

ಮುಂಬೈ: ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆ ಎಟಿಎಂ ಗ್ರಾಹಕರ ನಗದು ಹಿಂಪಡೆಯುವಿಕೆ ಮೇಲಿನ ಶುಲ್ಕ ಹೆಚ್ಚಿಸುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ (ಆರ್ಬಿಐ) ಎಟಿಎಂ ಆಪರೇಟರ್ಸ್ ಅಸೋಸಿಯೇಷನ್ ಮನವಿ ಮಾಡಿದೆ.
ಸುರಕ್ಷತೆ ಮತ್ತು ನಿರ್ವಹಣೆ ಕುರಿತಂತೆ ಆರ್ಬಿಐ ಮಾನದಂಡಗಳ ಪಾಲನೆಯಿಂದ ಎಟಿಎಂ ಯಂತ್ರಗಳ ನಿರ್ವಹಣಾ ವೆಚ್ಚ ಹೆಚ್ಚಾಗಿದೆ. ಸದ್ಯ ನಗದು ವಿತ್ಡ್ರಾ ಮೇಲೆ ಆರ್ಬಿಐ ಮೊದಲ ಐದು ವಹಿವಾಟುಗಳನ್ನು ಉಚಿತವಾಗಿ, ನಂತರದ ಪ್ರತಿ ವಹಿವಾಟಿಗೆ 15 ರೂ. ನಿಗದಿಪಡಿಸಿದೆ. ಆದರೆ ಈ ಮೊತ್ತ ಎಟಿಎಂಗಳ ದೈನಂದಿನ ಕಾರ್ಯಾಚರಣೆಗೆ ಸಾಕಾಗುವುದಿಲ್ಲ ಎಂಬುದು ಆಪರೇಟರ್ಗಳ ಅಳಲು.
10 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಇರುವ ನಗರ ಪ್ರದೇಶಗಳ ಎಟಿಎಂಗಳ ನಗದು ಹಿಂಪಡೆಯುವಿಕೆ ಶುಲ್ಕವನ್ನು 17 ರೂ.ಗೆ ಹೆಚ್ಚಿಸಬೇಕು, ಹಣಕಾಸೇತರ ವ್ಯವಹಾರಗಳ ಶುಲ್ಕವನ್ನು 7ರೂ.ಗೆ ಏರಿಸಬೇಕು. ಜತಗೆ ಉಚಿತ ನಗದು ಹಿಂಪಡೆಯುವಿಕೆ ಮಿತಿಯನ್ನು 5 ರಿಂದ 3ಕ್ಕೆ ಇಳಿಸಬೇಕು ಎಂಬುದು ಪ್ರಮುಖ ಬೇಡಿಕೆಗಳಾಗಿವೆ.