ಅಡಕೆ ಮಾನ ಕಾಪಾಡೋದು ಹೇಗೆ?; ಬ್ಯಾಂಕ್ ಮೂಲಕವೇ ಹಣಕಾಸು ವಹಿವಾಟು ನಡೆಯಲಿ..

CH F
Published on

ಅಡಕೆಗೆ ಈಗ ಚಿನ್ನದಂತಹ ಧಾರಣೆ ಬಂದಿದೆ. ಈ ‘ಮಾನ’ವನ್ನು ಉಳಿಸಿಕೊಳ್ಳುವುದು ಹೇಗೆ? ಬೆಲೆ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ಅಡಕೆ ಸಹಕಾರ ಸಂಘಗಳ ಪಾತ್ರವೇನು? ಸರ್ಕಾರ ಯಾವ ರೀತಿ ನೆರವಾಗಬೇಕು? ಬೆಳೆಗಾರರ ಜೀವನಶೈಲಿ, ಮಾನಸಿಕತೆ ಹೇಗಿರಬೇಕು? ಮಾರುಕಟ್ಟೆ ವ್ಯವಸ್ಥೆಯಲ್ಲಿ ಆಗಬೇಕಿರುವ ಬದಲಾವಣೆಗಳೇನು? ಮುಂತಾದ ಅಂಶಗಳ ಬಗ್ಗೆ ರ್ಚಚಿಸಲು ‘ವಿಜಯವಾಣಿ’ ಕ್ಲಬ್​ಹೌಸ್ ಸಂವಾದ ಏರ್ಪಡಿಸಿತ್ತು. ಹಲವು ಗಣ್ಯರು ಸಂವಾದದಲ್ಲಿ ಭಾಗವಹಿಸಿ ಅನೇಕ ಸಂಗತಿಗಳ ಮೇಲೆ ಬೆಳಕು ಚೆಲ್ಲಿದರು.

ಬೆಳೆ ವಿಸ್ತರಣೆ ತಡೆ ಕಷ್ಟಸಾಧ್ಯ

ಅಡಕೆ ಬೆಳೆ ಪ್ರದೇಶ ವಿಸ್ತರಣೆಯಾಗುತ್ತಿರುವುದರ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತವೆ. ಆದರೆ ಜಲಾಶಯದ ಅಚ್ಚುಕಟ್ಟು ಪ್ರದೇಶವೇ ಆಗಲಿ, ಮಲೆನಾಡಿನ ಭತ್ತದ ಗದ್ದೆ ಅಥವಾ ಬೇರೆ ಕಡೆಯೇ ಆಗಲಿ ರೈತರು ತಮಗೆ ಬೇಕಾದ ಬೆಳೆ ಬೆಳೆಯಲು ಸ್ವತಂತ್ರರು. ಇಂಥದ್ದೇ ಬೆಳೆ ಬೆಳೆಯಿರಿ ಎಂದು ಅವರಿಗೆ ಸೂಚಿಸುವ ಅಧಿಕಾರ ಯಾರಿಗೂ ಇಲ್ಲ. ಹಾಗೆ ಮಾಡಲು ಯತ್ನಿಸಿದರೆ ಬೆಳೆಗಾರರಲ್ಲೇ ಒಡಕು ಮೂಡುವ ಸಾಧ್ಯತೆ ಇದೆ. ಬೆಳೆಗಾರರಲ್ಲಿ ಒಗ್ಗಟ್ಟು ಅಗತ್ಯ. ಒಂದಿಷ್ಟು ಪ್ರದೇಶ ವಿಸ್ತರಣೆಯಾದರೂ ತಡೆದುಕೊಳ್ಳೋಣ. ಕರೊನಾ ಅವಧಿಯಲ್ಲೂ ಅಡಕೆಗೆ ಉತ್ತಮ ಬೆಲೆ ಬಂದಿದೆ. ಇದೇ ಧಾರಣೆ ಉಳಿಯಬೇಕೆಂಬುದು ನಮ್ಮೆಲ್ಲರ ಬಯಕೆ. ಹಾಗೆಂದು ಬೆಳೆಗಾರರು ಜೀವನಶೈಲಿಯನ್ನು ದೊಡ್ಡ ಮಟ್ಟದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಒಳಿತಲ್ಲ. ಅದ್ದೂರಿ ಜೀವನಕ್ಕೆ ಒಗ್ಗಿಕೊಂಡರೆ ಬೆಲೆಯಲ್ಲಿ ಸ್ವಲ್ಪ ಕುಸಿತವಾದರೂ ಬೆಳೆಗಾರರು ಕಷ್ಟಕ್ಕೆ ಸಿಲುಕುತ್ತಾರೆ. ನಾನು 40 ವರ್ಷದಿಂದ ಅಡಕೆ ಮಾರುಕಟ್ಟೆಯನ್ನು ಗಮನಿಸುತ್ತಿದ್ದೇನೆ. ಬೆಲೆ ಏರಿಕೆ-ಇಳಿಕೆ ಬಗ್ಗೆ ಅವರವರ ಮೂಗಿನ ನೇರಕ್ಕೆ ವಿಶ್ಲೇಷಣೆ ಮಾಡಬಹುದಷ್ಟೇ.

ಸಂಶೋಧನೆ ನಡೆದಿದೆ: ಅಡಕೆ ಪರ್ಯಾಯ ಬಳಕೆ, ಗುಣಮಟ್ಟ ನಿಗದಿ, ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬ ಅಂಶಗಳ ಬಗ್ಗೆ ಸಂಶೋಧನೆ ನಡೆದು, ಅದರ ವರದಿಯನ್ನು ಈ ಹಿಂದೆ ಕೇಂದ್ರ ಆರೋಗ್ಯ ಸಚಿವರಾಗಿದ್ದ ಜೆ.ಪಿ.ನಡ್ಡಾ ಅವರಿಗೆ ನೀಡಲಾಗಿದೆ. ಮುಂದೆ ಸುಪ್ರೀಂಕೋರ್ಟ್ ಕಲಾಪದ ವೇಳೆ ಅದು ಉಪಯೋಗಕ್ಕೆ ಬರಲಿದೆ. ಅಡಕೆ ಕೊಳೆರೋಗಕ್ಕೆ ಈಗಿರುವ ವ್ಯವಸ್ಥೆಯಲ್ಲಿ ಬೋಡೋ ದ್ರಾವಣವೊಂದೇ ಪರಿಣಾಮಕಾರಿ.

| ಎಚ್.ಎಸ್.ಮಂಜಪ್ಪ ರಾಜ್ಯ ಅಡಕೆ ಮಾರಾಟ ಸಹಕಾರ ಮಹಾಮಂಡಳ ಅಧ್ಯಕ್ಷ

ಬೆಲೆ ಹೆಚ್ಚಳ ತಂದ ಸಂತಸ-ಆತಂಕ

ಧಾರಣೆಯ ದಿಢೀರ್ ಏರಿಕೆಯಿಂದ ಸಂತಸದ ಜತೆಗೆ ಆತಂಕವೂ ಇದೆ. 2014ರಲ್ಲೂ ಅಡಕೆಗೆ ಇದೇ ಧಾರಣೆಯಿತ್ತು. ಅಡಕೆ ಬೆಲೆಯು ಬೇಡಿಕೆ ಹಾಗೂ ಪೂರೈಕೆ ಮೇಲೆ ನಿಗದಿಯಾಗುತ್ತದೆ. ಆಮದು ಅಡಕೆಗೆ ಬ್ರೇಕ್ ಹಾಕಿದ್ದೇ ಈಗಿನ ಬೆಲೆ ಹೆಚ್ಚಳಕ್ಕೆ ಕಾರಣ. ಬೆಲೆ ಹೆಚ್ಚಿದರೂ ಬೆಳೆಗಾರರು ಅಡಕೆ ಮಾರಲು ಮುಂದಾಗುತ್ತಿಲ್ಲ. ಐದು ಸಾವಿರ ಮೂಟೆ ಮಾರಾಟಕ್ಕೆ ಬಂದರೆ ಒಂದೂವರೆ ಸಾವಿರ ಮೂಟೆ ಮಾತ್ರ ಬಿಡುತ್ತಾರೆ. ಎಪಿಎಂಸಿ ಉಳಿದರೆ ಮಾತ್ರ ಮಾರುಕಟ್ಟೆ ಉಳಿಯುತ್ತದೆ. ಎಪಿಎಂಸಿಯಲ್ಲಿ ನಿರ್ಧಾರವಾಗುವ ಬೆಲೆ ಮೇಲೆ ಹೊರಗೆ ಧಾರಣೆ ನಿಗದಿಯಾಗುತ್ತದೆ. ಎಪಿಎಂಸಿ ಸೆಸ್ 60 ಪೈಸೆ ಇದೆ. ಇದನ್ನು ಶೂನ್ಯಕ್ಕೆ ಇಳಿಸಬೇಕು. ಬಜೆಟ್​ನಲ್ಲಿ ಎಪಿಎಂಸಿಗೆ ಹೆಚ್ಚುವರಿ 100 ಕೋಟಿ ರೂ. ಬಿಡುಗಡೆ ಮಾಡಿದರೆ ಸೆಸ್ ನಷ್ಟವನ್ನು ಭರಿಸಬಹುದು. ಅಡಕೆ ಸಾಗಣೆ ಮೇಲೆ ಸೂಕ್ತ ನಿಯಂತ್ರಣ ಅಗತ್ಯ. ಗುಟ್ಖಾ ಕಂಪನಿಗಳ ಮೌಲ್ಯವರ್ಧಿತ ಉತ್ಪನ್ನಗಳ ಮೇಲೆ ವಿಧಿಸುತ್ತಿರುವ ತೆರಿಗೆ ಕಡಿತಗೊಳಿಸಬೇಕು. ಈ ದುಬಾರಿ ತೆರಿಗೆ ವ್ಯವಸ್ಥೆಯೇ ತೆರಿಗೆ ವಂಚನೆಗೆ ದಾರಿಯಾಗುತ್ತಿದೆ. ಅಡಕೆಗೆ ಸಂಬಂಧಿಸಿದ ಎಲ್ಲ ಹಣದ ವ್ಯವಹಾರಗಳು ಬ್ಯಾಂಕ್ ಮೂಲಕ ಸಕ್ರಮವಾಗಿ ನಡೆದರೆ ಮಾರುಕಟ್ಟೆ ಯಥಾಸ್ಥಿತಿ ಕಾಯ್ದುಕೊಳ್ಳಬಹುದು.

| ಡಿ.ಎಂ.ಶಂಕರಪ್ಪ ಶಿವಮೊಗ್ಗ ಎಪಿಎಂ ಅಡಕೆ ವರ್ತಕರ ಸಂಘದ ಅಧ್ಯಕ್ಷ

ಸಂಶೋಧನೆಗೆ ಕೇಂದ್ರ ಆವರ್ತ ನಿಧಿ ಸ್ಥಾಪಿಸಲಿ

ಸಾಂಪ್ರದಾಯಿಕ ಪ್ರದೇಶಗಳಲ್ಲಿ ಅಡಕೆಗೆ ಹಲವು ರೋಗಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಇಲ್ಲಿ ಬೆಲೆ ಕಡಿಮೆಯಾಗುತ್ತಿದೆ. ಅಡಕೆ ಪ್ರದೇಶದ ವಿಸ್ತರಣೆಯೂ ಹೆಚ್ಚುತ್ತಿದೆ. ಸಣ್ಣ ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಈ ಹಂತದಲ್ಲಿ ಅಡಕೆ ರೋಗಗಳು ಹಾಗೂ ಪರ್ಯಾಯ ಬಳಕೆ ಬಗ್ಗೆ ವಿವಿಗಳಲ್ಲಿ ವ್ಯಾಪಕ ಸಂಶೋಧನೆಗಳು ನಡೆಯಬೇಕು. ಇದಕ್ಕಾಗಿ ಕೇಂದ್ರ ಸರ್ಕಾರ ಆವರ್ತ ನಿಧಿ ಸ್ಥಾಪಿಸಬೇಕು. ಅಧಿಕ ಬೆಲೆಯ ಪ್ರಯೋಜನ ಎಷ್ಟು ಬೆಳೆಗಾರರಿಗೆ ಸಿಗುತ್ತದೆ ಎಂಬ ಬಗ್ಗೆಯೂ ಯೋಚಿಸಬೇಕು. ಡಿಸೆಂಬರ್-ಜನವರಿಯಲ್ಲೂ ಇದೇ ಧಾರಣೆ ಇದ್ದರೆ ಮಾತ್ರ ಸಣ್ಣ ಹಿಡುವಳಿದಾರರ ಮೊಗದಲ್ಲೂ ಮಂದಹಾಸ ಕಾಣಬಹುದು. ಅಡಕೆ ಬಗ್ಗೆ ವ್ಯಾಪಕ ಸಂಶೋಧನೆ ನಡೆಸುವಂತೆ, ಅಡಕೆ ಬಗೆಗಿನ ಮಿಥ್ಯಾರೋಪಗಳನ್ನು ದೂರಗೊಳಿಸಲು ಸುಪ್ರೀಂಕೋರ್ಟ್​ನಲ್ಲಿ ವಾದ ಮಂಡಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ. ಜತೆಗೆ ಬೆಳೆಗಾರರು ಅಡಕೆ ಜತೆಗೆ ಅಂತರ ಬೆಳೆಗಳ ಬಗ್ಗೆಯೂ ಒಲವು ತೋರಬೇಕು.

| ಎಚ್.ಎಸ್.ಮಹೇಶ್ ಮ್ಯಾಮ್ಕೋಸ್ ಉಪಾಧ್ಯಕ್ಷ, ಶಿವಮೊಗ್ಗ

ಬೆಲೆ ಸ್ಥಿರತೆ ಸವಾಲು

ಲಾಕ್​ಡೌನ್ ಮತ್ತು ವಿದೇಶಿ ಅಡಕೆ ಇಲ್ಲದ ಕಾರಣ ದರ ಏರಿಕೆಯಾಗಿದೆ. ಆದರೆ ಬೆಲೆ ಸ್ಥಿರತೆ ಕಾಪಾಡಿಕೊಳ್ಳಲು ಗಂಭೀರವಾಗಿ ಚಿಂತನೆ ಮಾಡಬೇಕಿದೆ. ಅಡಕೆ ಬೆಳೆಯು ಆರ್ಥಿಕ ಮಟ್ಟದ ಜತೆಗೆ ಜೀವನಮಟ್ಟವನ್ನೂ ನಿರ್ಧಾರ ಮಾಡುತ್ತಿದೆ. ಅಡಕೆ ಆಹಾರ ಬೆಳೆಯಲ್ಲ. ವಾಣಿಜ್ಯ ದೃಷ್ಟಿಯಿಂದ ಬೇಕೇಬೇಕು ಎನ್ನುವ ಬೆಳೆಯಲ್ಲ. ಆದರೂ ಆಹಾರ ಬೆಳೆಯುವ ಜಾಗದಲ್ಲೂ ಅಡಕೆ ಬೆಳೆಯಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ 10ರಿಂದ 15 ವರ್ಷದಲ್ಲಿ ಅಡಕೆಗೆ ಆತಂಕ ತಪ್ಪಿದ್ದಲ್ಲ. ಹಾಗಾಗಿ ಸಾಂಪ್ರದಾಯಿಕ ಬೆಳೆಗಾರರ ಹಿತ ಕಾಪಾಡಬೇಕು. ಮಲೆನಾಡಿನಲ್ಲಿ ಬೆಲೆಗಾಗಿ ರೈತರು ಕಾಯುವ ಸ್ಥಿತಿಯಲ್ಲಿಲ್ಲ. ದೊಡ್ಡ ಬೆಳೆಗಾರರು ಮಾತ್ರ ಲಾಭ ಪಡೆದುಕೊಳ್ಳುತ್ತಿದ್ದಾರೆ. ಬೆಲೆ ಸ್ಥಿರತೆ ಸಿಕ್ಕರೆ ರೈತರಿಗೆ ಅನುಕೂಲವಾಗಲಿದೆ. ಉತ್ಪಾದನೆ ಹೆಚ್ಚಬೇಕು ಮತ್ತು ಉತ್ಪಾದನಾ ವೆಚ್ಚ ತಗ್ಗಿಸುವ ಕೆಲಸ ಆಗಬೇಕು. ಸಣ್ಣ ಸಣ್ಣ ಬೆಳೆಗಾರರನ್ನು ಒಗ್ಗೂಡಿಸಿ ಸಹಕಾರ ಸಂಘಗಳ ಮೂಲಕವೇ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಬೇಕು.

| ಡಾ. ಶಶಿಭೂಷಣ ಹೆಗಡೆ ಸಿದ್ದಾಪುರ, ಅಡಕೆ ಬೆಳೆಗಾರ, ಸಾಮಾಜಿಕ ಕಾರ್ಯಕರ್ತ

ಅಂತರ ಬೆಳೆಗೆ ಒತ್ತು ನೀಡಲಿ

ರಾಜ್ಯದಲ್ಲಿ 7 ಲಕ್ಷ ಮೆಟ್ರಿಕ್ ಟನ್ ಅಡಕೆ ಬೇಡಿಕೆ ಇದೆ. ಬರ್ವ ಮತ್ತು ಇಂಡೋನೇಷ್ಯಾದಿಂದ 2ರಿಂದ 3 ಲಕ್ಷ ಮೆಟ್ರಿಕ್ ಟನ್​ನಷ್ಟು ಕಳಪೆ ಅಡಕೆ ಬರುವುದು ನಿಂತಿದೆ. ಅಡಕೆಯಿಂದ 700 ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗುತ್ತಿದ್ದು ಕನಿಷ್ಠ ಶೇ.1ರಷ್ಟು ಹಣವನ್ನು ಅಡಕೆ ಸಂಶೋಧನೆಗೆ ಮೀಸಲಿಡಬೇಕು. ಅಡಕೆ ಬಗ್ಗೆ ಹಂತ ಹಂತವಾಗಿ ಸಂಶೋಧನೆ ಆಗಬೇಕು. ದರ ಸ್ಥಿರತೆ ಕಾಯ್ದುಕೊಳ್ಳಲು ಹೋರಾಟ ಮಾಡುವ ಸ್ಥಿತಿ ಬಂದಿದೆ. ಅಡಕೆ ನಡುವೆ ಅಂತರ ಬೆಳೆ ಪದ್ಧತಿ ಅನುಸರಿಸಿದರೆ ಅನುಕೂಲವಾಗುತ್ತದೆ. ತೆರಿಗೆ ಸಂಗ್ರಹದಲ್ಲಿ ಶಿಸ್ತುಬದ್ಧ ಕ್ರಮ ಅನುಸರಿಸಿದರೆ ಅಡಕೆಗೆ ನಿಶ್ಚಿತ ಬೆಲೆ ಸಿಗುವುದರಲ್ಲಿ ಅನುಮಾನವಿಲ್ಲ. ಕ್ಯಾಂಪ್ಕೋದಿಂದ ಬೆಳೆಗಾರರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಬಗ್ಗೆ ಚಿಂತನೆ ನಡೆದಿದೆ. ಜತೆಗೆ ಬೈಕಂಪಾಡಿ, ಸುಳ್ಯ, ಪುತ್ತೂರಿನಲ್ಲಿ ಅಡಕೆ ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಳದಿ ರೋಗ ತಡೆಗೆ ಪ್ಲಾಸ್ಟಿಕ್ ಹೊದಿಕೆ ಹಾಕುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಪ್ರಸ್ತುತ ಶೇ.12ರಿಂದ 15ರಷ್ಟು ಅಡಕೆ ಕ್ಯಾಂಪ್ಕೋಗೆ ಬರುತ್ತಿದ್ದು ಆ ಪ್ರಮಾಣ ಶೇ.30ರಿಂದ 35ಕ್ಕೆ ಏರಿಕೆಯಾದರೆ ರೈತರಿಗೆ ಅನುಕೂಲವಾಗುತ್ತದೆ.

| ಕಿಶೋರ್​ಕುಮಾರ್ ಕೊಡ್ಗಿ ಮಂಗಳೂರು ಕ್ಯಾಂಪ್ಕೋ ಅಧ್ಯಕ್ಷ

ಹಂತ ಹಂತದ ಮಾರಾಟ ಒಳ್ಳೆಯದು

ಬೆಳೆಗಾರರು ಒಂದೇ ಬಾರಿ ಅಷ್ಟೂ ಅಡಕೆ ಮಾರುವ ಬದಲು ಹಂತ ಹಂತವಾಗಿ ಮಾರಬೇಕು. ಆಗ ಸರಾಸರಿಯಾಗಿ ಒಳ್ಳೆಯ ಬೆಲೆ ಸಿಗುತ್ತದೆ. ಉತ್ತಮ ಧಾರಣೆ ಸಿಕ್ಕಿದಾಗ ಅದನ್ನು ಅನುತ್ಪಾದಕ ವಸ್ತುಗಳ ಮೇಲೆ ಹೂಡಿಕೆ ಮಾಡದೆ ಭವಿಷ್ಯದ ಬಗ್ಗೆ ಚಿಂತನೆ ನಡೆಸಬೇಕು. ನಮ್ಮ ಭಾಗದಲ್ಲಿ ಬಾಳೆ, ಕಾಳುಮೆಣಸನ್ನೂ ಉತ್ತಮವಾಗಿ ಬೆಳೆಯಬಹುದು. ಹೀಗಾಗಿ ರೈತರು ಪರ್ಯಾಯ ಬೆಳೆಗಳತ್ತಲೂ ಯೋಚಿಸಬೇಕು. ಹೀಗೆಯೇ ಪ್ರದೇಶ ವಿಸ್ತರಣೆಯಾದರೆ ಈರುಳ್ಳಿ, ಟೊಮ್ಯಾಟೋ ತರಹ ಅಡಕೆಯನ್ನೂ ರಸ್ತೆಯಲ್ಲಿ ಚೆಲ್ಲಬೇಕಾದ ಸ್ಥಿತಿ ಬರಬಹುದು. ಅಡಕೆಗೆ ಸಂಬಂಧಿಸಿದ ವಹಿವಾಟು 60-70 ಸಾವಿರ ಕೋಟಿ ರೂ. ಇರಬಹುದೆಂಬ ಲೆಕ್ಕಾಚಾರವಿದೆ. ಇದರಲ್ಲಿ ಅಕ್ರಮ ಸಾಗಣೆ ಮುಂತಾದವನ್ನು ತಡೆಗಟ್ಟಿ ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಪಾವತಿಯಾದರೆ ಸರ್ಕಾರವೂ ಅಡಕೆ ಬೆಳೆಗಾರರ ರಕ್ಷಣೆಗೆ ಒತ್ತು ನೀಡಬಹುದು.

| ಎಚ್.ಎಸ್.ಶಿವಕುಮಾರ್ ಚನ್ನಗಿರಿ ತುಮ್ಕೋಸ್ ಮಾಜಿ ಅಧ್ಯಕ್ಷ

ಈಗ ಶೇ.90ರಷ್ಟು ರೈತರ ಬಳಿ ಅಡಕೆ ಉಳಿದಿಲ್ಲ. ಹೀಗಾಗಿ ಬೆಲೆ ಏರಿಕೆಯ ನಿಜವಾದ ಲಾಭ ಯಾರಿಗೆ ಸಿಕ್ಕಿದೆ ಎಂಬುದು ಪ್ರಶ್ನೆ. ಅಡಕೆ ಬೆಳೆಗಾರರೆಲ್ಲರೂ ಶ್ರೀಮಂತರಲ್ಲ. ಇನ್ನೊಂದೆಡೆ ಅಡಕೆ ಧಾರಣೆ ಹೆಚ್ಚಿದರೂ ಬೆಳೆಗಾರರ ಸಾಲವೇನೂ ಕಡಿಮೆಯಾಗಿಲ್ಲ. ಕಾರು, ಹೊಸ ಕಟ್ಟಡ ಮುಂತಾದ ವೆಚ್ಚಗಳಿಂದ ರೈತರ ಆರ್ಥಿಕ ಸ್ಥಿತಿ ಸುಧಾರಣೆಯತ್ತ ಸಾಗುತ್ತಿಲ್ಲ. ಅಡಕೆ ಬೆಳೆಗಾರರೂ ಸೇರಿ ಎಲ್ಲ ರೈತರಿಗೆ ಆರ್ಥಿಕ ನಿರ್ವಹಣೆಯ ಮಾರ್ಗದರ್ಶನ ಅಗತ್ಯ. ರೈತರು ಕೂಡ ಖರ್ಚು-ವೆಚ್ಚದ ಬ್ಯಾಲೆನ್ಸ್​ಶೀಟ್ ಮಾಡುವುದನ್ನು ಕಲಿಯಬೇಕು.

| ಪ್ರಮೋದ ಹೆಗಡೆ ಯಲ್ಲಾಪುರ, ಬಿಜೆಪಿ ಮುಖಂಡ

ಸಂವಾದದಲ್ಲಿ ಕೇಳಿಬಂದಿದ್ದು

  • ಅಡಕೆ ಮೇಲಿನ ಮಿಥ್ಯಾರೋಪಗಳ ವಿರುದ್ಧ ಕಾನೂನು ಹೋರಾಟ ಅಗತ್ಯ
  • ಅಡಕೆ ಅಕ್ರಮ ಸಾಗಣೆಗೆ ಸಂಪೂರ್ಣ ಕಡಿವಾಣ ಹಾಕಬೇಕು
  • ಸಹಕಾರ ರಂಗ ಹಾಗೂ ಬೆಳೆಗಾರರು ಒಗ್ಗಟ್ಟು ಪ್ರದರ್ಶಿಸಬೇಕು
  • ಅಡಕೆ ಉತ್ಪನ್ನಗಳ ಮೌಲ್ಯವರ್ಧನೆ ಬಗ್ಗೆ ಸಂಶೋಧನೆ ಅವಶ್ಯ
  • ಅಡಕೆ ಜತೆ ಇತರ ಅಂತರ ಬೆಳೆಗಳಿಗೂ ಒತ್ತು ನೀಡಬೇಕು
  • ಎಲ್ಲ ಆರ್ಥಿಕ ವಹಿವಾಟು ಬ್ಯಾಂಕ್ ಮೂಲಕವೇ ನಡೆಯಬೇಕು
  • ಎಪಿಎಂಸಿಯೊಳಗೆ ಅಡಕೆ ಮಾರಾಟಕ್ಕೆ ಬೆಳೆಗಾರರು ಒತ್ತು ನೀಡಬೇಕು.
  • ಭೂಮಿಗೆ ಕಳೆನಾಶಕ ಸಿಂಪಡಣೆ ಬೇಡ
ಬೆಲೆ ಏರಿಳಿತ ಸಹಜ ಪ್ರಕ್ರಿಯೆ. ಹಾಗಾಗಿ ಒಂದೇ ಬೆಳೆಯನ್ನು ರೈತರು ನೆಚ್ಚಿಕೊಳ್ಳುವುದು ಒಳ್ಳೆಯದಲ್ಲ. ಬೆಲೆ ಏರಿಕೆ ಜತೆಗೆ ಅಡಕೆ ಬೆಳೆ ಪ್ರದೇಶದ ವಿಸ್ತರಣೆಯೂ ಹೆಚ್ಚಾಗಿದೆ. ಭತ್ತದ ಗದ್ದೆಗಳೂ ಅಡಕೆ ತೋಟಗಳಾಗಿ ಮಾರ್ಪಡುತ್ತಿವೆ. ರೈತರಿಗೆ ಸಹಕಾರಿ ತತ್ವಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಸಹಕಾರ ವಲಯದಿಂದ ಆಗಬೇಕು. ಅಂತರ್ಜಲ ಕುಸಿತದ ವೇಳೆ ಅಂತರ ಬೆಳೆಗಳು ರೈತರ ಕೈಹಿಡಿಯುತ್ತವೆ. ಕಳೆ ಮತ್ತಿತರ ಕಾರಣಗಳಿಂದ ರೈತರು ಅಡಕೆ ತೋಟಗಳಲ್ಲಿ ಕಳೆನಾಶಕ ಸಿಂಪಡಿಸುತ್ತಾರೆ. ಇದರಿಂದ ಭೂಮಿಗೆ ವಿಷ ಉಣಿಸಿದಂತಾಗುತ್ತದೆ.

| ಶಿವಾನಂದ ಕಳವೆ ಪರಿಸರವಾದಿ

ಸಹಕಾರ ಸಂಘಗಳು ಗಟ್ಟಿಯಾಗಲಿ

ಅಡಕೆ ಧಾರಣೆ, ಮಾರುಕಟ್ಟೆ ಸ್ಥಿರತೆ ಬಗ್ಗೆ ಪ್ರತಿ ಬಾರಿಯೂ ಸರ್ಕಾರಗಳನ್ನೇ ನಂಬಿಕೊಳ್ಳಲು ಸಾಧ್ಯವಿಲ್ಲ. ಯಾವುದರ ಬೆಲೆ ಹೆಚ್ಚಾಗುತ್ತದೆಯೋ ಅಂಥ ಬೆಳೆ ಬೆಳೆಯುವುದು ರೈತರ ಮನಸ್ಥಿತಿ. ಹೀಗಾಗಿ ಬೆಳೆ ಪ್ರದೇಶ ಹೆಚ್ಚಳದ ಬಗ್ಗೆ ಚಿಂತಿಸ ಬೇಕಿಲ್ಲ. ಅಡಕೆ ಬಗ್ಗೆ ಕೆಲವರ ಒಲವಿದ್ದರೆ, ಮತ್ತೆ ಕೆಲವರು ಅದರ ವಿರುದ್ಧ ಇದ್ದಾರೆ. ಹಾಗಾಗಿ ಸಹಕಾರ ಸಂಘಗಳು ಗಟ್ಟಿಯಾಗಬೇಕು.

| ಮಹೇಶ್ ಪುಚ್ಚಪ್ಪಾಡಿ ಅಖಿಲ ಭಾರತೀಯ ಅಡಕೆ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ, ಪುತ್ತೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net