

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿಂದು ತಮ್ಮ ಎರಡನೇ ಪೂರ್ಣ ವರ್ಷದ ವಾರ್ಷಿಕ ಬಜೆಟ್ ಅನ್ನು ಮಂಡಿಸಲಿದ್ದಾರೆ. ದೇಶದ ಆರ್ಥಕತೆಯ ಬೆಳವಣಿಗೆ ಕುಂಠಿತ ಮತ್ತು ಕನಿಷ್ಟ ಉದ್ಯೋಗ ಸೃಷ್ಟಿಯ ಜತೆಗೆ ಹೆಚ್ಚು ಹಣದುಬ್ಬರದ ಸವಾಲುಗಳನ್ನು ಭಾರತ ಎದುರಿಸುತ್ತಿರುವ ಹೊತ್ತಿನಲ್ಲಿ ಇಂದು ಮಂಡನೆಯಾಗಲಿರುವ ಆಯವ್ಯಯ ಭಾರತದ ಆರ್ಥಿಕತೆ ದೃಷ್ಟಿಯಿಂದ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಈ ಮೇಲಿನ ಕಾರಣಗಳು ಈ ಬಾರಿಯ ಬಜೆಟ್ ಮೇಲೆ ವಿಶೇಷ ಪ್ರಭಾವ ಬೀರಿದ್ದು, ಎಲ್ಲರ ದೃಷ್ಟಿ ಹಣಕಾಸು ಸಚಿವೆ ಹಿಡಿದು ತರುವ ಸೂಟ್ಕೇಸ್ ಮೇಲೆ ನೆಟ್ಟಿದೆ. ಮಂದಗತಿಯಲ್ಲಿ ಸಾಗುತ್ತಿರುವ ಆರ್ಥಿಕತೆಗೆ ಯಾವ ಸುಧಾರಣೆ ತರಲಿದ್ದಾರೆ ಎಂಬ ಕುತೂಹಲ ಹೂಡಿಕೆದಾರರು ಮತ್ತು ಆರ್ಥಿಕ ತಜ್ಞರಲ್ಲಿದೆ.
ಮೂಲಭೂತ ಸೌಕರ್ಯಗಳ ಮೇಲೆ ಸರ್ಕಾರ ಹೆಚ್ಚು ಹಣ ವ್ಯಯಿಸುವ ನಿರೀಕ್ಷೆಯಿದೆ. ಇನ್ನು ವ್ಯಯಕ್ತಿಕ ತೆರಿಗೆಯನ್ನು ಕಡಿತಗೊಳಿಸಿ, ಬಳಕೆದಾರರ ಬೇಡಿಕೆ ಮತ್ತು ಹೂಡಿಕೆಯನ್ನು ಹೆಚ್ಚಿಸಲು ಸರ್ಕಾರ ಗಮನ ಕೊಡಲಿದೆ ಎಂಬ ಭರವಸೆ ಇದೆ.
ದಶಕಗಳಲ್ಲಿ ಭಾರತ ಅತ್ಯಂತ ಕೆಟ್ಟ ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬೆಳವಣಿಗೆ ದರ ಶೇ. 4.5ಕ್ಕೆ ಕುಸಿದಿದೆ. ಇದು ಪ್ರತಿ ವರ್ಷ ಕೆಲಸಕ್ಕೆ ಸೇರುವ ಲಕ್ಷಾಂತರ ಯುವ ಜನಾಂಗದ ಮೇಲೆ ಪ್ರಭಾವ ಬೀರಿದೆ. ಹೀಗಾಗಿ 4 ಕೋಟಿ ಉದ್ಯೋಗ ಸೃಷ್ಟಿ ನಿರೀಕ್ಷೆ ಇದೆ.
ಕಾರ್ಪೋರೇಟ್ ತೆರಿಗೆ ಕಡಿತ ಮತ್ತು ಇತರೆ ಉತ್ತೇಜನ ಮಾರ್ಗಗಳನ್ನು ಅನುಸರಿಸಿದರು ಹೂಡಿಕೆ ಮಟ್ಟವನ್ನು ಹೆಚ್ಚಿಸುವಲ್ಲಿ ಸರ್ಕಾರ ವಿಫಲವಾಗಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಕ್ರೋಢೀಕರಣ ಮತ್ತು ವಿತ್ತೀಯವನ್ನು ಸರಾಗಗೊಳಿಸಲು ಹೆಚ್ಚಿನ ಎಫ್‌ಡಿಐ ಒಳಹರಿವು ಯೋಜನೆಗಳ ನಿರೀಕ್ಷೆ ಇದೆ.
ಮುಂದಿನ ಎರಡು ವರ್ಷಗಳ ವರೆಗೆ ಹಣಕಾಸು ಕೊರತೆಯ ದರವನ್ನು ಶೆ.3ಕ್ಕೆ ತಗ್ಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಹಾಗದಲ್ಲಿ ಆರ್ಥಿಕತೆಗೆ ಕೊಂಚ ವೇಗ ಸಿಗಲಿದೆ. ರೈತರಿಗೆ ಪಿಎಂ-ಕಿಸಾನ್ ಯೋಜನೆಯಡಿಯ ವಿತರಣೆಯು ಬಜೆಟ್ ಮೊತ್ತಕ್ಕಿಂತ ಕಡಿಮೆಯಿರುವುದರಿಂದ, ಕಿಸಾನ್ ಯೋಜನೆಯಡಿ ಹೆಚ್ಚು ಅರ್ಹ ರೈತರನ್ನು ಸೇರಿಸಲು ರಾಜ್ಯಗಳ ಕ್ರಮವನ್ನು ಬಜೆಟ್ನಲ್ಲಿ ತಿಳಿಸುವ ಭರವಸೆ ಇದೆ.
ಇದರೊಂದಿಗೆ ತಗ್ಗಿರುವ ಆಟೋ ಮೊಬೈಲ್ ಕ್ಷೇತ್ರ, ರಿಯಲ್ ಎಸ್ಟೇಟ್ ಮತ್ತು ರಫ್ತು ಸೇರಿದಂತೆ ಅನೇಕ ಕ್ಷೇತ್ರಗಳ ಸುಧಾರಣೆಗೆ ಬಜೆಟ್ನಲ್ಲಿ ಚೇತರಿಕೆಯ ಟಾನಿಕ್ ನೀಡಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಸಾಮಾಜಿಕ ಕ್ಷೇತ್ರವಾದ ಗ್ರಾಮೀಣ ವಿದ್ಯುದೀಕರಣ, ಮನರೇಗಾ, ಆರೋಗ್ಯ ಕೇಂದ್ರ, ಶಿಕ್ಷಣ ಮತ್ತು ಕೌಶಲ್ಯ ತರಬೇತಿಗಳ ಬಗ್ಗೆಯು ಬಜೆಟ್ನಲ್ಲಿ ಉಲ್ಲೇಖವಾಗಲಿದೆ ಎಂಬ ನಿರೀಕ್ಷೆ ಇದೆ. ಹೀಗಾಗಿ ಇಂದು ಬಜೆಟ್ ಮಂಡನೆಯ ಸಂಪೂರ್ಣ ಮಾಹಿತಿಯನ್ನು ತಿಳಿಯಬೇಕಾದರೆ ವಿಜಯವಾಣಿ ವೆಬ್ಸೈಟ್ ಫಾಲೋ ಮಾಡುತ್ತೀರಿ....