

ಬೆಂಗಳೂರು: ಲಾಕ್ಡೌನ್ ಮುಂಚೆ ಮತ್ತು ನಂತರ ಮಾರಾಟ ಆದ ಬಿಎಸ್4 ವಾಹನಗಳ ನೋಂದಣಿಗೆ ಸುಪ್ರೀಂಕೋರ್ಟ್ ಅನುಮತಿ ನೀಡಿದ್ದರೂ, ಸಾರಿಗೆ ಇಲಾಖೆಯಿಂದ ಈವರೆಗೆ ಅಧಿಕೃತ ಆದೇಶ ಹೊರಬಿದ್ದಿಲ್ಲ. ಹೀಗಾಗಿ ರಾಜ್ಯದಲ್ಲಿ ಈವರೆಗೆ ಬಿಎಸ್4 ವಾಹನಗಳ ನೋಂದಣಿ ಆರಂಭಗೊಂಡಿಲ್ಲ. ವಾಯು ಮಾಲಿನ್ಯ ನಿಯಂತ್ರಣ ಕ್ಕಾಗಿ ದೇಶದೆಲ್ಲೆಡೆ ಬಿಎಸ್4 ವಾಹನಗಳ ಮಾರಾಟ ಮತ್ತು ನೋಂದಣಿಯನ್ನು ಏಪ್ರಿಲ್ನಿಂದ ಸ್ಥಗಿತಗೊಳಿಸಲಾಗಿದೆ. ಮಾರ್ಚ್ ಅಂತ್ಯದವರೆಗೆ ಈ ಮಾದರಿ ವಾಹನಗಳ ಮಾರಾಟಕ್ಕೆ ಅವಕಾಶವಿತ್ತು. ಆದರೆ, ಕರೊನಾ ಸೋಂಕು ಹರಡುವುದನ್ನು ತಡೆಯಲು ಮಾಡಲಾದ ದೇಶವ್ಯಾಪಿ ಲಾಕ್ಡೌನ್ನಿಂದಾಗಿ ವಾಹನ ಮಾರಾಟ ಮತ್ತು ವಾಹನಗಳ ನೋಂದಣಿಗೆ ಬ್ರೇಕ್ ಬಿದ್ದಿತ್ತು. ಇದರಿಂದಾಗಿ ಅದಾಗಲೆ ಉತ್ಪಾದಿಸಲಾದ ಬಿಎಸ್4 ವಾಹನಗಳ ಮಾರಾಟಕ್ಕೂ ತೊಡಕುಂಟಾಗಿ, ವಾಹನ ಉತ್ಪಾದನಾ ಸಂಸ್ಥೆಗಳಿಗೆ ಭಾರಿ ನಷ್ಟವುಂಟಾಗಿತ್ತು. ಹೀಗಾಗಿ ಲಾಕ್ಡೌನ್ ಅವಧಿಯಲ್ಲಿ 10 ದಿನಗಳ ಕಾಲ ಬಿಎಸ್4 ವಾಹನಗಳ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು.
ಸಾರಿಗೆ ಇಲಾಖೆ ಅಧಿಕಾರಿಗಳ ಪ್ರಕಾರ ರಾಜ್ಯದಲ್ಲಿ 4 ಲಕ್ಷಕ್ಕೂ ಹೆಚ್ಚಿನ ದ್ವಿಚಕ್ರ, ಕಾರು ಸೇರಿ ಇನ್ನಿತರ ಬಿಎಸ್4 ವಾಹನಗಳು ನೋಂದಣಿಯಾಗಬೇಕಿದೆ. ಅವುಗಳ ನೋಂದಣಿಗೆ ಹೆಚ್ಚುವರಿ ಶುಲ್ಕ ಪಡೆಯುವ ಕುರಿತು ಸುಪ್ರೀಂಕೋರ್ಟ್ ಕೂಡ ಹೇಳಿಲ್ಲ. ಜತೆಗೆ ಸುಪ್ರೀಂಕೋರ್ಟ್ ನೀಡಿದ ಅವಧಿಯ ನಂತರವೂ ಮಾರಾಟ ಮಾಡಲಾದ ವಾಹನಗಳನ್ನು ನೋಂದಣಿ ಮಾಡಬಹುದೇ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ. ಹೀಗಾಗಿ ಬಿಎಸ್4 ವಾಹನಗಳ ನೋಂದಣಿ ಕುರಿತಂತೆ ಗೊಂದಲಕ್ಕೊಳಗಾಗಿರುವ ರಾಜ್ಯ ಸಾರಿಗೆ ಇಲಾಖೆ, ಅದನ್ನು ಪರಿಹರಿಸಿಕೊಂಡ ನಂತರ ನೋಂದಣಿಗೆ ಅವಕಾಶ ನೀಡುವ ಕುರಿತು ಆದೇಶ ಹೊರಡಿಸಲಾಗುತ್ತದೆ.