ಬ್ಯಾನ್ ಆಗಲಿದೆಯಾ 2000 ರೂ. ನೋಟು? ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್​ವೊಂದು ನೀಡಿದ ಈ ಸೂಚನೆಯ ಅರ್ಥವೇನು...?

Currency 10 Feb 20
Published on

ನವದೆಹಲಿ: 2016 ರ ನವೆಂಬರ್​ 8ರಂದು ಸಂಜೆ 500 ಹಾಗೂ 1000 ರೂ.ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.

500 ಮತ್ತು 1000 ರೂ.ನೋಟುಗಳು ನಿಷೇಧವಾದ ಬಳಿಕ 2000 ರೂ.ಮುಖಬೆಲೆಯ ನೋಟುಗಳ ಮುದ್ರಣವಾಗಿ ಚಲಾವಣೆಗೆ ಬಂದಿತ್ತು. ಆದರೆ ಈಗ 2000 ರೂಪಾಯಿ ಕರೆನ್ಸಿಗಳು ಬ್ಯಾನ್​ ಆಗಲಿವೆಯಾ ಎಂಬುದೊಂದು ಅನುಮಾನ ಕಾಡುತ್ತಿದೆ.

ಈಗ ಹಲವು ದಿನಗಳಿಂದಲೂ ಆಗಾಗ ಇಂಥ ಸುದ್ದಿಗಳು ಹಬ್ಬುತ್ತಿವೆ. ಈ ಮಧ್ಯೆ ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್​ವೊಂದು 2000 ರೂ.ಮುಖಬೆಲೆಯ ಚಲಾವಣೆಯನ್ನು ನಿರ್ಬಂಧಿಸಿದೆ ಎಂದು ವರದಿಯಾಗಿದೆ.

2000 ರೂ.ನೋಟುಗಳ ಚಲಾವಣೆಯನ್ನು ನಿಲ್ಲಿಸಬೇಕು ಹಾಗೂ ಎಟಿಎಂಗಳಲ್ಲಿ ಕೂಡ ಅದರ ಸಂಗ್ರಹ ಬೇಡ ಎಂದು ಬ್ಯಾಂಕ್​ನ ಮ್ಯಾನೇಜ್​ಮೆಂಟ್ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಆದರೆ ಹೀಗೆ ನಿರ್ಬಂಧ ಮಾಡಿರುವ ಬ್ಯಾಂಕ್​ ಗ್ರಾಹಕರು ಡಿಪೋಸಿಟ್ ಮಾಡುವಾಗ 2000 ರೂ.ಮುಖಬೆಲೆಯ ನೋಟುಗಳನ್ನು ಕೊಟ್ಟರೆ ಸ್ವೀಕರಿಸುತ್ತಿದೆ ಎನ್ನಲಾಗಿದೆ. ಆದರೆ ನೋಟುಗಳನ್ನು ತಡೆಹಿಡಿಯಲು ಕಾರಣವೇನು ಎಂಬ ಬಗ್ಗೆ ಆರ್​ಬಿಐ ಕೂಡ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇತ್ತೀಚೆಗೆ ದೇಶಾದ್ಯಂತ ನಕಲಿ ನೋಟುಗಳ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಹೀಗೆ ವಶಪಡಿಸಿಕೊಳ್ಳಲಾದ ನಕಲಿ ನೋಟುಗಳಲ್ಲಿ 56 ಪರ್ಸಂಟ್​ಗಳಷ್ಟು 2000 ರೂ.ನೋಟುಗಳೇ ಇವೆ ಎಂದು ರಾಷ್ಟ್ರೀಯ ಕ್ರಿಮಿನಲ್ ರೆಕಾರ್ಡ್ಸ್ ಬ್ಯೂರೋ (The National Criminal Records Bureau (NCRB) ತಿಳಿಸಿದೆ.

2000 ರೂ.ನೋಟುಗಳ ಮುದ್ರಣ ಕಡಿಮೆಯಾಗಲು ಇದೇ ಪ್ರಮುಖ ಕಾರಣ ಎಂದು ಹೇಳಲಾಗಿದೆ.

2000 ರೂ.ನೋಟು ನಿಷೇಧದ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ಆರ್​ಬಿಐ, 2000 ರೂ.ಮುಖಬೆಲೆಯ ನೋಟುಗಳ ಮುದ್ರಣ 2019ರ ಅಕ್ಟೋಬರ್​ನಿಂದ ಸ್ಥಗಿತಗೊಂಡಿದೆ ಎಂದು ಹೇಳಿತ್ತು.

ಸದ್ಯ ಇರುವ 2000 ರೂ.ನೋಟುಗಳನ್ನು ಹಂತಹಂತವಾಗಿ ನಿರ್ಬಂಧಿಸಿ, ಸುಧಾರಿತ ಭದ್ರತಾ ಕ್ರಮಗಳೊಂದಿಗೆ ಬೇರೆ ರೂಪದಲ್ಲಿ ಮುದ್ರಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net