ಆ ಕ್ಷಣ... | ಪತಿಗಾಗಿ ಪರದಾಟ, ಫಜೀತಿ...

Aa kshana
Published on
ಆಂಧ್ರಪ್ರದೇಶ ಮೂಲದ ರೋಹಿಣಿ ನರ್ಸಿಂಗ್ ಪದವಿ ನಂತರ ತನ್ನ ಊರಿನ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸಕ್ಕೆ ಸೇರಿದಳು. ಅದೇ ಆಸ್ಪತ್ರೆಯ ಆವರಣದಲ್ಲಿದ್ದ ಔಷಧ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವಿನೋದ್ ಎನ್ನುವವನನ್ನು ಪ್ರೀತಿಸಿ ಲಗ್ನವಾದಳು. ವಿನೋದ್ ಹಲವಾರು ಚಟಗಳ ದಾಸ ಎಂದು ರೋಹಿಣಿಗೆ ನಂತರ ತಿಳಿಯಿತು. ತನ್ನ ಸಂಪಾದನೆಯಲ್ಲದೆ ರೋಹಿಣಿಯ ಸಂಪಾದನೆಯನ್ನೂ ಆತ ಚಟಗಳಿಗಾಗಿ ವ್ಯಯಿಸುತ್ತಿದ್ದ ಕಾರಣ ಸಂಸಾರ ನಿಭಾಯಿಸುವುದೇ ಕಷ್ಟವಾಯಿತು. ಪ್ರತಿದಿನವೂ ರೋಹಿಣಿಯೊಂದಿಗೆ ಜಗಳವಾಡುತ್ತಿದ್ದ ವಿನೋದ್ ಹಣ ನೀಡದಿದ್ದಾಗ ದೈಹಿಕ ಕಿರುಕುಳ ಕೊಡಲಾರಂಭಿಸಿದ. ಬೇಸತ್ತ ಆಕೆ ಅವನಿಂದ ದೂರವಾಗಿ ತವರು ಮನೆಗೆ ವಾಪಸಾದಳು. ಬೇರೊಂದು ಆಸ್ಪತ್ರೆಯಲ್ಲಿ ನರ್ಸ್ ಕೆಲಸಕ್ಕೆ ಸೇರಿದಳು. ಅವಳ ಅದೃಷ್ಟಕ್ಕೆ ವಿನೋದ್ ಸಂಪರ್ಕಿಸುವುದನ್ನೇ ಬಿಟ್ಟ.

ರೋಹಿಣಿ ಸೇರಿದ್ದ ಆಸ್ಪತ್ರೆಯಲ್ಲಿ ವಿಕ್ರಮ್ ಎನ್ನುವವನು ಎಕ್ಸ್​ರೇ ಟೆಕ್ನೀಷಿಯನ್ ಆಗಿದ್ದ. ಸ್ಪುರದ್ರೂಪಿಯಾಗಿದ್ದ ಆತ ಜನಾನುರಾಗಿಯೂ ಆಗಿದ್ದ. ಅವನ ಪರಿಚಯವಾದ ಕೂಡಲೇ ಅವನನ್ನು ಮದುವೆ ಮಾಡಿಕೊಳ್ಳುವ ಮನಸ್ಸು ರೋಹಿಣಿಗಾಯಿತು. ಯಾವುದೇ ಸಂಕೋಚವಿಲ್ಲದೆ ಆಕೆಯೇ ವಿವಾಹದ ಪ್ರಸ್ತಾಪ ಮಾಡಿದಳು. ತಾನು ಈಗಾಗಲೇ ಲಗ್ನವಾಗಿದ್ದು ಮೊದಲ ಗಂಡನನ್ನು ಬಿಟ್ಟಿದ್ದೇನೆ ಎನ್ನುವ ವಿಷಯವನ್ನೂ ಮುಚ್ಚುಮರೆಯಿಲ್ಲದೆ ಹೇಳಿದಳು. ವಿಕ್ರಮ್ ಸಮ್ಮತಿಸಿದಾಗ ಇಬ್ಬರೂ ದೇವಸ್ಥಾನವೊಂದರಲ್ಲಿ ಹಾರ ಬದಲಾಯಿಸಿಕೊಂಡು ಸತಿಪತಿಗಳಾದರು. ಲಗ್ನವಾಗಿ ಗಂಡನ ಮನೆಗೆ ಬಂದ ನಂತರವೇ ವಿಕ್ರಮ್ ಈಗಾಗಲೇ ಮದುವೆಯಾಗಿದ್ದು, ಮೂರು ಮಕ್ಕಳ ತಂದೆಯೆಂಬುದು ರೋಹಿಣಿಗೆ ತಿಳಿಯಿತು. ಆತ ಮೊದಲ ಪತ್ನಿ ಮತ್ತು ಮಕ್ಕಳನ್ನು ತನ್ನ ಹುಟ್ಟೂರಿನಲ್ಲಿಯೇ ಬಿಟ್ಟಿದ್ದು ತಾನಿನ್ನೂ ಅವಿವಾಹಿತ ಎಂದು ಬಿಂಬಿಸಿದ್ದುದು ರೋಹಿಣಿಗೆ ಆಘಾತವನ್ನುಂಟುಮಾಡಿತ್ತು. ‘ನೀನು ನನಗೇಕೆ ಮೋಸ ಮಾಡಿದೆ?’ ಎಂದು ರೋಹಿಣಿ ಕೇಳಿದಾಗ, ‘ಮದುವೆಯಾಗಲು ನೀನೇ ಮುಂದೆ ಬಂದದ್ದು, ನಾನಲ್ಲವಲ್ಲ, ಗಂಡನನ್ನು ಬಿಟ್ಟು ಬಂದ ನಿನ್ನನ್ನು ನಾನು ಮದುವೆಯಾದದ್ದೇ ನಿನ್ನ ಅದೃಷ್ಟ’ ಎಂದ ವಿಕ್ರಮ್ ರೋಹಿಣಿ ಸುಮ್ಮನಾಗಬೇಕಾಯಿತು. ಕೆಲ ವಾರಗಳ ನಂತರ ಆತ ಮೊದಲ ಹೆಂಡತಿ ಮತ್ತು ಮಕ್ಕಳನ್ನು ತನ್ನ ಜತೆಯೇ ವಾಸ ಮಾಡಲು ಕರೆತಂದಾಗ ಸವತಿಯರಲ್ಲಿ ಹೊಡೆದಾಟ ನಡೆದು ರೋಹಿಣಿ ವಿಕ್ರಮ್ನ್ನು ತೊರೆದು ಮತ್ತೆ ತವರಿಗೆ ವಾಪಸಾದಳು.

ಎರಡನೇ ಬಾರಿಯೂ ವೈವಾಹಿಕ ಜೀವನ ಹಾಳಾದದ್ದು ರೋಹಿಣೆಗೆ ತೀವ್ರ ಮಾನಸಿಕ ಆಘಾತ ತರಿಸಿತ್ತು. ಆಕೆ ಖಿನ್ನತೆಯಿಂದ ಬಳಲಲಾರಂಭಿಸಿದಳು. ಕೆಲಸಕ್ಕೆ ರಾಜೀನಾಮೆ ಕೊಟ್ಟು ಸದಾ ಚಿಂತೆಯಲ್ಲಿಯೇ ಮುಳುಗಿರುತ್ತಿದ್ದಳು. ಆಗ ಅವಳ ಮಾತಾಪಿತರು ಬೇರೆ ಊರಿಗೆ ಹೋದರೆ ಮನಸ್ಸು ಹಗುರವಾಗಬಹುದು ಎಂದು ಸೂಚಿಸಿದಾಗ ರೋಹಿಣಿ ಬೇರೆ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಕೆಲಸಕ್ಕೆ ಸೇರಿದಳು. ಆಕೆಯನ್ನು ಆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ನರ್ಸ್ ಆಗಿ ನೇಮಿಸಲಾಯಿತು. ಕಹಿ ಘಟನೆಗಳನ್ನು ಮರೆತ ರೋಹಿಣಿ ಹೊಸ ಜಾಗದಲ್ಲಿ ನಿಷ್ಠೆಯಿಂದ ಕೆಲಸ ಮಾಡತೊಡಗಿದಳು. ಆಗ ಅವಳ ವಯಸ್ಸು 34 ದಾಟಿತ್ತು. ಕೆಲದಿನಗಳ ಕಾಲ ಸಂಬಂಧಿಕರ ಮನೆಯಲ್ಲಿ ವಾಸವಿದ್ದ ರೋಹಿಣಿ ಆಸ್ಪತ್ರೆಯೇ ನಡೆಸುತ್ತಿದ್ದ ತುರ್ತು ಸೇವಾ ಸಿಬ್ಬಂದಿಯ ಹಾಸ್ಟೆಲಿನಲ್ಲಿ ಒಂದು ಕೋಣೆಗಾಗಿ ವಿನಂತಿಸಿದಳು. 50 ನರ್ಸ್​ಗಳಿದ್ದ ಹಾಸ್ಟೆಲಿನಲ್ಲಿ ಕೋಣೆಯೊಂದು ಅವಳಿಗೆ ದೊರೆಯಿತು. ತನಗಿಂತ ಚಿಕ್ಕವರೆಲ್ಲರೂ ಮದುವೆಯಾಗಿ ಸುಖದಿಂದ ಇರುತ್ತಿದುದ್ದನ್ನು ಕಂಡು ಆಕೆಗೆ ದುಃಖ ಉಮ್ಮಳಿಸುತ್ತಿತ್ತು. ತಾನು ಆಜೀವ ಪರ್ಯಂತ ಒಬ್ಬಂಟಿಯಾಗಿ ಉಳಿಯುತ್ತೇನೆನ್ನುವ ಚಿಂತೆ ಕಾಡತೊಡಗಿತ್ತು. ಒಂದು ದಿನ ರೋಹಿಣಿಯ ಮೊಬೈಲ್​ಗೆ ಪರಿಚಯವಿಲ್ಲದ ನಂಬರೊಂದರಿಂದ ಕರೆ ಬಂದಿತು. ಕರೆ ಮಾಡಿದ ಪುರುಷನೊಬ್ಬ ‘ಹಾಯ್ ಸುಜಾತಾ’ ಎಂದು ಮಾತಿಗಾರಂಭಿಸಿದಾಗ, ‘ನಾನು ಸುಜಾತಾ ಅಲ್ಲ. ನೀವು ರಾಂಗ್ ನಂಬರ್​ಗೆ ಕರೆ ಮಾಡಿದ್ದೀರಿ’ ಎಂದು ರೋಹಿಣಿ ಉತ್ತರಿಸಿ ಕರೆ ಮುಗಿಸಹೊರಟಾಗ, ಆತ, ‘ಸಾರಿ ಮೇಡಂ, ನಿಮ್ಮ ಧ್ವನಿ ಅತಿ ಮಧುರವಾಗಿದೆ, ನೀವು ಯಾರೆಂದು ಕೇಳಬಹುದೇ’ ಎಂದ. ರೋಹಿಣಿ ಖುಷಿಯಿಂದ ತನ್ನ ವಿವರಗಳನ್ನು ನೀಡಿ ಆತನ ಬಗ್ಗೆ ವಿಚಾರಿಸಿದಳು. ಜೋಸೆಫ್ ಎಂದು ಪರಿಚಯಿಸಿಕೊಂಡ ಆತ ತಾನು ಚೆನ್ನೈನ ಪಂಚತಾರಾ ಹೋಟೆಲೊಂದರಲ್ಲಿ ಮ್ಯಾನೇಜರ್ ಆಗಿರುವೆನೆಂದು ತಿಳಿಸಿದ. ಇಬ್ಬರೂ ಅರ್ಧ ಗಂಟೆ ಹರಟೆ ಹೊಡೆದರು.

ಮಾರನೆಯ ದಿನ ಜೋಸೆಫ್ ಮತ್ತೊಮ್ಮೆ ಕರೆ ಮಾಡಿ ಬಹಳ ಸಮಯ ಮಾತನಾಡಿದ. ಅವನ ಮುಖ ನೋಡಿರದಿದ್ದರೂ ರೋಹಿಣಿಗೆ ಅವನ ಸವಿಮಾತುಗಳು ಆಪ್ಯಾಯಮಾನವಾಗಿದ್ದವು. ಎರಡು ವಾರಗಳ ನಂತರ ಜೋಸೆಫ್ ವಿಡಿಯೋ ಕಾಲ್ ಮಾಡಿ ತನ್ನ ಚಹರೆಯನ್ನಲ್ಲದೆ ತಾನು ಕೆಲಸ ಮಾಡುತ್ತಿದ್ದ ಹೋಟೆಲಿನ ದೃಶ್ಯಗಳನ್ನೂ ತೋರಿಸಿದಾಗ ಆಕೆ ಆಶ್ಚರ್ಯಗೊಂಡಳು. ಉತ್ತಮ ಮಾತುಗಾರನಾಗಿದ್ದಲ್ಲದೇ ನೋಡಲೂ ಸ್ಮಾರ್ಟ್ ಆಗಿದ್ದ ಜೋಸೆಫ್​ನತ್ತ ರೋಹಿಣಿ ಅನುರಕ್ತಳಾದಳು. ‘ನೀನು ಅತಿ ಸುಂದರವಾಗಿರುವೆ’ ಎಂದು ಆತ ಪ್ರಶಂಸಿಸಿದಾಗ ಆಕೆ ನಾಚಿ ನೀರಾದಳು. ಮುಂದಿನ ದಿನಗಳಲ್ಲಿ ಇಬ್ಬರೂ ವಿಡಿಯೋ ಮೂಲಕ ಸಂಭಾಷಣೆ ಮಾಡತೊಡಗಿದರು. ಒಂದು ಸಂಜೆ ಇದ್ದಕ್ಕಿದ್ದಂತೆ ಜೋಸೆಫ್ ತನ್ನನ್ನು ಮದುವೆಯಾಗುವೆಯಾ ಎಂದು ಕೇಳಿದಾಗ ಆಕೆ ಒಂದು ಕ್ಷಣ ತಬ್ಬಿಬ್ಬಾದಳು. ‘ನಾವು ಬೇರೆ ಬೇರೆ ಮತಕ್ಕೆ ಸೇರಿದವರು. ಮದುವೆಯಾಗುವುದು ಹೇಗೆ?’ ಎಂದು ರೋಹಿಣಿ ಕೇಳಿದಾಗ, ‘ನಾನೇನೂ ನಿನ್ನನ್ನು ನನ್ನ ಧರ್ಮಕ್ಕೆ ಪರಿವರ್ತನೆಯಾಗು ಎನ್ನುತ್ತಿಲ್ಲ, ನಮ್ಮ ನಮ್ಮ ಧರ್ಮವನ್ನು ಆಚರಿಸೋಣ, ಮದುವೆಯಾಗುವುದು ನಮ್ಮ ಸುಖಕ್ಕಾಗಿ’ ಎಂದ. ಆತನ ತರ್ಕವನ್ನೊಪ್ಪಿದ ರೋಹಿಣಿ ಒಪ್ಪಿದಳು.

ರೋಹಿಣಿ ಜೋಸೆಫ್​ನನ್ನು ಕಾಣಲು ಚೆನ್ನೈಗೆ ಹೋದಳು. ಆತ ಅವಳ ಜತೆ ಸಾಕಷ್ಟು ಸಮಯ ಕಳೆದದ್ದಲ್ಲದೇ, ತನ್ನ ಸ್ನೇಹಿತರನ್ನು ಔತಣಕ್ಕೆ ಕರೆದು ಅವರೆದುರು ರೋಹಿಣಿಯ ಕೈಬೆರಳಿಗೆ ಉಂಗುರ ತೊಡಿಸಿ ಇಂದು ನಮ್ಮ ನಿಶ್ಚಿತಾರ್ಥವಾದ ಹಾಗಾಯಿತು ಎಂದ. ‘ನನಗೆ ಕೆಲವು ಆರ್ಥಿಕ ತೊಂದರೆಗಳಿರುವ ಕಾರಣ ಮುಂದಿನ ವರ್ಷ ಲಗ್ನವಾಗೋಣ’ ಎಂದು ಸೂಚಿಸಿದ. ಇಬ್ಬರ ನಡುವೆ ದೈಹಿಕ ಸಂಪರ್ಕವೂ ನಡೆಯಿತು. ಆರಂಭದಲ್ಲಿ ದಿನಕ್ಕೆರಡು ಬಾರಿ ಫೋನ್ ಮಾಡುತ್ತಿದ್ದ ಜೋಸೆಫ್ ಕಾಲಕ್ರಮೇಣ ಕರೆಗಳನ್ನು ಕಡಿತಗೊಳಿಸಿದಾಗ ತನ್ನ ಬಗ್ಗೆ ಅವನಿಗೆ ಆಸಕ್ತಿ ಕಡಿಮೆಯಾಗುತ್ತಿದೆ ಎನ್ನುವ ಭಾವನೆ ರೋಹಿಣಿಗೆ ಬಂದಿತು. ಅವನ ಜತೆಗಿನ ಸಂಬಂಧವೂ ಮುರಿದುಬೀಳಬಹುದೆಂಬ ಆತಂಕದಿಂದ ಒಂದು ದಿನ ಅವನಿಗೆ ವಿಡಿಯೋ ಕರೆಮಾಡುತ್ತಲೇ ವಿವಸ್ತ್ರಳಾದಳು. ಇದನ್ನು ಕಂಡು ಆನಂದಗೊಂಡ ಜೋಸೆಫ್ ‘ನಿನ್ನ ನಗ್ನ ವಿಡಿಯೋಗಳನ್ನು ಮಾಡಿ ಕಳುಹಿಸು’ ಎಂದು ಸೂಚಿಸಿದ. ಅಂತೆಯೇ ರೋಹಿಣಿ ವಿಡಿಯೋಗಳನ್ನು ವಾಟ್ಸಪ್ ಮೂಲಕ ಕಳುಹಿಸಿದಳು.

ಕೆಲ ದಿನ ನಂತರ ಜೋಸೆಫ್ ಅವಳಿಗೆ ಕರೆ ಮಾಡುವುದನ್ನೇ ನಿಲ್ಲಿಸಿ ಅವಳ ಕರೆಗಳಿಗೂ ಉತ್ತರಿಸಲಿಲ್ಲ. ಗಾಬರಿಗೊಂಡ ರೋಹಿಣಿ ಚೆನ್ನೈಗೆ ಹೋಗಿ ‘ನಿನಗೆ ನನ್ನ ಬಗ್ಗೆ ತಿರಸ್ಕಾರವೇಕೆ?’ ಎಂದು ಪ್ರಶ್ನಿಸಿದಳು. ಆತ ಉತ್ತರಿಸಲಿಲ್ಲ. ತಮ್ಮ ವಿವಾಹದ ಬಗ್ಗೆ ರ್ಚಚಿಸಹೊರಟಾಗ ಆತ ಹಾರಿಕೆಯ ಉತ್ತರಗಳನ್ನು ನೀಡಿದ. ತಾನು ಈ ಹಿಂದೆ ಇಬ್ಬರು ಗಂಡರನ್ನು ಬಿಟ್ಟ ವಿಷಯ ಆತನಿಗೆ ತಿಳಿದಿರಬಹುದು ಎಂಬ ಭಯ ಅವಳಿಗಾಯಿತು. ಜೋಸೆಫ್ ಬೇರೊಬ್ಬಳ ಜತೆಗೆ ಓಡಾಡುತ್ತಿದ್ದಾನೆ ಎಂದು ಆತನ ಸಹೋದ್ಯೋಗಿಯೊಬ್ಬ ಗುಟ್ಟಾಗಿ ರೋಹಿಣಿಗೆ ತಿಳಿಸಿದ. ಆಕೆ ಜೋಸೆಫ್​ನನ್ನು ಪ್ರಶ್ನಿಸಿದಾಗ, ‘ನಿನ್ನನ್ನೇ ನಾನು ಮದುವೆಯಾಗುವುದು’ ಎಂದು ಆಣೆ ಮಾಡಿದ. ಅವನ ಆಶ್ವಾಸನೆಯಿಂದ ಆಕೆಗೆ ವಿಶ್ವಾಸವೇನೂ ಮೂಡಲಿಲ್ಲ.

ತಮ್ಮ ಲಗ್ನವಾಗುವವರೆಗೆ ಜೋಸೆಫ್​ನನ್ನು ಹೇಗಾದರೂ ಮಾಡಿ ತನ್ನ ಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳಲು ಏನು ಮಾಡಬೇಕೆಂದು ರೋಹಿಣಿ ಯೋಚಿಸತೊಡಗಿದಾಗ ಒಂದು ಯೋಜನೆ ಹೊಳೆಯಿತು. ಅದರನ್ವಯ ಆಕೆ ತನ್ನ ಹಾಸ್ಟೆಲ್​ನ ಬಾತ್​ರೂಂನಲ್ಲಿ ಮೊಬೈಲ್ ಅಡಗಿಸಿಟ್ಟು ತನ್ನ ಸಹೋದ್ಯೋಗಿಯೊಬ್ಬಳು ಸ್ನಾನ ಮಾಡುವ ವಿಡಿಯೋ ತೆಗೆದು ಅದನ್ನು ಜೋಸೆಫ್​ಗೆ ಕಳುಹಿಸಿದಳು. ಇದನ್ನು ಕಂಡು ಖುಷಿಯಾದ ಆತ ಅಂತಹ ಇನ್ನಷ್ಟು ವಿಡಿಯೋಗಳನ್ನು ಕಳುಹಿಸಲು ಕೋರಿ ಯಾರಿಗೂ ತಿಳಿಯದಂತೆ ಹೇಗೆ ವಿಡಿಯೋ ಮಾಡಬಹುದು ಎನ್ನುವುದನ್ನೂ ಅವಳಿಗೆ ಹೇಳಿಕೊಟ್ಟ. ರೋಹಿಣಿ ಪ್ರತಿ ವಾರವೂ ಬೇರೆ ಬೇರೆ ನರ್ಸ್​ಗಳು ಸ್ನಾನ ಮಾಡುವ ದೃಶ್ಯಗಳನ್ನು ಚಿತ್ರಿಸಿ ಅವನ್ನು ಜೋಸೆಫ್​ಗೆ ಕಳುಹಿಸತೊಡಗಿದಳು. ಒಂದು ಬೆಳಿಗ್ಗೆ ಹಾಸ್ಟೆಲಿನಲ್ಲಿದ್ದ ನರ್ಸ್ ಒಬ್ಬಳು ಸ್ನಾನ ಮಾಡಲು ಹೋದಾಗ ಅಡಗಿಸಿಟ್ಟಿದ್ದ ಮೊಬೈಲ್ ಫೋನನ್ನು ಅಕಸ್ಮಾತ್ತಾಗಿ ಗಮನಿಸಿದಳು. ಆಗ ಅದು ರೆಕಾರ್ಡಿಂಗ್ ಮಾಡುತ್ತಿತ್ತು. ಗಾಬರಿಯಾದ ಆಕೆ ಸ್ನಾನ ಮುಗಿಸಿ ಬಂದು ಆ ಫೋನಿನಲ್ಲಿರುವ ಗ್ಯಾಲರಿ ಫೋಲ್ಡರ್ ನೋಡಿದಾಗ ಅದರಲ್ಲಿ ಹಾಸ್ಟೆಲಿನ ಇತರ ನರ್ಸ್​ಗಳೂ ಸ್ನಾನ ಮಾಡುತ್ತಿರುವ ವಿಡಿಯೋಗಳನ್ನು ಕಂಡಳು. ಕೂಡಲೇ ಆಕೆ ಆಸ್ಪತ್ರೆಯ ಆಡಳಿತಾಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತಂದಾಗ ಪೊಲೀಸರಿಗೆ ದೂರು ಹೋಯಿತು. ಈ ಕೃತ್ಯ ಮಾಡಿದ್ದು ರೋಹಿಣಿಯೇ ಎಂದು ತನಿಖೆಯಲ್ಲಿ ಸಾಬೀತಾಯಿತು.

ಜೋಸೆಫ್ ತನ್ನಿಂದ ದೂರವಾಗಬಾರದು ಎನ್ನುವ ಉದ್ದೇಶದಿಂದಲೇ ಹೀಗೆ ಮಾಡಿದ್ದೇನೆ ಹೊರತು ಸಹೋದ್ಯೋಗಿಗಳಿಗೆ ತೊಂದರೆ ಕೊಡಬೇಕೆಂದಲ್ಲ ಎಂದು ತಪ್ಪೊಪ್ಪಿಕೊಂಡ ಆಕೆ ‘ಮೂರನೆಯ ಬಾರಿಯೂ ವಿಧಿ ನನಗೆ ಕೈಕೊಟ್ಟಿತು’ ಎಂದಳು. ಆಕೆಯ ಕೃತ್ಯ ಮಾಹಿತಿ ತಂತ್ರಜ್ಞಾನ ಕಾಯಿದೆಯನ್ವಯ ಅಪರಾಧವಾದ ಕಾರಣ ರೋಹಿಣಿಯನ್ನು ಬಂಧಿಸಿ ತನಿಖೆಯ ನಂತರ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು. ಆಕೆಗೆ ಎರಡು ವರ್ಷದ ಕಾರಾಗೃಹ ಶಿಕ್ಷೆಯಾಯಿತು. ‘ನಮ್ಮ ಹೃದಯವೇ ನಮ್ಮನ್ನು ಮುನ್ನಡೆಸಿ ನಮ್ಮ ವಿಧಿಯನ್ನು ನಿರ್ಧರಿಸುತ್ತದೆ’ ಎಂದಿದ್ದಾಳೆ ಚಿಲಿಯ ಲೇಖಕಿ ಇಸಬೆಲ್ ಅಲಂಡೆ. ರೋಹಿಣಿ ಜೊತೆಗಾರನನ್ನು ಆಯ್ಕೆ ಮಾಡುವಾಗ ತನ್ನ ಹೃದಯವನ್ನವಲಂಬಿಸದೆ ಮಿದುಳನ್ನವಲಂಬಿಸಿದ್ದರೆ ಅವಳಿಂದು ಜೈಲಿನಲ್ಲಿರುತ್ತಿರಲಿಲ್ಲವೇನೋ!

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net