ಬ್ಯಾಂಕ್ ಠೇವಣಿ ಇನ್ನಷ್ಟು ಸುರಕ್ಷಿತ

bank feb 01 2020
Published on

ಬ್ಯಾಂಕ್ ಠೇವಣಿಗಳ ಮೇಲಿನ ವಿಮೆ ಸುರಕ್ಷಾ ಮೊತ್ತವನ್ನು ಈಗಿರುವ ಒಂದು ಲಕ್ಷ ರೂಪಾಯಿಗಳಿಂದ  5 ಲಕ್ಷ ರೂ. ಏರಿಸಲಾಗಿದೆ. ಒಂದು ವೇಳೆ ಬ್ಯಾಂಕ್ ದಿವಾಳಿಯಾದರೆ, ಯಾವುದೇ ಬ್ಯಾಂಕ್​ನಲ್ಲಿ ಎಷ್ಟೇ ಠೇವಣಿ ಇಟ್ಟರೂ, ಇಲ್ಲಿಯವರೆಗೆ ಠೇವಣಿದಾರರಿಗೆ ಒಂದು ಲಕ್ಷ ರೂಪಾಯಿ ಮಾತ್ರ ವಿಮೆಯ ರೂಪದಲ್ಲಿ ಸಿಗುತ್ತಿತ್ತು. ಈ ಮೊತ್ತವನ್ನು ಬಜೆಟ್​ನಲ್ಲಿ ಐದು ಲಕ್ಷಕ್ಕೆ ಏರಿಸುವ ಮೂಲಕ ಠೇವಣಿದಾರರಿಗೆ ಸಿಹಿ ಸುದ್ದಿ ನೀಡಲಾಗಿದೆ. ಪಂಜಾಬ್- ಮಹಾರಾಷ್ಟ್ರ ಸಹಕಾರ ಬ್ಯಾಂಕ್ (ಪಿಎಂಸಿ) ಹಗರಣದಿಂದಾಗಿ ಕಳೆದ ನವೆಂಬರ್ ತಿಂಗಳಿನಲ್ಲಿ ಉಂಟಾದ ಪರಿಸ್ಥಿತಿಯಿಂದ ಠೇವಣಿದಾರರಿಗೆ ಉಂಟಾದ ತೊಂದರೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇಂಥದ್ದೊಂದು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ಘಟನೆಯ ನಂತರ ವಿಮಾ ಮೊತ್ತವನ್ನು ಎರಡು ಲಕ್ಷ ರೂಪಾಯಿಗೆ ಏರಿಸಲಾಗುವುದು ಎಂಬ ಸುದ್ದಿ ಇತ್ತು. ಆದರೆ ಈಗ ಐದು ಲಕ್ಷಕ್ಕೆ ಏರಿಸಲಾಗಿದೆ.

ಸೇವಿಂಗ್ಸ್, ಫಿಕ್ಸ್ಡ್​ ಕರೆಂಟ್, ರಿಕರಿಂಗ್ ಸೇರಿ ಎಲ್ಲಾ ರೀತಿಯ ಠೇವಣಿಗಳನ್ನು ಇದು ಒಳಗೊಂಡಿದೆ. (ವಿದೇಶಿ ಸರ್ಕಾರಗಳ ಠೇವಣಿ; ಕೇಂದ್ರ / ರಾಜ್ಯ ಸರ್ಕಾರಗಳ ಠೇವಣಿ; ಅಂತರ್-ಬ್ಯಾಂಕ್ ಠೇವಣಿ; ರಾಜ್ಯ ಸಹಕಾರಿ ಬ್ಯಾಂಕಿನಲ್ಲಿ ರಾಜ್ಯ ಭೂ ಅಭಿವೃದ್ಧಿ ಬ್ಯಾಂಕುಗಳ ಠೇವಣಿ; ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಿಂದಿನ ಅನುಮೋದನೆಯೊಂದಿಗೆ ನಿಗಮದಿಂದ ನಿರ್ದಿಷ್ಟವಾಗಿ ವಿನಾಯಿತಿ ಪಡೆದ ಯಾವುದೇ ಠೇವಣಿಯನ್ನು ಇದು ಒಳಗೊಂಡಿರುವುದಿಲ್ಲ). ‘ಬ್ಯಾಂಕ್​ಗಳನ್ನು ಪುನಶ್ಚೇತನಗೊಳಿಸಲು ಸರ್ಕಾರ ಮೂರೂವರೆ ಸಾವಿರ ಕೋಟಿ ರೂಪಾಯಿಗಳನ್ನು ಮೀಸಲು ಇರಿಸಿದೆ. ಗ್ರಾಹಕರ ಹಣ ಸಂಪೂರ್ಣವಾಗಿ ಸುರಕ್ಷಿತವಾಗಿರಲಿದೆ. ಬ್ಯಾಂಕ್​ಗಳ ಆರ್ಥಿಕ ಸ್ಥಿತಿಗತಿಗಳ ಮೇಲೆ ಸರ್ಕಾರ ತೀವ್ರ ನಿಗಾ ಇರಿಸಲಿದೆ’ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಜವಳಿ ಮಿಷನ್

ರಾಷ್ಟ್ರೀಯ ತಾಂತ್ರಿಕ ಜವಳಿ ಮಿಷನ್ ಅನುಷ್ಠಾನದ ಪ್ರಸ್ತಾಪನೆಯನ್ನು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್​ನಲ್ಲಿ ಮುಂದಿಟ್ಟಿದ್ದಾರೆ. 1,480 ಕೋಟಿ ರೂಪಾಯಿ ಅಂದಾಜು ವೆಚ್ಚದ ಈ ಯೋಜನೆಯನ್ನು ನಾಲ್ಕು ವರ್ಷದಲ್ಲಿ ಪೂರ್ಣಗೊಳಿಸುವ ಗುರಿಯಿದೆ. ಜವಳಿ ಉತ್ಪನ್ನಗಳ ಆಮದಿನಲ್ಲಿ ಕಡಿತ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. 2020-21ರಿಂದ 2023-24ನೇ ವರ್ಷದೊಳಗೆ ಮಿಷನ್ ಮುಗಿಸಬೇಕೆನ್ನುವುದು ಸರ್ಕಾರದ ಗುರಿಯಾಗಿದೆ. ‘ಭಾರತ ಪ್ರತಿ ವರ್ಷ 16 ಬಿಲಿಯ ಡಾಲರ್ ಮೌಲ್ಯದ ತಾಂತ್ರಿಕ ಜವಳಿಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಇದಕ್ಕೆ ಕಡಿವಾಣ ಹಾಕಿ ತಾಂತ್ರಿಕ ಜವಳಿ ಕ್ಷೇತ್ರದಲ್ಲಿ ಭಾರತವನ್ನು ಜಾಗತಿಕ ನಾಯಕನ ಸ್ಥಾನದಲ್ಲಿ ಕೂರಿಸುವುದು ಯೋಜನೆಯ ಉದ್ದೇಶವಾಗಿದೆ’ ಎಂದು ಸಚಿವೆ ವಿವರಿಸಿದರು. ಶುದ್ಧೀಕರಿಸಿದ ಟೆರಿಫ್ತಾಲಿಕ್ ಆಸಿಡ್ (ಪಿಟಿಎ) ಜವಳಿ ಎಳೆ ಮತ್ತು ದಾರಗಳಲ್ಲಿ ಬಳಕೆಯಾಗುವ ಒಂದು ಪ್ರಮುಖ ವಸ್ತು. ಸ್ಪರ್ಧಾತ್ಮಕ ಬೆಲೆಯಲ್ಲಿ ಅದು ಲಭ್ಯವಾಗುವಂತೆ ಮಾಡುವುದು ಅಗತ್ಯ ಎಂದರು.

ರಕ್ಷಣೆಗೆ 3.18 ಲಕ್ಷ ಕೋಟಿ ರೂ.

2020-21ನೇ ಸಾಲಿನ ಬಜೆಟ್​ನಲ್ಲಿ ರಕ್ಷಣಾ ವಲಯಕ್ಕೆ 3.37 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅನುದಾನದಲ್ಲಿ ಹೆಚ್ಚಿನ ಏರಿಕೆಯೇನೂ ಆಗಿಲ್ಲ. ಕಳೆದ ಬಜೆಟ್​ನಲ್ಲಿ 3.18 ಲಕ್ಷ ಕೋಟಿ ರೂ. ನೀಡಲಾಗಿತ್ತು. ನಿಗದಿತ ಮೊತ್ತದಲ್ಲಿ 1.13 ಲಕ್ಷ ಕೋಟಿ ರೂಪಾಯಿಯನ್ನು ಹೊಸ ಶಸ್ತ್ರಾಸ್ತ್ರಗಳು, ವಿಮಾನ ಹಾಗೂ ಸಮರ ನೌಕೆಗಳ ಖರೀದಿಗೆ ವ್ಯಯಿಸಲಾಗುವುದು. ಮಿಲಿಟರಿಯ ಆಧುನೀಕರಣ ಯೋಜನೆ ದೀರ್ಘ ಕಾಲದಿಂದ ಬಾಕಿಯಿದ್ದು ಅದಕ್ಕೆ ಭಾರಿ ಮೊತ್ತವನ್ನು ನೀಡಲಾಗುವುದೆಂಬ ನಿರೀಕ್ಷೆ ಹುಸಿಯಾಗಿದೆ. ಸಂಬಳ ಸಾರಿಗೆ, ನಿರ್ವಹಣೆ ಮೊದಲಾದ ಬಾಬ್ತು 2.09 ಲಕ್ಷ ಕೋಟಿ ರೂ. ಎಂದು ಅಂದಾಜು ಮಾಡಲಾಗಿದೆ. ಪಿಂಚಣಿ ನೀಡಿಕೆಗಾಗಿ 1.33 ಲಕ್ಷ ಕೋಟಿ ರೂ.ಗಳನ್ನು ಪ್ರತ್ಯೇಕವಾಗಿ ತೆಗೆದಿರಿಸಲಾಗಿದೆ. ರಕ್ಷಣೆಗೆ ಬಜೆಟ್​ನಲ್ಲಿ ಮೀಸಲಿಟ್ಟ ಹಣ ಜಿಡಿಪಿಯ ಸುಮಾರು 1.5% ಆಗಿದ್ದು ಹೆಚ್ಚಿನ ಬದಲಾವಣೆಯೇನೂ ಆಗಿಲ್ಲ. ಇದು 1962ರ ಚೀನಾ ಜೊತೆಗಿನ ಯುದ್ಧದ ನಂತರ ಅತ್ಯಂತ ಕಡಿಮೆ ಅನುದಾನ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net