ವಿತ್ತೀಯ ಕೊರತೆ ನೀಗಿಸಲು ಸಾಹಸ

budget feb 2020
Published on

ಸರ್ಕಾರದ ಹಲವು ಪ್ರಯತ್ನಗಳ ನಡುವೆಯೂ ಆರ್ಥಿಕತೆ ಕುಸಿತದತ್ತಲೇ ಸಾಗುತ್ತಿರುವ ಹಿನ್ನೆಲೆಯಲ್ಲಿ ವಿತ್ತೀಯ ಕೊರತೆ (ಫಿಸ್ಕಲ್ ಡೆಫಿಸಿಟ್-ಎಫ್​ಡಿ) ನಿಯಂತ್ರಣ ಆಸೆಯನ್ನು ಕೈಬಿಟ್ಟು, ಕೇಂದ್ರ ಸರ್ಕಾರ ಬೆಳವಣಿಗೆಯತ್ತ ದೃಷ್ಟಿ ಹರಿಸಿದೆ.

2019-20ರಲ್ಲಿ ಸರ್ಕಾರದ ಒಟ್ಟು ಆದಾಯ ಹಾಗೂ ಖರ್ಚಿನ ನಡುವಿನ ವ್ಯತ್ಯಾಸವನ್ನು ದೇಶದ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇ.3.3 ಇಳಿಕೆ ಮಾಡಲು ಈ ಹಿಂದೆ ಸರ್ಕಾರ ಗುರಿ ಇರಿಸಿಕೊಂಡಿತ್ತು. ಆದರೆ ಇದು ಸಾಧ್ಯವಾಗಿಲ್ಲ. 2019-2020 ಹಣಕಾಸು ಕೊರತೆ ಪ್ರಮಾಣದ ಗುರಿಯನ್ನು ಶೇ.3.3ರಿಂದ ಶೇ.3.8ಕ್ಕೆ ನಿಗದಿಪಡಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಯುದ್ಧ, ರಾಷ್ಟ್ರೀಯ ವಿಪತ್ತು, ಉದ್ದೇಶಿತವಲ್ಲದ ಹಣಕಾಸು ಪರಿಣಾಮಗಳುಳ್ಳ ಸಂರಚನಾ ಬದಲಾವಣೆ, ಜಿಡಿಪಿ ಬೆಳವಣಿಗೆಯಲ್ಲಿ ತೀವ್ರ ಕುಸಿತದಂತಹ ತುರ್ತು ಸಂದರ್ಭಕ್ಕೆ ಮೀಸಲಿರುವ ವಿತ್ತೀಯ ಹೊಣೆಗಾರಿಕೆ ಹಾಗೂ ಆಯವ್ಯಯ ನಿರ್ವಹಣೆ(ಎಫ್​ಆರ್​ಬಿಎಂ) ಕಾಯ್ದೆಯ ನಿಯಮವನ್ನು ನಿರ್ಮಲಾ ಸೀತಾರಾಮನ್ ಬಳಸಿಕೊಂಡಿದ್ದಾರೆ. ಅದೇ ರೀತಿ 2020-21ರ ಹಣಕಾಸು ಕೊರತೆ ಪ್ರಮಾಣ ಗುರಿಯಲ್ಲೂ ಶೇ.0.5 ಹೆಚ್ಚಳ ಮಾಡಿಕೊಳ್ಳಲಾಗಿದೆ. 2020-21ರಲ್ಲಿ ಶೇ.3ರ ವಿತ್ತೀಯ ಕೊರತೆ ಗುರಿಯನ್ನು ಇದೀಗ ಶೇ.3.5ಕ್ಕೆ ಏರಿಕೆ ಮಾಡಲಾಗಿದೆ.

ತುರ್ತು ಸಂದರ್ಭಕ್ಕೆ ಬಳಕೆ: 2003ರಲ್ಲಿ ಎಫ್​ಆರ್​ಬಿಎಂ ಕಾಯ್ದೆಯನ್ನು ಅಳವಡಿಸಿಕೊಂಡಾಗ ದೇಶದ ಹಣಕಾಸು ಕೊರತೆ ಪ್ರಮಾಣ ಶೇ. 6ರಷ್ಟಿತ್ತು. ಹಣಕಾಸು ಕೊರತೆ ಪ್ರಮಾಣವನ್ನು 2020-21ರ ವೇಳೆಗೆ ಹಂತ ಹಂತವಾಗಿ ಶೇ.3ಕ್ಕೆ ಇಳಿಸಲು, ನಂತರ ಶೂನ್ಯಕ್ಕೆ ಸಮನಾಗಿಸಲು ವಿತ್ತೀಯ ಹೊಣೆಗಾರಿಕೆ ಹಾಗೂ ಆಯವ್ಯಯ ನಿರ್ವಹಣೆ(ಎಫ್​ಆರ್​ಬಿಎಂ) ಕಾಯ್ದೆಯನ್ನು ಕೇಂದ್ರ ಸರ್ಕಾರ ಅಳವಡಿಸಿಕೊಂಡಿದೆ. ಆದಾಯಕ್ಕಿಂತ ವೆಚ್ಚವು ವಿಪರೀತವಾದರೆ ಆರ್ಥಿಕತೆ ಕುಸಿಯುತ್ತದೆ ಎಂಬ ಸಾಮಾನ್ಯ ನಿಯಮದ ಮೇಲೆ ಈ ಕಾಯ್ದೆ ನಿಂತಿದೆ. 2019-20ರಲ್ಲಿ ಶೇ.3.3ಕ್ಕೆ, 2020-21ಕ್ಕೆ ಅಂತಿಮವಾಗಿ ಶೇ.3ಕ್ಕೆ ಇಳಿಸುವ ಮಹತ್ವಾಕಾಂಕ್ಷಿ ಗುರಿಯನ್ನು ಕೇಂದ್ರ ಸರ್ಕಾರ ಕಳೆದ ಬಜೆಟ್​ನಲ್ಲಿ ಘೋಷಿಸಿತ್ತು. ಆದರೆ ಯುದ್ಧ, ತೀವ್ರ ಆರ್ಥಿಕ ಕುಸಿತದ ಸಂದರ್ಭದಲ್ಲಿ ತನ್ನ ಗುರಿಯಿಂದ ಶೇ.0.5 ಹೆಚ್ಚಳ ಮಾಡಿಕೊಳ್ಳಬಹುದು, ಅಂದರೆ ಅಷ್ಟು ಪ್ರಮಾಣದಲ್ಲಿ ಹೆಚ್ಚು ಸಾಲ ಮಾಡಬಹುದು ಎಂದು ಎಫ್​ಆರ್​ಬಿಎ ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ. ಈ ಅಂಶವನ್ನು ಈಗ ಕೇಂದ್ರ ಸರ್ಕಾರ ಬಳಕೆ ಮಾಡಿಕೊಂಡಿದೆ.

2 ಲಕ್ಷ ಕೋಟಿ ರೂ. ಆದಾಯ ಕೊರತೆ

ಈ ವರ್ಷ ಸರ್ಕಾರ ನಿರೀಕ್ಷಿಸಿದ್ದಕ್ಕಿಂತ ಸುಮಾರು 2 ಲಕ್ಷ ಕೋಟಿ ರೂ. ಆದಾಯ ಕೊರತೆ ಆಗುವ ನಿರೀಕ್ಷೆ ಇದೆ. ತೆರಿಗೆ ಸಂಗ್ರಹದಲ್ಲಿ ಖೋತಾ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಯಿಂದ ಬಂಡವಾಳ ಹಿಂಪಡೆಯುವಲ್ಲಿನ ವಿಳಂಬ ಇದಕ್ಕೆ ಪ್ರಮುಖ ಕಾರಣ. ಈ ಕೊರತೆಯನ್ನು ಆದಷ್ಟೂ ನೀಗಿಸಲು ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿತು. ಕಾರ್ಪೆರೇಟ್ ತೆರಿಗೆಯನ್ನು ಕಡಿಮೆ ಗೊಳಿಸಲಾಯಿತು. ಕಾರ್ಪೆರೇಟ್ ಕಂಪನಿಗಳು ಇದರಿಂದ ದೊರೆತ ಲಾಭವನ್ನು ಹೂಡಿಕೆ ಮಾಡಿ ಆರ್ಥಿಕತೆ ಚೇತರಿಗೆ ಆಗುತ್ತದೆ, ಹೆಚ್ಚಿನ ತೆರಿಗೆ ಸಂಗ್ರಹವಾಗುತ್ತದೆ ಎಂಬುದು ಸರ್ಕಾರದ ಲೆಕ್ಕಾಚಾರವಾಗಿತ್ತು. ಆದರೆ ಮಾರುಕಟ್ಟೆಯಲ್ಲಿ ಬೇಡಿಕೆಯೇ ಇಲ್ಲದ್ದರಿಂದ ಕಾರ್ಪೆರೇಟ್ ಕಂಪನಿಗಳು ಲಾಭವನ್ನು ಹೂಡಿಕೆ ಮಾಡುವ ಬದಲಿಗೆ ತಮ್ಮ ಬಳಿಯೇ ಇರಿಸಿಕೊಂಡು ಕುಳಿತವು. ಇದೇ ಸಮಯಕ್ಕೆ ಅಸಮರ್ಪಕ ಮಳೆ ಹಾಗೂ ತರಕಾರಿಗಳ ಬೆಲೆ ಏರಿಕೆಯಿಂದ ನವೆಂಬರ್ ವೇಳೆಗೆ ಚಿಲ್ಲರೆ ಹಣದುಬ್ಬರ ಐದೂವರೆ ವರ್ಷದಲ್ಲೆ ಅತಿ ಹೆಚ್ಚಾಗಿತ್ತು. ವಿಶ್ವದ ಆರ್ಥಿಕತೆ ಕುಸಿತಕ್ಕೆ ಭಾರತವೇ ಪ್ರಮುಖ ಕಾರಣ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಆರೋಪಿಸಿತ್ತು. 2018-16ರ ಜಿಡಿಪಿ ದರವನ್ನು ಪೂರ್ವದ ಗುರಿ ಶೇ.6.8ರಿಂದ ಶೇ.5ಕ್ಕೆ ಕೇಂದ್ರ ಸರ್ಕಾರವೇ ತಗ್ಗಿಸಿತ್ತು.

ಷೇರುಪೇಟೆ ಭಾರಿ ಆಘಾತ

2020-21ನೇ ಸಾಲಿನ ಮುಂಗಡ ಪತ್ರ ಮಾರುಕಟ್ಟೆಯ ನಿರೀಕ್ಷೆಗೆ ತಕ್ಕಂತೆ ಇಲ್ಲದ ಕಾರಣಕ್ಕೆ ಷೇರುಪೇಟೆಯಲ್ಲಿ ಭಾರಿ ಕುಸಿತ ದಾಖಲಾಯಿತು. ಆರ್ಥಿಕ ಚೇತರಿಕೆಗೆ ಸರ್ಕಾರ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಹೂಡಿಕೆದಾರರು ಬಜೆಟ್ ಬಗ್ಗೆ ಭಾರಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದರೆ ಅವುಗಳು ಹುಸಿಯಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸೆನ್ಸೆಕ್ಸ್ 988 ಅಂಕ ಕುಸಿದು ದಿನದ ಅಂತ್ಯಕ್ಕೆ 40,000ಕ್ಕಿಂತ ಕಡಿಮೆ ಅಂಕಕ್ಕೆ ನಿಂತಿತು. ನಿಫ್ಟಿ ಕೂಡ 300.25 ಅಂಕ ಕುಸಿದು 11,661.85ಕ್ಕೆ ನಿಂತಿತು. ಇದು 2019ನೇ ವರ್ಷದ ಬಜೆಟ್ ದಿನಕ್ಕಿಂತಲೂ ಕಡಿಮೆ ಮಟ್ಟವಾಗಿದೆ.

ಉತ್ತೇಜನದ ಕೊರತೆ: ದೀರ್ಘಾವಧಿ ಹೂಡಿಕೆ ಲಾಭದ (ಎಲ್​ಟಿಸಿಜಿ) ಮೇಲಿನ ತೆರಿಗೆಯಲ್ಲಿ ಯಾವುದೇ ಪರಿಹಾರ ನೀಡದಿರುವುದರಿಂದ ಹಾಗೂ ಪುನಶ್ಚೇತನಕ್ಕೆ ವಲಯವಾರಾಗಿ ದೊಡ್ಡ ಪ್ರಮಾಣದ ಉತ್ತೇಜಕ ಕ್ರಮಗಳನ್ನು ಘೋಷಿಸದಿರುವುದರಿಂದ ಹೂಡಿಕೆದಾರರಿಗೆ ತೀವ್ರ ನಿರಾಸೆಯಾಗಿದೆ. ಕಾರ್ಪೆರೇಟ್ ತೆರಿಗೆ ಇಳಿಸುವ ಸಂಬಂಧದ ಉಪಕ್ರಮಗಳು ದೇಶೀಯ ಹಾಗೂ ಜಾಗತಿಕ ಹೂಡಿಕೆದಾರರಿಗೆ ಉತ್ತಮ ಸಂದೇಶ ರವಾನಿಸುತ್ತದೆ.

ಆರ್ಥಿಕ ತಜ್ಞರ ಸಲಹೆ

ವಿತ್ತೀಯ ಕೊರತೆ ಕಡಿಮೆಯಾದರೆ ಜಾಗತಿಕ ರೇಟಿಂಗ್ ಸಂಸ್ಥೆಗಳು ಉತ್ತಮ ಆರ್ಥಿಕತೆ ಎಂದು ಹೊಗಳುತ್ತವೆ. ಉತ್ತಮ ರೇಟಿಂಗ್ ನೀಡುತ್ತವೆ. ಆದರೆ ಉತ್ತಮ ರೇಟಿಂಗ್​ಗೆ ಜೋತುಬಿದ್ದರೆ ಆರ್ಥಿಕತೆ ಕುಸಿದು ಸಂಕಷ್ಟವಾಗುತ್ತದೆ. ಹೀಗಾಗಿ ಸರ್ಕಾರ ತುರ್ತು ನಿಯಮ ಬಳಕೆ ಮಾಡಬೇಕು ಎಂದು ಬಜೆಟ್ ಪೂರ್ವ ಸಭೆಗಳಲ್ಲಿ ಆರ್ಥಿಕ ತಜ್ಞರು ಪ್ರಧಾನಿ ಮೋದಿ, ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಒತ್ತಾಯಿಸಿದ್ದರು. ಅದರಂತೆ ಇದೀಗ ಆರ್ಥಿಕತೆಯೆ ಚೇತರಿಗೆ ನೀಡುವ ಸಲುವಾಗಿ ಹೆಚ್ಚಿನ ಸಾಲದ ಹೊರೆ ಹೊರಲು ಸರ್ಕಾರ ಸಿದ್ಧವಾಗಿದೆ.

ಏಕೆ ತುರ್ತು ಬಟನ್?

ಮೇಲ್ಮಟ್ಟದ ಆರ್ಥಿಕತೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ವಿಶೇಷ ನಿಯಮದಲ್ಲಿ ಆಶ್ರಯ ಪಡೆಯಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಸಾರ್ವಜನಿಕ ನಿಧಿಗಳಲ್ಲಿ ಹೂಡಿಕೆಗೆ ಕೊರತೆ ಇಲ್ಲದಂತೆ ಹಣಕಾಸು ಸ್ಥಿರತೆಗೆ ಇದು ಕಾರಣವಾಗಲಿದೆ. ಅದರಂತೆ ಮಾರುಕಟ್ಟೆಯಿಂದ ಸಾಲ ಪಡೆಯುವ ಪ್ರಮಾಣ 2019-20ರಲ್ಲಿ 4.99 ಲಕ್ಷ ಕೋಟಿ ರೂ. ಹಾಗೂ 2020-21ಕ್ಕೆ 5.36 ಲಕ್ಷ ಕೋಟಿ ರೂ. ಇರಲಿದೆ. ಹೆಚ್ಚುವರಿ ಸಾಲದ ಎಲ್ಲ ಹಣವನ್ನೂ ಬಂಡವಾಳ ಹೂಡಿಕೆಯಲ್ಲಿ ವಿನಿಯೋಗ ಮಾಡಲಾಗುತ್ತದೆ. ಇದು ಆರ್ಥಿಕತೆಗೆ ಅಗತ್ಯ ಚೇತರಿಕೆ ಯನ್ನು ನೀಡುತ್ತದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net