ಕರೊನಾ ವೈರಾಣು ಹಾವಳಿಗೆ ಹೋಟೆಲ್ ಉದ್ಯಮ ಹೈರಾಣ

ctd 17 hotel malikara sabe
Published on

ಚಿತ್ರದುರ್ಗ: ಕರೊನಾ ವೈರಾಣು ಭೀತಿ, ವದಂತಿಗಳಿಂದ ಹೋಟೆಲ್ ಉದ್ಯಮ ಹೈರಾಣಾಗಿದ್ದು, ಪ್ರವಾಸಿ ವಾಹನ, ಮಾಂಸ ಇತ್ಯಾದಿ ವ್ಯಾಪಾರ ವಹಿವಾಟಿನ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ.

ಬೇಸಿಗೆ ರಜೆ ಸಂದರ್ಭದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಬೇಕಿತ್ತು. ಆದರೆ ಕರೊನಾ ಭೀತಿಯಿಂದ ಹೋಟೆಲ್, ಬಾರ್ ಆ್ಯಂಡ್ ರೆಸ್ಟೊರೆಂಟ್ ವಹಿವಾಟು ಶೇ.40-50 ತಗ್ಗಿದೆ. ಪ್ರವಾಸಿ ವಾಹನಗಳ ಬೇಡಿಕೆ ಕುಸಿದಿದೆ.

ಚಿಕನ್‌ದರ ಭಾರಿ ಪ್ರಮಾಣದಲ್ಲಿ ಕುಸಿದಿದ್ದರೆ ಮಟನ್ ದರ ಹೆಚ್ಚಾಗಿದೆ. ಸೊಪ್ಪು, ತರಕಾರಿ ಬೆಳೆಗಾರರು ಕಂಗಾಲಾಗಿದ್ದಾರೆ. ಕ್ಯಾಟರಿಂಗ್ ಉದ್ಯಮ, ಬೇಕರಿ ಉತ್ಪನ್ನಗಳ ಮಾರಾಟಕ್ಕೂ ಪೆಟ್ಟಾಗಿದೆ. ಅಡುಗೆ ಕೆಲಸಗಾರರೂ ಆತಂಕಕ್ಕೆ ಒಳಗಾಗಿದ್ದಾರೆ. ಸಸ್ಯಾಹಾರಿ ಅಥವಾ ಮಾಂಸಾಹಾರಿ ಎಂದೆಲ್ಲ ನಿರ್ದಿಷ್ಟ ತಿಂಡಿ-ತಿನಿಸುಗಳಿಗೆ ಪೆಟ್ಟು ಬೀಳದಿದ್ದರೂ, ಹಲವು ಹೋಟೆಲ್‌ಗಳಲ್ಲಿ ಕರಿದ ತಿಂಡಿ-ತಿನಿಸುಗಳ ತಯಾರಿಕೆಗೆ ಕಡಿವಾಣ ಬೀಳುತ್ತಿದೆ. ಹಲವು ಹೋಟೆಲ್‌ಗಳಲ್ಲಿ ಸಪ್ಲೆಯರ್‌ಗಳು ಹ್ಯಾಟ್, ಹ್ಯಾಂಡ್‌ಗ್ಲೌಸ್‌ಗಳನ್ನು ಧರಿಸುತ್ತಿದ್ದಾರೆ.

ಕೋಟ್ಯಂತರ ರೂ.ನಷ್ಟ: ಉತ್ತರ ಭಾರತೀಯ ತಿನಿಸು ಸವಿಯಲು ಕುಟುಂಬದೊಂದಿಗೆ ಬರುವ ಹಾಗೂ ಪ್ರವಾಸಿ ಗ್ರಾಹಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿದಿದ್ದು, ಹೋಟೆಲ್ ಉದ್ಯಮ ಈವರೆಗೆ ಕೋಟಿ ರೂ. ಗೂ ಅಧಿಕ ನಷ್ಟ ಅನುಭವಿಸಿದೆ ಎಂದು ಅಂದಾಜಿಸಲಾಗಿದೆ. ವಸತಿ ಗೃಹಗಳು ಖಾಲಿ ಹೊಡೆಯುತ್ತಿವೆ ಎನ್ನುತ್ತಾರೆ ಅವುಗಳ ಮಾಲೀಕರು. ಮಾಂಸ ಮಾರಾಟಗಾರರು, ತರಕಾರಿ ಬೆಳೆಗಾರರು, ಬೀದಿ ಬದಿ ತಿಂಡಿ ತಿನಿಸು ಮಾರುವಂಥವರೂ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.

ಹಣ್ಣು ಹಂಪಲು: ರಸ್ತೆ ಬದಿ ಕಲ್ಲಂಗಡಿ ಇತ್ಯಾದಿ ಹಣ್ಣು ಹಂಪಲು, ಕಬ್ಬಿನ ಹಾಲು ಮತ್ತಿತರ ಪಾನೀಯ ಮಾರಾಟ ನಡೆದಿದೆ. ವ್ಯಾಪಾರ ಡಲ್ ಎನ್ನಿಸಿದ್ದರೂ ಕಾರ-ಮಂಡಕ್ಕಿ ಅಂಗಡಿಗಳು ಹಾಗೂ ಚಾಟ್‌ಸೆಂಟರ್‌ಗಳು ಮುಚ್ಚಿಲ್ಲ. ನಾನ್‌ವೆಜ್ ಹೋಟೆಲ್‌ಗಳು ಎಂದಿನಂತೆ ಕಾರ‌್ಯನಿರ್ವಹಿಸುತ್ತಿವೆ.

ಬೇಸಿಗೆ ರಜೆಯಲ್ಲಿ ಪ್ರವಾಸಿ ಸ್ಥಳಗಳು, ದೇವಾಲಯಗಳಿಗೆ ದೌಡಾಯಿಸುತ್ತಿದ್ದ ಜನರು ಮನೆಯಲ್ಲಿ ಉಳಿಯುತ್ತಿದ್ದು, ವಾಹನಗಳಿಗೆ ಬೇಡಿಕೆ ಕುಗ್ಗಿದೆ ಎನ್ನುತ್ತಾರೆ ಟ್ಯಾಕ್ಸಿ ಮಾಲೀಕ ಎಚ್.ಕೆ.ಸ್ವಾಮಿ. ಹೋಟೆಲ್‌ಗಳಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳಿಗೆ ಒತ್ತು ಕೊಟ್ಟಿದ್ದೇವೆ ಎನ್ನುತ್ತಾರೆ ಉದ್ಯಮಿ ದೀಪಾನಂದ.

ಹೋಟೆಲ್ ಮಾಲೀಕರ ಸಭೆ: ನಗರದಲ್ಲಿ ಸೋಮವಾರದ ಸಂತೆಯನ್ನು ರದ್ದು ಮಾಡಿದ್ದ ನಗರಸಭೆ, ಮಂಗಳವಾರ ಹೋಟೆಲ್ ಮಾಲೀಕರ ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ. ಈ ವೇಳೆ ವಹಿವಾಟು ಕುಸಿದಿರುವ ಕುರಿತಂತೆ ಅನೇಕ ಮಾಲೀಕರು ವಿವರಿಸಿದ್ದಾರೆ. ಬೆಳಗ್ಗೆ ನಗರಸಭೆ ಆಯುಕ್ತರು ಹಾಗೂ ಸಂಜೆ ಜಿಲ್ಲಾಧಿಕಾರಿ ಹೋಟೆಲ್ ಮಾಲೀಕರ ಸಭೆ ನಡೆಸಿ ಸೂಕ್ತ ಸಲಹೆ, ಸೂಚನೆ ನೀಡಿದ್ದಾರೆ.

ಐಮಂಗಲ ವರದಿ: ಗ್ರಾಮದಲ್ಲಿ ಕರೊನಾದಿಂದಾಗಿ ಹೋಟೆಲ್‌ಗಳಲ್ಲಿ ಶೇ.25, ಕೋಳಿ ಅಂಗಡಿಗಳಲ್ಲಿ ಶೇ.75, ಎಗ್‌ರೈಸ್, ಗೋಬಿ ಮಂಚೂರಿ ಸೆಂಟರ್ ಗಳಲ್ಲಿ ಶೇ.40 ವ್ಯಾಪಾರ ಕುಸಿದೆ. ಜನದಟ್ಟಣೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಡಿಮೆ ಆಗಿದ್ದರೂ ವಾರದ ಸಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net