮಾಣ ಪತ್ರವನ್ನು ನೀಡುತ್ತದೆ.

ಹೇಗೆ ಅಧ್ಯಯನ?

ನೀರು ಬಳಕೆ, ತ್ಯಾಜ್ಯ ನಿರ್ವಹಣೆ, ಕಟ್ಟಡ ನಿವಾಸಿಗಳ ಆರೋಗ್ಯದ ಮೇಲೆ ಕೇಂದ್ರೀಕರಿಸುವುದು, ಕಟ್ಟಡ ಒಳಾಂಗಣ ಪರಿಸರ ಗುಣಮಟ್ಟ, ವಾತಾವರಣ, ಸ್ಥಳ ಮತ್ತು ಸಾರಿಗೆ ಸೇರಿ ಮತ್ತಿತರ ಅಂಶಗಳ ಆಧಾರದ ಮೇಲೆ ಲೀಡ್ ಪ್ರಮಾಣ ಪತ್ರ ನೀಡಲಾಗುತ್ತದೆ.

ಗ್ರೀನ್ ಬಿಲ್ಡ್ ಇಂಡಿಯಾ ಸಮಾವೇಶ

ಮುಂದಿನ ತಿಂಗಳು ಬೆಂಗಳೂರಿನಲ್ಲಿ ಗ್ರೀನ್ ಬಿಲ್ಡ್ ಇಂಡಿಯಾ ಸಮಾವೇಶ ನಡೆಯಲಿದೆ. ಇದರಲ್ಲಿ ದೇಶದ ಗ್ರೀನ್ ಬಿಲ್ಡಿಂಗ್ ಪರಿಣತರು ಪಾಲ್ಗೊಳ್ಳಲಿದ್ದಾರೆ. ಸುಸ್ಥಿರ ಭವಿಷ್ಯವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪರಸ್ಪರ ಯೋಜನೆ ಮತ್ತು ರೂಪುರೇಷೆಗಳ ಬಗ್ಗೆ ಚರ್ಚೆಗಳು ನಡೆಯಲಿವೆೆ.

ಮತ್ತಷ್ಟು ಆದಾಯ

ಕಟ್ಟಡಗಳ ವಿನ್ಯಾಸ ರೂಪಿಸುವಲ್ಲಿ ಮುಂಚೂಣಿಯಲ್ಲಿರುವ ರಾಜ್ಯಕ್ಕೆ ಜಿಬಿಸಿಐ ನೀಡಿರುವ ಲೀಡ್ ಪ್ರಮಾಣ ಪತ್ರದಿಂದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮತ್ತಷ್ಟು ಆದಾಯ ಹೆಚ್ಚುವ ಸಾಧ್ಯತೆ ಇದೆ. ಮನೆ ಖರೀದಿದಾರರು ಗುಣಮಟ್ಟ ಮನೆಗಳ ಖರೀದಿಗೆ ಇನ್ನಷ್ಟು ಒಲವು ತೋರಲಿದ್ದಾರೆ. ಅಲ್ಲದೆ, ಬಂಡವಾಳದಾರರು ಈ ಕ್ಷೇತ್ರದಲ್ಲಿ ಹೆಚ್ಚು ಹಣ ಹೂಡಿಕೆ ಮಾಡಲು ಮುಂದೆ ಬರಲಿದ್ದಾರೆ.

ಬೇಲೂರು ಹರೀಶ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net