ಬ್ಯಾಡಗಿ ಮೆಣಸಿನಕಾಯಿ ದರ ಹೆಚ್ಚಳ, ಕ್ವಿಂಟಾಲ್​ಗೆ 40 ಸಾವಿರ ರೂ. | ಆವಕ ಪ್ರಮಾಣದಲ್ಲಿ ಕುಸಿತ ಕಾರಣ

BYADAGI
Published on

ಬೆಂಗಳೂರು: ಕೆಲ ತಿಂಗಳ ಹಿಂದೆ ‘ಕಣ್ಣೀರು ತರಿಸಿದ್ದ’ ಈರುಳ್ಳಿ ದರ ಅಂತೂ ಕುಸಿಯಿತು ಎಂದು ಗ್ರಾಹಕರು ನಿಟ್ಟುಸಿರುಬಿಟ್ಟ ಬೆನ್ನಲ್ಲೇ ಒಣಮೆಣಸಿನಕಾಯಿ ಬೆಲೆ ಏರಿಕೆ ಕಂಡಿದ್ದು, ದರದ ಘಾಟು ಉರಿ ಹೆಚ್ಚಿಸಿದೆ.

ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ (ಎಪಿಎಂಸಿ) ಕಳೆದ ತಿಂಗಳು ಕ್ವಿಂಟಾಲ್​ಗೆ ಗರಿಷ್ಠ 15 ಸಾವಿರ ರೂ. ಇದ್ದ ಬ್ಯಾಡಗಿ ಮೆಣಸಿನಕಾಯಿ ದರ ಸೋಮವಾರ ಗರಿಷ್ಠ 40 ಸಾವಿರ ರೂ.ಗೆ ತಲುಪಿದೆ. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆವಕ ಪ್ರಮಾಣದಲ್ಲಿ ಕುಸಿತವಾಗಿರುವುದು ಧಾರಣೆ ಹೆಚ್ಚಳಕ್ಕೆ ಕಾರಣ ಎನ್ನುತ್ತಾರೆ ಎಪಿಎಂಸಿ ವರ್ತಕರು.

ಬೆಳೆ ಹಾನಿ ಪರಿಣಾಮ: ರಾಜ್ಯದಲ್ಲಿ ಅಂದಾಜು 1.2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತದೆ. ಕಳೆದ ವರ್ಷ ಸತತ ಮಳೆಯಿಂದಾಗಿ ಹಾವೇರಿ, ಗದಗ, ಧಾರವಾಡ ಹಾಗೂ ಬಳ್ಳಾರಿ ಜಿಲ್ಲೆಯ 40 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಹಾನಿಯಾಗಿದೆ. ಹಾಗಾಗಿ ಹೆಚ್ಚು ಉತ್ಪನ್ನ ಇಲ್ಲದ ಕಾರಣ ಮಾರುಕಟ್ಟೆಗೆ ಆವಕ ಪ್ರಮಾಣವೂ ಇಳಿಕೆಯಾಗಿದೆ.

ಹಾವೇರಿಯಲ್ಲಿ ಅಲ್ಪ ಹೆಚ್ಚಳ: ಹಾವೇರಿಯ ಬ್ಯಾಡಗಿ ಮೆಣಸಿನ ಕಾಯಿ ಮಾರುಕಟ್ಟೆಯಲ್ಲಿ ಒಂದು ವಾರದಿಂದ ದರ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಸದ್ಯ ಮೆಣಸಿನಕಾಯಿ ಡಬ್ಬಿ ಕ್ವಿಂಟಾಲ್​ಗೆ ಗರಿಷ್ಠ 26 ಸಾವಿರ ರೂ. ಇದ್ದರೆ, ಕಡ್ಡಿ 22 ಸಾವಿರ ರೂ., ಗುಂಟೂರ 10 ಸಾವಿರ ರೂ.ಗೆ ಮಾರಾಟವಾಗುತ್ತಿದೆ.

ದಾಖಲೆ ದರ: ಸೋಮವಾರ ಯಶವಂತಪುರ ಮಾರುಕಟ್ಟೆ ಯಲ್ಲಿ ಬ್ಯಾಡಗಿ ಸ್ಟೆಮ್ ಕ್ವಿಂಟಾಲ್​ಗೆ 16 ಸಾವಿರ ರೂ.ನಿಂದ 26 ಸಾವಿರ ರೂ., ಬ್ಯಾಡಗಿ ಸ್ಟೆಮ್ೆಸ್ 25 ಸಾವಿರ ರೂ.ನಿಂದ 40 ಸಾವಿರ ರೂ.ಗೆ ಸಗಟು ಮಾರಾಟವಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ಇಲ್ಲಿನ ವರ್ತಕ ಪ್ರಭು.

ಹುಣಸೆಹಣ್ಣು 20 ಸಾವಿರ ರೂ.!: ತುಮಕೂರು, ಮೈಸೂರು, ಮಂಡ್ಯ, ಕೋಲಾರ ಸೇರಿ ರಾಜ್ಯದ ವಿವಿಧ ಭಾಗಗಳಿಂದ ಹುಣಸೆಹಣ್ಣು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿಲ್ಲ. ಹೀಗಾಗಿ ಹುಣಸೆ ದರ ಕ್ವಿಂಟಾಲ್​ಗೆ 20 ಸಾವಿರ ರೂ.ಗೆ ತಲುಪಿದೆ. ಸೋಮವಾರ ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಫ್ಲವರ್ ಹುಣಸೇಹಣ್ಣು ಕ್ವಿಂಟಾಲ್​ಗೆ 10 ಸಾವಿರ ರೂ.ನಿಂದ 15 ಸಾವಿರ ರೂ.ವರೆಗೆ, ರೌಂಡ್ 8 ಸಾವಿರ ರೂ. ನಿಂದ 14 ಸಾವಿರ ರೂ.ವರೆಗೆ, ಕರ್ಪಳಿ ಕ್ವಿಂಟಾಲ್​ಗೆ 16 ಸಾವಿರ ರೂ.ನಿಂದ 20 ಸಾವಿರ ರೂ.ಗೆ ಮಾರಾಟವಾಗಿದೆ.

ದ್ವಾರಕಾನಾಥ್ ಎಲ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net