ಮೊಳಕಾಲ್ಮೂರು ಸೀರೆಗೆ ಪ್ರಾದೇಶಿಕ ಹೆಗ್ಗರುತು

RESHME nekarike (1)
Published on

ಚಿತ್ರದುರ್ಗ: ಜಿಲ್ಲೆಯ ಪಾರಂಪರಿಕ ಕೈಮಗ್ಗಗಳಿಂದ ಸಿದ್ಧವಾಗುವ ಮೊಳಕಾಲ್ಮೂರು ಸೀರೆಗೆ ಪ್ರಾದೇಶಿಕ ಹೆಗ್ಗುರುತಾಗಿ ಮಾನ್ಯತೆ ನೀಡಲಾಗಿದೆ ಎಂದು ಕೈಮಗ್ಗ ಜವಳಿ ಇಲಾಖೆ ತಿಳಿಸಿದೆ.

ಈ ಸೀರೆಗಳ ನೇಯ್ಗೆ ಮುಂದುವರಿಸಿ ಪುನರುಜ್ಜೀವನಗೊಳಿಸಲು ಪ್ರಸಕ್ತ ಸಾಲಿನಲ್ಲಿ 26 ಲಕ್ಷ ರೂಗಳ ಕ್ರಿಯಾ ಯೋಜನೆಗೆ ಅನುಮೋದನೆ ಸಿಕ್ಕಿದೆ. ಯೋಜನೆಯಂತೆ ಮೊಳಕಾಲ್ಮೂರು ರೇಷ್ಮೆ ಸೀರೆಗಳ ಬ್ರಾಂಡಿಂಗ್, ಮಾರುಕಟ್ಟೆ ಸೌಲಭ್ಯ ಹಾಗೂ ನೇಕಾರರಿಗೆ ಸಹಾಯಧನಕ್ಕೆ ಅನುದಾನ ಲಭ್ಯವಾಗಿದೆ.

ಜಿಲ್ಲೆಯಲ್ಲಿ ಕೈಮಗ್ಗ, ವಿದ್ಯುತ್ ಮಗ್ಗ ನೇಕಾರಿಕೆ, ಸಿದ್ಧ ಉಡುಪು ಉತ್ಪಾದನೆ, ಹತ್ತಿ ಜಿನ್ನಿಂಗ್, ಪ್ರೆಸ್ಸಿಂಗ್ ಚಟುವಟಿಕೆಗಳಿಂದ ಸಾವಿರಾರು ಜನರಿಗೆ ಉದ್ಯೋಗ ಒದಗಿದೆ. ಗಣತಿಯಂತೆ ಜಿಲ್ಲೆಯಲ್ಲಿರುವ 4975 ನೇಕಾರ ಕುಟುಂಬಗಳ ಪೈಕಿ 4058 ಕಂಬಳಿ ನೇಕಾರರು, ಉಣ್ಣೆ ನೂಲುವವರು ಇದ್ದಾರೆ. 917 ರೇಷ್ಮೆ ಮತ್ತು ಹತ್ತಿ ಕೈಮಗ್ಗ ನೇಕಾರಿಕೆ ಕುಟುಂಬಗಳಿವೆ. ರೇಷ್ಮೆ ಸೀರೆ ನೇಕಾರಿಕೆ ಮತ್ತು ಉಣ್ಣೆ ಕಂಬಳಿ ನೇಕಾರಿಕೆ ಚಟುವಟಿಕೆಗಳು ಹೆಚ್ಚಾಗಿ ಮೊಳಕಾಲ್ಮೂರು ಹಾಗೂ ಚಳ್ಳಕೆರೆ ತಾಲೂಕಗಳಲ್ಲಿವೆ.

ಕಂಬಳಿ ಮಾರುಕಟ್ಟೆ ಸಂಕೀರ್ಣ: ಚಳ್ಳಕೆರೆ, ಮೊಳಕಾಲ್ಮೂರು ಹಾಗೂ ಹಿರಿಯೂರು ತಾಲೂಕಿನಲ್ಲಿ ಉಣ್ಣೆ ನೇಕಾರರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಉಣ್ಣೆ ಕಂಬಳಿಗಳು ಹಾಗೂ ಇತರೆ ಉಣ್ಣೆ ಉತ್ಪನ್ನಗಳ ಮಾರಾಟಕ್ಕಾಗಿ ಚಳ್ಳಕೆರೆ ಗೊರ‌್ಲಕಟ್ಟೆ ರಸ್ತೆಯಲ್ಲಿರುವ ಪಾದಗಟ್ಟೆ ಬಳಿ ರಾಜ್ಯ ಖಾದಿಯೇತರ ಉಣ್ಣೆ ಕೈಮಗ್ಗ ನೇಕಾರ ಸಹಕಾರ ಸಂಘಗಳ ಮಹಾಮಂಡಳದ ನಿವೇಶನದಲ್ಲಿ ಕಂಬಳಿ ಮಾರುಕಟ್ಟೆ ಸಂಕೀರ್ಣ ಕಟ್ಟಡ ನಿರ್ಮಾಣ ಹಾಗೂ ಮಹಾಮಂಡಳದಿಂದ ಉಣ್ಣೆ ನೂಲು ಉತ್ಪಾದನೆ ಪ್ರಾರಂಭವಾಗಿದೆ ಎಂದು ಇಲಾಖೆ ಉಪ ನಿರ್ದೇಶಕ ಎನ್.ಟಿ.ನೆಗಳೂರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net