

ನಿರ್ಮಲಾ ಸೀತಾರಾಮನ್ ಅವರ 2ನೇ ಬಜೆಟ್ ಟ್ವೆಂಟಿ20 ಮ್ಯಾಚಿನಷ್ಟೆ ಕುತೂಹಲ ಕೆರಳಿಸಿದೆ. ಜನತಾ ಜನಾರ್ದನರ ಹಲವು ಬೇಡಿಕೆಗಳು ಒಂದೆಡೆಯಾದರೆ, ಆರ್ಥಿಕ ತಜ್ಞರ ಎಚ್ಚರಿಕೆಗಳು ಇನ್ನೊಂದೆಡೆ. ಕೊಡಲು ಮನಸ್ಸಿದೆ, ಆದರೆ ಕೊಡಲಾಗದ ಪರಿಸ್ಥಿತಿ. ಒಟ್ಟಿನಲ್ಲಿ, ಈ ಬಜೆಟ್ ಮೋದಿ ಸರ್ಕಾರದ 6 ವರ್ಷಗಳ ಅನುಭವವನ್ನು ಒರೆಗೆಹಚ್ಚುವಷ್ಟು ಕ್ಲಿಷ್ಟವಾಗಿರುತ್ತದೆ ಎಂಬುದಂತೂ ಖರೆ.
ಸರ್ಕಾರ ಕಳೆದ 3-4 ತಿಂಗಳುಗಳಿಂದ ಬಲವರ್ಧಕ ಯೋಜನೆಗಳ ಸರಪಳಿಯನ್ನೇ ಅನುಸ್ಠಾನಕ್ಕೆ ತಂದಿದೆ. ಕಂಪನಿಗಳ ತೆರಿಗೆ ದರದಲ್ಲಿ ಗಣನೀಯ ಇಳಿಕೆ, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಹಣ ಪೂರೈಕೆ, ಮೂಲಸೌಕರ್ಯ ನಿಧಿ ಸ್ಥಾಪನೆ ಇವುಗಳಲ್ಲಿ ಮುಖ್ಯವಾದವುಗಳು. ಜಿಎಸ್ಟಿ ದರಗಳಲ್ಲಿ ಕಡಿತ ಮತ್ತು ಜಿಎಸ್ಟಿ ಅನುಸರಣೆ ಸರಳಗೊಳಿಸುವ ಮೂಲಕ ಉದ್ಯಮ ಸ್ನೇಹಿಯಾಗುವ ಪ್ರಯತ್ನ ನಡೆದಿದೆ. ಈ ಹಿನ್ನೆಲೆಯಲ್ಲಿ ಬಜೆಟ್ನಲ್ಲಿ ಜನರ ನಿರೀಕ್ಷೆ ಈಡೇರಿಸುವುದು ಅಷ್ಟೊಂದು ಸುಲಭವಲ್ಲ.
ಬಸವಳಿದ ಆರ್ಥಿಕವ್ಯವಸ್ಥೆಗೆ ಬಲ ತುಂಬಲು, ಮಧ್ಯಮವರ್ಗದ ಜನರಿಗೆ ತೆರಿಗೆ ಉಳಿತಾಯವಾದರೆ, ಅವರಲ್ಲಿ ಬಳಸಬಹುದಾದ ಹೆಚ್ಚುವರಿ ಹಣವಿರುತ್ತದೆ. ಆ ಮೂಲಕ ಬೇಡಿಕೆಯಲ್ಲಿ ವೃದ್ಧಿ ಉಂಟಾಗುವದೆಂಬ ನಂಬಿಕೆಯೇ ತೆರಿಗೆ ಭಾರ ತಗ್ಗಿಸುತ್ತಾರೆನ್ನುವವರ ವಾದ.
ಆದಾಯ ತೆರಿಗೆ ದರದಲ್ಲಿ ಬದಲಾವಣೆ: ಈಗಿರುವ ತೆರಿಗೆ ಆದಾಯ ಮಿತಿಯಾದ 2.50 ಲಕ್ಷ ರೂಪಾಯಿ ಬಹಳ ಹಿಂದೆ ನಿಗದಿಯಾಗಿದ್ದು, ಈಗಿನ ಏರುತ್ತಿರುವ ಹಣದುಬ್ಬರದಲ್ಲಿ ಈ ಪ್ರಮಾಣ ಹೆಚ್ಚಬೇಕು ಎಂಬುದು ದೊಡ್ಡ ನಿರೀಕ್ಷೆ. ಅದಲ್ಲದಿದ್ದರೆ, ಪ್ರಸ್ತುತ 5 ಲಕ್ಷಗಳಿಂದ 10 ಲಕ್ಷ ರೂ.ವರೆಗಿನ ಆದಾಯದ ಶೇ.20 ತೆರಿಗೆಯನ್ನು ಶೇ.10ಕ್ಕೆ ಇಳಿಸಿ. ಬೇಕಿದ್ದರೆ, 10-15 ಲಕ್ಷ ರೂಪಾಯಿಗಳವರೆಗೆ ಶೇ.20 ತೆರಿಗೆ, 15 ಲಕ್ಷದ ನಂತರ ಶೇ.30 ತೆರಿಗೆ ವಿಧಿಸಿ ಎನ್ನುವ ಸಲಹೆ ಅರ್ಥಸಚಿವರ ಕಿವಿಗೆ ತಲುಪಿದೆ. ಈಗಿನ ಪರಿಸ್ಥಿತಿಯಲ್ಲಿ ಇದು ಸುಲಭವಲ್ಲ. ಈಗಾಗಲೆ 5 ಲಕ್ಷದ ಆದಾಯಕ್ಕೆ (ರಿಯಾಯಿತಿ ಮತ್ತು ವಿನಾಯಿತಿ ಸೇರಿ) ತೆರಿಗೆ ಬಾಧಿಸದಂತೆ ಹಿಂದಿನ ಬಜೆಟ್ನಲ್ಲಿಯೆ ನೋಡಿಕೊಳ್ಳಲಾಗಿದೆ. ಆದಾಯ ತೆರಿಗೆ ಇಲಾಖೆ 2019 ರಲ್ಲಿ ಪ್ರಕಟಿಸಿದ ಮಾಹಿತಿ ಪ್ರಕಾರ 97 ಲಕ್ಷ ಜನರು 5 ರಿಂದ 10 ಲಕ್ಷ ರೂ. ಆದಾಯ ಹೊಂದಿದ್ದು, 45000 ಕೋಟಿ ರೂ. ತೆರಿಗೆ ಕಟ್ಟಿದ್ದಾರೆ. ಈ ಆದಾಯ ಮಿತಿಯಲ್ಲಿ ಬದಲಾವಣೆ ತಂದರೆ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಏಟು ಬೀಳಲಿದೆ. ಇನ್ನು, 10 ಲಕ್ಷ ರೂ.ಗಿಂತ ಮೇಲಿನ ಆದಾಯದವರು ಏನೂ ನಿರೀಕ್ಷೆ ಇಟ್ಟುಕೊಳ್ಳದಿರುವುದೇ ಉತ್ತಮ.
ನೌಕರವರ್ಗದವರು ಕೊಡುವ ಮನೆ ಬಾಡಿಗೆಗೆ ತೆರಿಗೆ ವಿನಾಯಿತಿ ಇದೆ. ಆದರೆ ಮುಂಬೈ, ಕೊಲ್ಕತ್ತಾ, ಬಹಳ ಹಿಂದಿನಿಂದ, ದೆಹಲಿ ಹಾಗೂ ಚೆನ್ನೈನಲ್ಲಿ ಹೆಚ್ಚಿನ ವಿನಾಯಿತಿ ಇದೆ. ಇದೀಗ ಬೆಂಗಳೂರು, ಪುಣೆ, ಹೈದರಾಬಾದ್ ಮುಂತಾದ ನಗರಗಳಲ್ಲಿ ಮನೆ ಬಾಡಿಗೆಯಲ್ಲಿ ವಿಪರೀತ ಏರಿಕೆಯಾಗಿದ್ದು, ಎರಡನೆ ಹಂತದ ನಗರಗಳಿಗೂ ಎಚ್ಆರ್ಎ ಮಿತಿ ಹೆಚ್ಚಿಸಬೇಕೆಂಬ ಒತ್ತಾಸೆ ಕಳೆದ ನಾಲ್ಕು ವರ್ಷಗಳಿಂದ ಕೇಳಿಬರುತ್ತಿದ್ದು, ಈ ಬಾರಿ ಈಡೇರುವ ಸಾಧ್ಯತೆಯಿದೆ.
ಸ್ವಂತ ವಾಸದ ಮನೆಸಾಲದ ಬಡ್ಡಿಗೆ 2 ಲಕ್ಷದವರೆಗೆ ತೆರಿಗೆ ವಿನಾಯಿತಿಯಿದೆ. ಕಳೆದ ಬಜೆಟ್ಟಿನಲ್ಲಿ, ಮನೆ ಬೆಲೆ ಮೌಲ್ಯ 45 ಲಕ್ಷ ರೂ. ಒಳಗಡೆ ಇದ್ದರೆ ಹೆಚ್ಚುವರಿ 1.50 ಲಕ್ಷ ರೂ. ಬಡ್ಡಿಗೆ ತೆರಿಗೆ ವಿನಾಯಿತಿ ಘೊಷಿಸಲಾಗಿತ್ತು. ಆದರೆ ರಿಯಲ್ ಎಸ್ಟೇಟ್ ದರ ಆಕಾಶದಲ್ಲಿರುವದರಿಂದ 45 ಲಕ್ಷ ರೂ.ಗಿಂತ ಕಡಿಮೆ ದರದ ಮನೆಯನ್ನು ಖರೀದಿಸುವುದೇ ಅಸಾಧ್ಯವಾಗಿದೆ. ಹೀಗಾಗಿ ಇದನ್ನು ಕನಿಷ್ಠ 55 ಲಕ್ಷ ರೂ.ಗಳಿಗೆ ನಿಗದಿಪಡಿಸಿದರೆ ಹಲವು ಜನರಿಗೆ ಅನುಕೂಲವಾದಿತೆಂಬುದು ಆಶಯ.
ಬಾಡಿಗೆ ಹಣದಲ್ಲಿ ಸಾಮಾನ್ಯ ಕಡಿತದ (30%) ನಂತರ, ಗೃಹಸಾಲದ ಬಡ್ಡಿ ಕಳೆದಾಗ ನಷ್ಟ ಉಂಟಾದರೆ 2 ಲಕ್ಷದವರೆಗೆ ಉಳಿದ ಆದಾಯದಲ್ಲಿ (ಪಗಾರು, ಬ್ಯಾಂಕ್ ಬಡ್ಡಿ, ಉದ್ಯಮ ಲಾಭ ಇತ್ಯಾದಿ) ಕಳೆದು, ಉಳಿದ ನಷ್ಟವನ್ನು ಮುಂದಿನ ವರ್ಷಗಳಿಗೆ ಬಾಡಿಗೆ ಆದಾಯದಲ್ಲಿ ವಜಾ ಮಾಡಬೇಕಿರುತ್ತದೆ. ಈಗ ಗೃಹಸಾಲದ ಬಡ್ಡಿ ತುಂಬಾ ಹೆಚ್ಚಿರುತ್ತದೆ. ಕಳೆದ ವರ್ಷ ಬಂದ ಈ ಬದಲಾವಣೆ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹಾನಿಮಾಡುತ್ತಿದೆ ಎಂಬುದು ಉದ್ಯಮಿಗಳ ಅನಿಸಿಕೆ. ಕಾರಣ ಈ ನಷ್ಟವನ್ನು 2 ಲಕ್ಷದಿಂದ 4 ಲಕ್ಷಕ್ಕಾದರೂ ಏರಿಸುವ ಮನವಿ ಮಾಡಿದ್ದಾರೆ. ಕೊರತೆ ಬಜೆಟ್ ಕಡೆ ಗಮನವಿಟ್ಟರೆ, ಸರ್ಕಾರ 4 ಲಕ್ಷದ ಬದಲು 3 ಲಕ್ಷಕ್ಕೇರಿಸುವ ಚಿಂತನೆ ನಡೆಸಬಹುದು.
ಕಲಂ 80ಸಿ ಅಡಿಯಲ್ಲಿ ಪ್ರಸ್ತುತ ಪಿಎಫ್, ಜೀವವಿಮೆ ಕಂತು, ಎನ್ಎಸ್ಸಿ, ಮಕ್ಕಳ ವಿದ್ಯಾಭ್ಯಾಸ ಶುಲ್ಕ, ಮನೆಸಾಲದ ಅಸಲು ಪಾವತಿ ಮುಂತಾದ ಹೂಡಿಕೆ/ಖರ್ಚುಗಳನ್ನು ಒಟ್ಟೂ ಆದಾಯದಲ್ಲಿ ಕಳೆದು ತೆರಿಗೆ ಭಾರ ಕಡಿಮೆ ಮಾಡಿಕೊಳ್ಳುವ (1.50 ಲಕ್ಷ ರೂ.ವರೆಗೆ ವಿನಾಯಿತಿ) ಅವಕಾಶವಿದೆಯಷ್ಟೆ. ಇನ್ನು ಎನ್ಪಿಎಸ್ನಲ್ಲಿ 50,000 ರೂ. ಹೂಡಿಕೆ ಮಾಡಿದ್ದಲ್ಲಿ ಅಧಿಕ ವಿನಾಯಿತಿಯಾಗಿ 2 ಲಕ್ಷದವರೆಗೆ ತೆರಿಗೆ ಬಾಧ್ಯ ಆದಾಯದಲ್ಲಿ ಕಡಿಮೆ ಮಾಡಿಕೊಳ್ಳಬಹುದಾಗಿದೆ. ಈ ಮಿತಿಯನ್ನು ಕನಿಷ್ಠ 2 ಲಕ್ಷದವರೆಗೆ (ಎನ್ಪಿಎಸ್ ಸೇರಿ 2.50 ಲಕ್ಷದ ವರೆಗೆ) ಏರಿಕೆ ಮಾಡಬೇಕೆಂಬ ಆಗ್ರಹ ಜೋರಾಗಿಯೆ ಇದೆ. ನೌಕರವರ್ಗಕ್ಕೆ, ಪ್ರತಿವರ್ಷ ಬಜೆಟ್ನಲ್ಲಿ ಒಂದಾದರೂ ಉಡುಗೊರೆ ಘೊಷಣೆ ಮಾಡುವುದು ಲಾಗಾಯ್ತಿನಿಂದಲೂ ರೂಢಿಯಲ್ಲಿದೆ. ಆದಾಯದ ಕನಿಷ್ಠ ಮಿತಿಯನ್ನು ಬದಲಾಯಿಸುವದಕ್ಕಿಂತ ಈ ಬಾರಿ 80ಸಿ ಕಲಂನಡಿ ಹೂಡಿಕೆ ಮಿತಿಯಲ್ಲಿ ಏರಿಸುವ ಸಾಧ್ಯತೆ ಹೆಚ್ಚಿದೆ. ಜತೆಗೆ ಎನ್.ಪಿ.ಎಸ್ ಹೂಡಿಕೆಗೆ ಕೊಡಲ್ಪಟ್ಟ ಹೆಚ್ಚುವರಿ ಹೂಡಿಕೆ ಮಾದರಿಯಲ್ಲಿ ಕರದಾತನಿಗೂ ಅನುಕೂಲಮಾಡಿಕೊಟ್ಟು, ಸರ್ಕಾರದ ಬೊಕ್ಕಸಕ್ಕೂ ಆದಾಯಮೂಲ ಹುಡುಕುವ ಪ್ರಯತ್ನ ನಡೆಯಬಹುದು.
ಜುಲೈ 2019 ರಲ್ಲಿ ಕಂಪನಿಗಳ ತೆರಿಗೆ ದರವನ್ನು ಶೇ.22 ಮತ್ತು ಹೊಸದಾಗಿ ಸ್ಥಾಪಿತವಾದ ಕಂಪನಿಗಳಿಗೆ ಶೇ.15 ತೆರಿಗೆ ದರ ಕಡಿತಗೊಳಿಸಿದ್ದರು. ಅದರೆ ಪಾಲುದಾರಿಕೆ ಮತ್ತು ಎಲ್.ಎಲ್.ಪಿ ಸಂಸ್ಥೆಗಳ ಆದಾಯ ತೆರಿಗೆಯನ್ನು ಶೇ.30ರಲ್ಲೆ ಇಡಲಾಗಿದೆ. ಬಹಳ ಚಿಕ್ಕ ಮತು ಮಧ್ಯಮ ಉದ್ಯಮಗಳು ಈ ತರಹ ಸಂಸ್ಥೆಗಳಾಗಿದ್ದು ಇವುಗಳ ಮೇಲಿನ ತೆರಿಗೆ ದರವನ್ನು ಶೇ.22 ಕ್ಕೆ ಇಳಿಸುವ ಇರಾದೆ ಸರ್ಕಾರಕ್ಕೆ ಇದೆ. ಆದರೆ ಈಗಾಗಲೆ ಕಂಪನಿ ತೆರಿಗೆ ಇಳಿಸಿರುವುದರಿಂದ ಸುಮಾರು 1.45 ಲಕ್ಷ ಕೋಟಿ ರೂ.ಗಳ ಕೊರತೆ ಇರುವುದರಿಂದ ಈ ಹೆಜ್ಜೆ ಇಡುವ ಗೋಜಿಗೆ ಹೋಗಲಿಕ್ಕಿಲ್ಲ.
ಜಿಎಸ್ಟಿ, ಆಮದು ಸುಂಕ
ಕಳೆದೊಂದು ವರ್ಷದಲ್ಲಿ, ಜಿ.ಎಸ್.ಟಿ ಕೌನ್ಸಿಲ್ ಹಲವಾರು ಸರಕುಗಳ ತೆರಿಗೆ ದರವನ್ನು ಕಡಿತಗೊಳಿಸು ತ್ತಲೆ ಬರುತ್ತಿದೆ. ಅನುಸರಣೆ ಸರಳೀಕರಣದ ಪ್ರಯತ್ನ ಪ್ರತಿದಿನವೂ ನಡೆಯುತ್ತಿದೆ. ಹೀಗಾಗಿ ಬಜೆಟ್ನಲ್ಲಿ ಹೊಸ ನಿರೀಕ್ಷೆ ಸಲ್ಲ. ಆದರೆ ಆಮದು ಸುಂಕದಲ್ಲಿ ಕೆಲವು ಬದಲಾವಣೆ ಖಚಿತ. ವಿದ್ಯುನ್ಮಾನ ಉಪಕರಣ(ಮೊಬೈಲ್ ಫೋನ್, ಚಾರ್ಜರ್ ಇತ್ಯಾದಿ), ಆಭರಣಗಳ ಮೇಲಿನ ಆಮದು ಸುಂಕ ಏರಿಸುವುದರಿಂದ ಅತ್ಯವಶ್ಯಕವಲ್ಲದ ಸರಕುಗಳ ಆಮದನ್ನು ನಿಯಂತ್ರಿಸಬಹುದು ಮತ್ತು ಚೀನಾದಿಂದ ಆಮದಾಗುವ ಸರಕುಗಳಿಗೆ ಸುಂಕ ಹೆಚ್ಚಿಸಿ ಬಿಸಿ ಮುಟ್ಟಿಸಬಹುದೆಂಬ ನಿರೀಕ್ಷೆ.
ಕಳೆದ ಬಜೆಟ್ನಲ್ಲಿ ಷೇರು/ಮ್ಯೂಚುವಲ್ ಫಂಡ್ಗಳಲ್ಲಿ ದೀರ್ಘಾವಧಿ ಹೂಡಿಕೆ ಮಾಡಿ ಮಾರಿದಾಗ, 1 ಲಕ್ಷ ರೂ. ಮೀರಿದ ಲಾಭಕ್ಕೆ ಶೇ. 10 ಕರವಿಧಿಸಿದ್ದರು. ಪ್ರಸ್ತುತ ಕೊಟ್ಟಿರುವ ಮಿತಿ ಅತಿ ಕಡಿಮೆ, ಇದನ್ನು ಎರಡು ಲಕ್ಷ ರೂ. ಕ್ಕಾದರೂ ಏರಿಸಬೇಕೆಂಬುದು ಮಾರುಕಟ್ಟೆ ತಜ್ಞರ ಅಭಿಮತ. ಇದನ್ನು ಈಡೇರಿಸುವ ಸಾಧ್ಯತೆಗಳಿವೆ.