

ನವದೆಹಲಿ : ಈರುಳ್ಳಿ ಬೆಲೆ ಏರಿಕೆ ತೀವ್ರಗತಿಯಲ್ಲಿ ಸಾಗಿದ್ದು, ಇದನ್ನು ನಿಯಂತ್ರಿಸುವುದಕ್ಕೆ ಬಫರ್ ಸ್ಟಾಕ್ ತಗೊಂಡು ಮಾರುಕಟ್ಟೆಗೆ ಪೂರೈಕೆ ಮಾಡಿ ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. ಇದೇ ವೇಳೆ, ಈರುಳ್ಳಿ ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಡಿಸೆಂಬರ್ 31ರವರೆಗೆ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ ದಾಸ್ತಾನಿನ ಮೇಲೆ ಮಿತಿ ವಿಧಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಲೀನಾ ನಂದನ್, ಚಿಲ್ಲರೆ ವ್ಯಾಪಾರಿಗಳಿಗೆ ಗರಿಷ್ಠ 2 ಟನ್ ಹಾಗೂ ಸಗಟು ವ್ಯಾಪಾರಿಗಳಿಗೆ ಗರಿಷ್ಠ 25 ಟನ್ಗಳವರೆಗೆ ಈರುಳ್ಳಿ ಸಂಗ್ರಹಕ್ಕೆ ಅವಕಾಶ ನೀಡಲಾಗಿದೆ. ಅಸ್ಸಾಂ, ಆಂಧ್ರಪ್ರದೇಶ, ಬಿಹಾರ, ಚಂಡೀಗಢ, ಹರಿಯಾಣ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳು ಕೇಂದ್ರದಿಂದ ಈರುಳ್ಳಿ ಪಡೆಯಲು ಆಸಕ್ತಿ ತೋರಿಸಿದ್ದು, ಈವರೆಗೆ ಒಟ್ಟು 8,000 ಟನ್ ಈರುಳ್ಳಿ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರದ ನಾಸಿಕ್ನಲ್ಲಿರುವ ಬಫರ್ ಸ್ಟಾಕ್ನಿಂದ ಪ್ರತಿಗೆ ಕೆ.ಜಿ 26 ರಿಂದ 28 ರೂ.ನಂತೆ ರಾಜ್ಯಗಳು ಈರುಳ್ಳಿಯನ್ನು ಖರೀದಿಸಬಹುದು. ಶೀಘ್ರದಲ್ಲೇ ಮುಂಗಾರು ಈರುಳ್ಳಿ ಮಾರುಕಟ್ಟೆಗೆ ಬರಲಿದೆ. ಇದರಿಂದ ಪೂರೈಕೆ ಹೆಚ್ಚಾಗಿ ಬೆಲೆ ಇಳಿಕೆ ಕಾಣಲಿದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)