ಬಿಎಸ್​ 6ನೇ ಹಂತದ ಇಂಧನದ ಬೆಲೆ ಅಧಿಕ: ಪ್ರತಿ ಲೀಟರ್​ ಇಂಧನಕ್ಕೆ 50 ಪೈಸೆಯಿಂದ 1 ರೂ.ಹೆಚ್ಚಳ ಸಂಭವ

Petrol
Published on

ನವದೆಹಲಿ: ರಾಷ್ಟ್ರದಲ್ಲಿ ಏಪ್ರಿಲ್​ನಿಂದ ವಾಹನಗಳಲ್ಲಿ ಬಿಎಸ್​-6ನೇ ಹಂತದ ಹೊರಸೂಸುವಿಕೆ ಮಾನದಂಡದ ಇಂಧನ ಬಳಕೆ ಕಡ್ಡಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂಧನ ಬೆಲೆ ಅಧಿಕಗೊಳ್ಳಲಿದೆ ಎಂದು ತೈಲ ಕಂಪನಿಗಳು ತಿಳಿಸಿವೆ.

ಕೇಂದ್ರ ಸರ್ಕಾರ ಏ.1 2020ರಿಂದ ವಾಹನಗಳಿಗೆ ಬಿಎಸ್​-6ನೇ ಹಂತದ ಪೆಟ್ರೋಲ್​ ಹಾಗೂ ಡಿಸೇಲ್​ ಬಳಸುವಂತೆ ಕಡ್ಡಾಯ ಸೂಚನೆ ಹೊರಡಿಸುತ್ತಿದೆ. ಇದರಿಂದ ಪ್ರತಿ ಲೀಟರ್​ ಪೆಟ್ರೋಲ್​ ಹಾಗೂ ಡಿಸೇಲ್​ಗೆ 50 ಪೈಸೆ ಹೆಚ್ಚಳವಾಗಬಹುದು ಎಂದು ತೈಲ ಕಂಪನಿಗಳು ಹೇಳಿವೆ.

ಈ ನಿಟ್ಟಿನಲ್ಲಿ ಎಲ್ಲ ತೈಲ ಕಂಪನಿಗಳು ಹೊಸ ಮಾನದಂಡದ ಇಂಧನ ಉತ್ಪಾದನೆಗೆ ಮುಂದಾಗುತ್ತಿರುವುದರಿಂದ ಇಂಧನ ಬೆಲೆಯಲ್ಲಿ ಅಧಿಕಗೊಳ್ಳಲಿದೆ. ದೆಹಲಿಯಲ್ಲಿ ಪ್ರಸ್ತುತ ಪೆಟ್ರೋಲ್ ಬೆಲೆ ಲೀಟರ್​​ಗೆ 73.36 ರೂಪಾಯಿ ಹಾಗೂ ಡೀಸೆಲ್ ಬೆಲೆ ಲೀಟರ್​ಗೆ 66.36 ರೂಪಾಯಿ ಇದೆ.‘

ದೇಶದ ಅತಿದೊಡ್ಡ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ (ಐಒಸಿ) ಅಧ್ಯಕ್ಷ ಸಂಜೀವ್ ಸಿಂಗ್ ಮಾತನಾಡಿ, ಇಂಧನ ಬೆಲೆಯಲ್ಲಿ ಅಧಿಕವಾಗುವುದು ನಿಜ. ಆದರೆ ಗ್ರಾಹಕರು ದಿಗ್ಭ್ರಮೆ ವ್ಯಕ್ತಪಡಿಸುವಂತ ದರ ಏರಿಕೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಪ್ರತಿ ಲೀಟರ್‌ಗೆ 50 ಪೈಸಯಿಂದ 1 ರೂಪಾಯಿವರೆಗೆ ಏರಿಕೆ ಕಾಣಬಹುದು. ಪೆಟ್ರೋಲ್​ ಹಾಗೂ ಡಿಸೇಲ್​ಗೆ ಅಂತಾರಾಷ್ಟ್ರೀಯ ಮಾನದಂಡದ ಬೆಲೆ ಇರುವುದರಿಂದ ಜಾಗತಿಕವಾಗಿ ಇಂಧನದ ಬೆಲೆ ಕೂಡ ಏರಿಕೆಯಾಗಬಹುದು ಎಂದು ಅವರು ನುಡಿದರು.

ಐಒಸಿ ಕಂಪನಿಯ ಎಲ್ಲಾ ಸಂಸ್ಕರಣಾ ಘಟಕಗಳು ಬಿಎಸ್-6ನೇ ಹಂತದ ದರ್ಜೆಯ ಇಂಧನ ಉತ್ಪಾದಿಸಲು ಪ್ರಾರಂಭಿಸಿವೆ. ಮುಂದಿನ ತಿಂಗಳ ಅಂತ್ಯದ ವೇಳೆ ಇಂಧನ ದೇಶದ ಎಲ್ಲ ಡಿಪೋಗಳನ್ನು ತಲುಪಲಿದೆ. ಏ.1ರಿಂದಲೇ ನಮ್ಮ ಕಂಪನಿಯ ಪೆಟ್ರೋಲ್​ ಪಂಪ್​ಗಳಲ್ಲಿ ಬಿಎಸ್​=6ನೇ ಹಂತದ ಇಂಧನ ದೊರೆಯುತ್ತದೆ ಎಂದು ಅವರು ಮಾಹಿತಿ ನೀಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net