

ಸತೀಶ್ ಕೆ.ಬಳ್ಳಾರಿ
ಬೆಂಗಳೂರು: ಆರೋಗ್ಯ, ಆರ್ಥಿಕತೆ, ಉದ್ಯೋಗದ ಮೇಲೆ ಕವಿದಿರುವ ಕರೊನಾ ಗ್ರಹಣದ ಪರಿಣಾಮ ನಿತ್ಯಜೀವನಕ್ಕೂ ಚಾಚಿದೆ. ದೇಶದ ಆರ್ಥಿಕ ಪರಿಸ್ಥಿತಿ ಬುಡಮೇಲಾಗಿರುವ ಸಂದರ್ಭದಲ್ಲಿ ದಿನಬಳಕೆ ವಸ್ತುಗಳ ಬರ ಶುರುವಾಗಿದೆ. ಎರಡು ತಿಂಗಳ ಲಾಕ್ಡೌನ್ ಅವಧಿಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ಪಾದನೆ ಹಾಗೂ ವಿದೇಶಿ ಆಮದು ಸ್ಥಗಿತವಾಗಿರುವ ಜತೆಗೆ ಇದೀಗ ಜನರೇ ಅಲ್ಲಲ್ಲಿ ಘೋಷಿಸಿಕೊಂಡಿರುವ ಸ್ವಯಂ ಲಾಕ್ಡೌನ್ನಿಂದಾಗಿ ಗೃಹೋಪಯೋಗಿ ವಸ್ತುಗಳ ಅಭಾವ ತಾರಕಕ್ಕೇರಿದೆ. ಪರಿಣಾಮ ಜನರಿಗೆ ಬೆಲೆ ಏರಿಕೆ ಹೊಡೆತ ಬೀಳುವ ಆತಂಕ ಎದುರಾಗಿದೆ.
ಪ್ರಮುಖವಾಗಿ ಎಲೆಕ್ಟ್ರಿಕ್ ವಸ್ತುಗಳು, ಮನೆಯಲ್ಲಿ ನಿತ್ಯ ಬಳಸುವ ತಟ್ಟೆ, ಲೋಟ, ಮಕ್ಕಳ ಆಟದ ಸಾಮಗ್ರಿ, ಮನೆ ಅಲಂಕಾರಿಕ ವಸ್ತುಗಳ ಉತ್ಪಾದನೆ ಕುಂಠಿತವಾಗಿದೆ. ಇದಲ್ಲದೆ ಪ್ರತಿಷ್ಠಿತ ಕಂಪನಿಗಳ ನೀರಿನ ಬಾಟಲಿ, ಜ್ಯೂಸ್, ಕಾಫಿ, ಟೀ, ಸಾಂಬಾರು ಪದಾರ್ಥಗಳ ಉತ್ಪಾದನೆಯೂ ಕುಸಿದಿದೆ. ಕಾರ್ವಿುಕರ ಅಲಭ್ಯತೆ, ಉತ್ಪಾದಿತ ವಸ್ತುಗಳ ಸಾಗಾಟ ಸಮಸ್ಯೆ, ಬೇಡಿಕೆ ಕುಸಿತ, ದುಪ್ಪಟ್ಟು ಉತ್ಪಾದನಾ ವೆಚ್ಚ ಮೊದಲಾದ ತೊಂದರೆಗಳನ್ನು ಎದುರಿಸುತ್ತಿರುವ ಕೈಗಾರಿಕಾ ಕ್ಷೇತ್ರ ಸಂಪೂರ್ಣವಾಗಿ ಬಡವಾಗಿದೆ.
ಶೇ.90 ಕೈಗಾರಿಕೆಗಳು ಈಗ ಆರಂಭಗೊಂಡಿದ್ದರೂ ಪೂರ್ಣಪ್ರಮಾಣದಲ್ಲಿ ಉತ್ಪಾದನೆ ಆರಂಭಿಸಿಲ್ಲ. ವಲಸೆ ಕಾರ್ವಿುಕರು ಊರು ಸೇರಿರುವುದರಿಂದ ಕಾರ್ವಿುಕರ ಕೊರತೆ ಹಾಗೂ ಕಚ್ಚಾ ವಸ್ತುಗಳ ಕೊರತೆ ತಾರಕಕ್ಕೇರಿದೆ. ಪರಿಣಾಮ ಉತ್ಪಾದನೆ ನಿಂತಿದೆ. ಡಿಸೆಂಬರ್ವರೆಗೂ ಕೈಗಾರಿಕೆಗಳು ಚೇತರಿಕೆ ಕಾಣುವುದು ಅನುಮಾನ ಎಂಬುದು ತಜ್ಞರ ಅಭಿಪ್ರಾಯ.
ಕಾರಣಗಳೇನು? *ಬಹುತೇಕ ಕಡೆ ಉತ್ಪಾದನೆ ಆಗುತ್ತಿಲ್ಲ *ವಿದೇಶಿ ಆಮದು ಸಂಪೂರ್ಣ ಸ್ಥಗಿತ *ಅಕ್ಕಪಕ್ಕದ ರಾಜ್ಯಗಳಿಂದಲೂ ಪೂರೈಕೆ ಇಲ್ಲ *ಲಾಕ್ಡೌನ್ ನಿಯಮ ಮುಂದುವರಿಕೆ *ವಸ್ತುಗಳ ಸಾಗಾಟ ಸಮಸ್ಯೆ *ಮಾರುಕಟ್ಟೆಗಳು ಸೀಲ್ಡೌನ್ ಆಗಿರುವುದು
ಸ್ವಯಂ ನಿರ್ಬಂಧ: ಸ್ವಯಂ ಲಾಕ್ಡೌನ್ನಿಂದ ರಾಜ್ಯದ ಪ್ರಮುಖ ಮಾರುಕಟ್ಟೆಗಳಾದ ಬೆಂಗಳೂರಿನ ಚಿಕ್ಕಪೇಟೆ ಹೋಲ್ ಸೇಲ್ ಮಾರುಕಟ್ಟೆ, ಕೃ. ರಾ. ಮಾರುಕಟ್ಟೆ, ಮಲ್ಲೇಶ್ವರ, ಯಶವಂತಪುರ, ಮಂಗಳೂರು ಸ್ಟೇಟ್ ಬ್ಯಾಂಕ್, ದಾವಣಗೆರೆ ಕಾಟನ್ ಬಜಾರ್, ಮೈಸೂರು, ಬೀದರ್, ಹುಬ್ಬಳ್ಳಿ-ಧಾರವಾಡ, ಹಾವೇರಿ, ಶಿವಮೊಗ್ಗ, ಕೊಡಗು, ಬಳ್ಳಾರಿ, ಹಾಸನ, ಕೊಡಗು, ಚಿಕ್ಕಮಗಳೂರು, ಕಾರವಾರ ಮುಂತಾದವು ಮಧ್ಯಾಹ್ನದವರೆಗಷ್ಟೇ ವ್ಯಾಪಾರ ವಹಿವಾಟು ನಡೆಸುತ್ತಿವೆ. ಮತ್ತೆ ಕೆಲವೆಡೆ ಸಂಪೂರ್ಣ ಬಂದ್ ಮಾಡಲಾಗಿದೆ. ಇದರಿಂದಾಗಿ ಉತ್ಪನ್ನಗಳ ಸಾಗಾಟಕ್ಕೂ ತೊಂದರೆಯಾಗಿದೆ.
ಯಾವ ವಸ್ತುಗಳಿಗೆ ಅಭಾವ?: ಹಾರ್ಡ್ವೇರ್ ಉತ್ಪನ್ನ, ಎಲೆಕ್ಟ್ರಿಕ್ ಸಾಮಗ್ರಿ, ವಿಶೇಷ ಬಟ್ಟೆಗಳು, ಚಪ್ಪಲಿ, ಶೂ, ಛತ್ರಿ, ಸೊಳ್ಳೆ ಬ್ಯಾಟ್, ಆಟದ ಸಾಮಗ್ರಿ, ಬಲ್ಬ್, ವಿವಿಧ ಬಗೆಯ ಗಾಜು ಮತ್ತು ನೀರು ಕುಡಿಯುವ ಬಾಟಲಿ, ಲೋಹದ ಮತ್ತು ಪಿಂಗಾಣಿ ಪ್ಲೇಟ್ಗಳು, ಮಹಿಳೆಯರು ಮತ್ತು ಪುರುಷರ ಬ್ಯಾಗ್, ಪ್ರಸಾಧನ ಸಾಮಗ್ರಿ, ಮನೆಯ ಅಲಂಕಾರಿಕ ಸಾಮಗ್ರಿ, ಸ್ವಚ್ಛತಾ ಸಾಮಗ್ರಿ, ಜ್ಯೂಸ್, ಕಾಫಿ, ಟೀ, ಸಾಂಬಾರು ಪದಾರ್ಥ
ಬೆಲೆ ದುಪ್ಪಟ್ಟು ಸಾಧ್ಯತೆ: ಮಾರುಕಟ್ಟೆಗಳನ್ನು ತಾತ್ಕಾಲಿಕ ಅವಧಿಗೆ ಮುಚ್ಚುವುದರಿಂದ ಅಗತ್ಯ ವಸ್ತುಗಳ ಕೊರತೆ ಉಂಟಾಗಲಿದೆ. ಇದರಿಂದ ವ್ಯಾಪಾರ ಕುಂಠಿತವಾಗಿ, ವಸ್ತುಗಳನ್ನು ಉತ್ಪಾದಿಸುವ ಕೈಗಾರಿಕೆ ಮತ್ತು ಕಾರ್ಖಾನೆಗಳಿಗೆ ಆರ್ಡರ್ ಸಿಗುವುದಿಲ್ಲ. ಉತ್ಪಾದನೆ ಕುಂಠಿತಗೊಂಡ ವೇಳೆ ಒಂದೊಮ್ಮೆ ದಿಢೀರನೆ ಮಾರುಕಟ್ಟೆಗಳು ವ್ಯಾಪಾರ ವಹಿವಾಟು ಆರಂಭಿಸಿ ಬೇಡಿಕೆ ಹೆಚ್ಚಾದರೆ ಪೂರೈಕೆ ಇಲ್ಲದೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಹಾಳಾಗುವ ಆತಂಕ: ಲಾಕ್ಡೌನ್ನಿಂದಾಗಿ ಅಂಗಡಿ ಬಾಗಿಲು ತೆರೆಯದ ಕಾರಣಕ್ಕೆ ಕೆಲವೊಂದು ಪದಾರ್ಥಗಳು ಮಾರಾಟವಾಗದೆ ಅವಧಿ ಮೀರಿ ಹಾಳಾಗಿವೆ. ವ್ಯಾಪಾರ ವಹಿವಾಟಿಗೆ ರಾಜ್ಯ ಸರ್ಕಾರ ಅನುಮತಿ ಕೊಟ್ಟಿದೆ. ಆದರೆ, ಕರೊನಾ ಸೋಂಕಿಗೆ ಭಯಪಟ್ಟು ಜನರೇ ಬಹುತೇಕ ಕಡೆ ಸ್ವಯಂ ಲಾಕ್ಡೌನ್ ಘೋಷಿಸಿಕೊಂಡಿರುವುದರಿಂದ ಮಾರಾಟ ಸಾಧ್ಯವಾಗುತ್ತಿಲ್ಲ.
ಸ್ಮಾರ್ಟ್ಫೋನ್, ಟಿವಿ ಕೊರತೆ: ಭಾರತಕ್ಕೆ ಶೇ.75 ಟಿವಿಗಳು ಹಾಗೂ ಶೇ.85 ಸ್ಮಾರ್ಟ್ಫೋನ್ಗಳು ಚೀನಾದಿಂದ ಆಮದಾಗುತ್ತಿತ್ತು. ಅಲ್ಲದೇ ಏರ್ ಕಂಡಿಷನ್ ಯಂತ್ರಗಳು, ವಾಷಿಂಗ್ ಮಷಿನ್, ಎಲೆಕ್ಟ್ರಿಕ್ ವಸ್ತುಗಳು ಇತ್ಯಾದಿ ಗೃಹೋಪಯೋಗಿ ವಸ್ತುಗಳು ಹೊರದೇಶಗಳಿಂದ ಬರುತ್ತಿದ್ದವು. ಕರೊನಾ ಹಿನ್ನೆಲೆಯಲ್ಲಿ ಇದೆಲ್ಲವೂ ಈಗ ಸ್ಥಗಿತಗೊಂಡಿವೆ.