ಆಲೆಮನೆಗೆ ಕಾಡುತ್ತಿದೆ ಕಾರ್ವಿುಕರ ಕೊರತೆ: ಬೇಡಿಕೆ ಇದೆ, ಉತ್ಪಾದನೆಯೇ ಇಲ್ಲ; ವಲಸಿಗರು ತವರಿಗೆ ಮರಳಿದ್ದರಿಂದ ಸಂಕಷ್ಟ

page 6 4
Published on

| ಕೆ.ಎನ್.ರಾಘವೇಂದ್ರ

ಮಂಡ್ಯ: ಆಲೆಮನೆಗಳಲ್ಲಿ ಕೆಲಸ ಮಾಡುತ್ತಿದ್ದ ಹೊರ ರಾಜ್ಯಗಳ ಕಾರ್ವಿುಕರು ಕರೊನಾ ಭೀತಿಯಿಂದ ತವರು ರಾಜ್ಯಗಳತ್ತ ಮುಖ ಮಾಡಿದ್ದು, ಬೆಲ್ಲ ಉತ್ಪಾದನೆ ತೀವ್ರ ಕುಸಿತಗೊಂಡಿದೆ.

ಲಾಕ್​ಡೌನ್ ಜಾರಿಗೊಂಡ ಬಳಿಕ ಆಹಾರ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ಬೆಲೆಗಳು ಏರುಪೇರಾಗಿವೆ. ಕೆಲ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದ್ದು, ಅದರಲ್ಲೂ ಮಂಡ್ಯ ಜಿಲ್ಲೆಯ ಆಲೆಮನೆಗಳಲ್ಲಿ ತಯಾರಾಗುವ ಬೆಲ್ಲಕ್ಕೆ ಬೇಡಿಕೆ ಅಧಿಕವಾಗಿದೆ. ಆದರೆ ಬೇಡಿಕೆಗೆ ತಕ್ಕಷ್ಟು ಉತ್ಪಾದನೆ ಸಾಧ್ಯವಾಗದೆ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೊರ ರಾಜ್ಯಗಳಿಂದಲೂ ಬೇಡಿಕೆ ಬರುತ್ತಿದೆಯಾದರೂ ಪೂರೈಕೆ ಸಾಧ್ಯವಾಗುತ್ತಿಲ್ಲ.

ಕಾರ್ವಿುಕರ ಕೊರತೆ: ಜಿಲ್ಲೆಯಲ್ಲಿ 539 ನೋಂದಾಯಿತ ಆಲೆಮನೆಗಳಿದ್ದು, ಸ್ಥಳೀಯರನ್ನು ಬಳಸಿಕೊಂಡು ಬೆಲ್ಲ ಉತ್ಪಾದನೆ ಮಾಡುತ್ತಿರುವವರಿಗೆ ಸಮಸ್ಯೆಯಾಗುತ್ತಿಲ್ಲ. ಆದರೆ, ಬಹುತೇಕ ಆಲೆಮನೆ ಮಾಲೀಕರು ಕಡಿಮೆ ವೇತನಕ್ಕೆ ಹೆಚ್ಚು ಸಮಯ ಕೆಲಸ ಮಾಡುತ್ತಾರೆ ಎಂಬ ಕಾರಣಕ್ಕೆ ಉತ್ತರಪ್ರದೇಶ ಮತ್ತು ಬಿಹಾರ ಮೂಲದ ಕಾರ್ವಿುಕರನ್ನು ನೆಚ್ಚಿಕೊಂಡಿದ್ದಾರೆ. ಆ ರಾಜ್ಯಗಳ ಕಾರ್ವಿುಕರು ಕರೊನಾ ಭೀತಿಯಿಂದ ತವರು ರಾಜ್ಯಗಳಿಗೆ ತೆರಳಿದ್ದು, ಶೇ.30 ಆಲೆಮನೆಗಳಲ್ಲಿ ಮಾತ್ರ ಬೆಲ್ಲ ಉತ್ಪಾದನೆಯಾಗುತ್ತಿದೆ. ಹೊರ ರಾಜ್ಯದ ಕಾರ್ವಿುಕರು ವಾಪಸ್ ಬರುವುದು ಅನುಮಾನವೇ ಆಗಿದ್ದು, ಇದು ಮಾಲೀಕರ ನಿದ್ದೆಗೆಡಿಸಿದೆ.

ಬೆಲೆಯಲ್ಲೂ ಏರಿಕೆ: ಲಾಕ್​ಡೌನ್ ಬಳಿಕ ಜಿಲ್ಲೆಯಲ್ಲಿ 84,595 ಕ್ವಿಂಟಾಲ್​ನಷ್ಟು ವಿವಿಧ ರೀತಿಯ ಬೆಲ್ಲ ಎಪಿಎಂಸಿಗೆ ಬಂದಿದ್ದು, ಕ್ವಿಂಟಾಲ್​ಗೆ ಕನಿಷ್ಠ 3,200 ರೂ. ಮತ್ತು ಗರಿಷ್ಠ 3,700 ರೂ. ಧಾರಣೆ ಇದೆ. ಕಳೆದ ವರ್ಷಕ್ಕೆ ಹೊಲಿಸಿದರೆ ಬೆಲ್ಲದ ದರದಲ್ಲಿ ಈ ವರ್ಷ 200-330 ರೂ. ಹೆಚ್ಚಳವಾಗಿದೆ.

ಚೇತರಿಸಿಕೊಳ್ಳುತ್ತಿದ್ದ ಉದ್ಯಮ: ಬರಗಾಲ, ನದಿ ವಿವಾದ ಮತ್ತಿತರ ಕಾರಣಗಳಿಂದ ಹಲವು ವರ್ಷಗಳಿಂದ ಸಂಕಷ್ಟದಲ್ಲಿದ್ದ ಜಿಲ್ಲೆಯ ಆಲೆಮನೆ ಉದ್ಯಮ ಈಗಷ್ಟೇ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳುತ್ತಿತ್ತು. ಈ ನಡುವೆ, 2017ರಿಂದ ಬೆಲ್ಲ ಉತ್ಪಾದನೆ ಸ್ವಲ್ಪ ಮಟ್ಟಿಗೆ ಹೆಚ್ಚಾಗುತ್ತಿತ್ತು.

ಇನ್ನೇನು ಉದ್ಯಮ ಕೈ ಹಿಡಿಯುತ್ತಿದೆ ಎನ್ನುವಷ್ಟರಲ್ಲಿ ಕರೊನಾ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿ ದರೆ ಈ ಬಾರಿ ಎಪಿಎಂಸಿಗೆ ಬಂದಿರುವ ಬೆಲ್ಲದ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆಲೆಮನೆ ನಡೆ ಸಲು ಕಾರ್ವಿುಕರ ಕೊರತೆ ಎದುರಾಗಿದೆ. | ನಂಜುಂಡಸ್ವಾಮಿ ಕಾರ್ಯದರ್ಶಿ, ಮಂಡ್ಯ ಎಪಿಎಂಸಿ ಆಲೆಮನೆ ಉದ್ಯಮ ಸಂಕಷ್ಟದಲ್ಲಿದೆ. ಸ್ಥಳೀಯ ಕಾರ್ವಿುಕರನ್ನು ಬಳಸಿಕೊಂಡು ಆಲೆಮನೆ ನಡೆಸುತ್ತಿದ್ದವರಿಗೆ ಹೆಚ್ಚಿನ ಸಮಸ್ಯೆಯಾಗಿಲ್ಲ. ಆದರೆ, ಹೊರ ರಾಜ್ಯದ ಕಾರ್ವಿುಕರನ್ನು ನೆಚ್ಚಿಕೊಂಡಿದ್ದವರಿಗೆ ಸಮಸ್ಯೆಯಾಗಿದೆ. | ಗೂಳೂರು ಕೃಷ್ಣ ಆಲೆಮನೆ ಮಾಲೀಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net