ಕೊಲೊರಾಡೋ ಕನ್ನಡ ಕೂಟ 'ಬೇವು-ಬೆಲ್ಲ' ಯುಗಾದಿ ಹಬ್ಬ; ಸಾಂಸ್ಕೃತಿಕ ವೈಭವದೊಂದಿಗೆ ಹೊಸ ಸಂವತ್ಸರಕ್ಕೆ ಸ್ವಾಗತ

new
Published on
 Castle Rock, CO – ಕೊಲೊರಾಡೋ ಕನ್ನಡ ಕೂಟವು ಏಪ್ರಿಲ್ 19, 2025 ರಂದು ಡಗ್ಲಸ್ ಕೌಂಟಿ ಪ್ರೌಢಶಾಲೆ ಸಭಾಂಗಣದಲ್ಲಿ 'ಬೇವು-ಬೆಲ್ಲ' ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿತು. 'ಬರ್ಫಿ ರಾಕ್ ಬ್ಯಾಂಡ್' ತಂಡದ ಕನ್ನಡ ಸಂಗೀತ ಕಾರ್ಯಕ್ರಮ, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಹೋಳಿಗೆ ಭೋಜನದೊಂದಿಗೆ ಸಮುದಾಯವು ಹೊಸ ‘ವಿಶ್ವಾವಸು’ ಸಂವತ್ಸರವನ್ನು ಭಾವಪೂರ್ಣವಾಗಿ ಸ್ವಾಗತಿಸಿತು.

ಕರುನಾಡಿನಿಂದ ಸಾವಿರಾರು ಮೈಲಿಗಳಾಚೆ ಅಮೇರಿಕಾದಲ್ಲಿ ಇರುವ ಊರು ಡೆನ್ವರ್, ಕೊಲೊರಾಡೋ. ಏಪ್ರಿಲ್ ತಿಂಗಳಿನಲ್ಲೂ, ಬಿಟ್ಟೆನೆಂದರೂ ಬಿಡಲಿ ಹ್ಯಾಂಗ ಎಂದು ಚಳಿಗಾಲವು ಆಗತಾನೆ ಚಿಗುರಿದ್ದ ಹಸಿರೆಲೆ, ನಳನಳಿಸುವ ಹೂವುಗಳ ಮೇಲೆಲ್ಲಾ ಸಣ್ಣಗೆ ಹಿಮ ಸುರಿಸಿ ಶನಿವಾರದ ಬೆಳಗಿನ ಸೂರ್ಯನಿಗೆ ಒಂದು ಸಣ್ಣ ಸವಾಲು ಹಾಕಿತ್ತು.

ಇತ್ತ ಕೊಲೊರಾಡೋ ಕನ್ನಡ ಕೂಟವು ಏರ್ಪಡಿಸಿದ್ದ ಯುಗಾದಿ ಕಾರ್ಯಕ್ರಮದ ಹಜಾರದ ಒಳಗಡೆ ಕಾಲಿಡುತ್ತಲೇ, ಆಗಲೇ ಸಣ್ಣಗೆ ಗಿಜಿಗುಟ್ಟುತಿದ್ದ ಜನ ಸಮೂಹ, ಬಣ್ಣ ಬಣ್ಣದ ಬಟ್ಟೆ ತೊಟ್ಟು ಓಡಾಡುತ್ತಿದ್ದ ಮಕ್ಕಳು, ಹೂವಿನಲ್ಲೆ ಜೋಡಿಸಿದ್ದ ರಂಗೋಲೆ, ಸ್ವಾಗತಕ್ಕೆಂದು ನಿಂತ ಸಣ್ಣ ಹುಡುಗ ಹುಡುಗಿಯರ ಮಂದಹಾಸ, ಬಂದ ಪರಿಚಯದವರನ್ನೆಲ್ಲ ನಗುತ್ತ ಅಪ್ಪಿ ಮಾತಾಡುತ್ತಿದ್ದ ಗುರುತಿನವರು, ಹೊರಗಿನ ಚಳಿಗೆ ಅಲ್ಲೇ ಇಟ್ಟಿದ್ದ ಬಿಸಿ ಬಿಸಿ ಕಾಫಿ, ಸೀರೆಯ ನೆರಿಗೆಯನ್ನು, ಮುಂಗುರಳನ್ನು ಮತ್ತೆ ಮತ್ತೆ ತೀಡಿ ಪತಿ ಮತ್ತು ಮಕ್ಕಳ ಜೊತೆಗೆ ಅಂದವಾಗಿ ನಿರ್ಮಿಸಿದ್ದ ಫೋಟೋಬೂಥ್ನ ಎದುರು ಸೆಲ್ಫಿ ಕ್ಲಿಕ್ಕಿಸುತ್ತಾ ಖುಷಿ ಪಡುತಿದ್ದ ಎಲ್ಲರಲ್ಲೂ, ಅಲ್ಲಿ ಹಬ್ಬದ ಸಂಭ್ರಮ ಸಡಗರ ಮನೆ ಮಾಡಿತ್ತು.

ಪ್ರಗ್ಯಾ ಮತ್ತು ಪ್ರಯಾಗ್ ಮಕ್ಕಳ ‘ಗೌರಿನಂದನ ಗಜಾನನ‘ ಶ್ಲೋಕದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಈ ಬಾರಿಯ ಯುಗಾದಿ ಹಬ್ಬದ ಆಚರಣೆಯ ಪ್ರಮುಖ ಆಕರ್ಷಣೆ, ಬೆಂಗಳೂರಿನ ದೇಸಿ ರಾಕ್ ಬ್ಯಾಂಡ್ ಬರ್ಫಿಯ ಸಂಗೀತ ಕಾರ್ಯಕ್ರಮ. ಬರ್ಫಿಯ ಗಾಯಕರು ವರುಣ್ ಮತ್ತು ಸಂಜನಾ ಕನ್ನಡ ಚಲನಚಿತ್ರದ ಅವಿಸ್ಮರಣೀಯ ಹಾಡುಗಳನ್ನು ಪ್ರೇಕ್ಷಕರಿಗಾಗಿ ತಂದಿಟ್ಟರು. ‘ಆಕಾಶ ದೀಪವು ನೀನು’, ‘ಯಾರೆ ನೀನು ರೋಜಾ ಹೂವೆ’, ‘ಗೀತಾಂಜಲಿ ... ಪುಷ್ಪಾಂಜಲಿ’ ಅಂತಹ ಹಳೆಯ ಹಿಟ್ ಹಾಡುಗಳನ್ನು ಹಾಡಿದ್ದಲ್ಲದೆ, ‘ಎಲ್ಲೋ ಜೋಗಪ್ಪ ನಿನ್ನ ಅರಮಾನೆ’, ‘ಕಥೆಯೊಂದ ಹೇಳುವೆ‘ ಅಂತಹ ಇತ್ತೀಚಿನ ಹಿಟ್ ಹಾಡುಗಳನ್ನೂ ಹಾಡಿದರು. ಹಿರಿಯರು ಕಿರಿಯರೆನ್ನದೆ ನೆರೆದಿದ್ದ ಪ್ರೇಕ್ಷಕರೆಲ್ಲರೂ ಅಣ್ಣಾವ್ರ ‘ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು … ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು’ ಹಾಡಿಗೆ ಕುಣಿದು ಕುಪ್ಪಳಿಸಿದರು.

ವರುಣ್ ರಾಮಚಂದ್ರ, ಸಂಜನಾ ಕುಮಾರ್, ಗೌತಮ್ ಹೆಬ್ಬಾರ್ (Flute), ಅಕ್ಷಯ ಮಠ (Drums), ಪ್ರಜ್ವಲ್ ಚಂದ್ರಶೇಖರ್ (Guitar), ಜತಿನ್ ದರ್ಶನ್ (Keyboard) ಒಳಗೊಂಡ ಬರ್ಫಿಯ ಭರ್ಜರಿ ಪ್ರದರ್ಶನದ ನಂತರ ಎಲ್ಲರಿಗೂ ಹಬ್ಬದೂಟ ಕಾದಿತ್ತು. ಆಹಾರ ಸಮಿತಿಯ ಅಕ್ಷತಾ ಉಡುಪ, ಮಾನಸಿ ಶಾಂಡಿಲ್ಯ ಮತ್ತು ಸ್ವಯಂಸೇವಕರು ಅಚ್ಚುಕಟ್ಟಾಗಿ 450 ಜನರಿಗೆ ಊಟದ ವ್ಯವಸ್ಥೆ ಮಾಡಿದ್ದರು. ಬೆಂಗಳೂರಿನಿಂದ ಹೋಳಿಗೆಯನ್ನು ತರಿಸಲಾಗಿತ್ತು. ಮಸಾಲ ವಡೆ, ಮೆಣಸಿನಕಾಯಿ ಬಜ್ಜಿ, ಚಪಾತಿ, ಬೆಂಡೆಕಾಯಿ ಪಲ್ಯ, ದೊಡ್ಡಮೆಣಸಿನಕಾಯಿ ಗೊಜ್ಜು, ಕೋಸಂಬರಿ, ಬಿಸಿಬೇಳೆ ಬಾತ್, ಅನ್ನ, ಸಾರು, ಮೊಸರನ್ನ, ಉಪ್ಪಿನಕಾಯಿ, ಹಪ್ಪಳ, ಸಂಡಿಗೆ ಜೊತೆ ಹೋಳಿಗೆ ಬಾಲ್ಯದ ನಮ್ಮೂರಿನ ಯುಗಾದಿಯ ಹಬ್ಬದೂಟ ನೆನಪನ್ನು ತಂದಿತ್ತು.

ಭೋಜನಾನಂತರ ಸ್ಥಳೀಯ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮವಿತ್ತು. ಕಾರ್ಯಕ್ರಮದ ಆದಿಯಲ್ಲಿ ಕೊಲೊರಾಡೋ ಕನ್ನಡ ಕೂಟದ ಅಧ್ಯಕ್ಷರಾದ ಶಶಿಕಿರಣ್ ಕುಣಿಗಲ್ ಕಾರ್ಯಕಾರಿ ಸಮಿತಿಯ ವಾಸುದೇವ ರಾವ್ ಮತ್ತು ಮೀನ ಕಿಕ್ಕೇರಿಯವರನ್ನು, ಮತ್ತು ವಿವಿಧ ಪದಾಧಿಕಾರಿಗಳನ್ನು (ತಂತ್ರಜ್ಞಾನ ಸಮಿತಿ - ರಾಮಚಂದ್ರ ಬೈಕಾಡಿ, ಹರ್ಷ ಕುಮಾರ್ & ರವಿ ಕುಮಾರ್; ಆಹಾರ ಸಮಿತಿ - ಅಕ್ಷತಾ ಉಡುಪ & ಮಾನಸಿ ಶಾಂಡಿಲ್ಯ; ಸಾಂಸ್ಕೃತಿಕ ಸಮಿತಿ - ಶಾಮಲ ತಿಮ್ಮರಾಜು, ಬಾಬು ಹೇರುಂಡೆ & ಅಕ್ಷತಾ ಕೃಷ್ಣಮೂರ್ತಿ; ಸಾಹಿತ್ಯ ಸಮಿತಿ - ಶ್ರುತಿ ಬಾಲಕೃಷ್ಣ & ಹರೀಶ್ ಸುಬ್ರಾಯ; ಯುವ ಸಮಿತಿ - ಸುಮ ಶೇಖರ್ & ಅರ್ಚನಾ ಭಟ್ಟ; ಕ್ರೀಡಾ ಸಮಿತಿ - ನಿತ್ಯ ಮದ್ದೋಡಿ; ಮಾಧ್ಯಮ ಸಮಿತಿ - ರಮೇಶ್ ಭೀಮಪ್ಪ; ಸಾಮಾಜಿಕ ಮಾಧ್ಯಮ ಸಮಿತಿ - ಮಾನಸ ಸತ್ಯನಾರಾಯಣ; ಸದಸ್ಯತ್ವ ಸಮಿತಿ - ಕಾಳಿ ಪ್ರಸಾದ್, ಸ್ವಯಂಸೇವಕ ಚಾಲನಾ ಸಮಿತಿ - ವಸುಧಾ ಹರೀಶ್) ಪರಿಚಯಿಸಿದರು ಹಾಗೂ ಕಾರ್ಯಕ್ರಮವನ್ನು ಔಪಚಾರಿಕವಾಗಿ ಶುರುವಾಗಲು ಚಾಲನೆ ನೀಡಿದರು. ಹೀಮಾನಿಯ ಗಣಪತಿ ಹಾಡು ಮತ್ತು ಸಾಕೇತ್, ಸಾತ್ವಿಕ್ ಮತ್ತು ಜ್ಯೋತಿಯವರ ಗಣಪತಿ ಶ್ಲೋಕದೊಂದಿಗೆ ಕಾರ್ಯಕ್ರಮದ ನಾಂದಿಯಾಯಿತು. ಸೂರ್ಯ, ಮನಸ್ವಿ, ಮೈರಾ, ಇರಾ, ಪ್ರಣವಿ, ಲಿರೀಕ್ಷ ಮತ್ತು ಚಿನ್ಮಯಿ ಪುಟಾಣಿಗಳ ಫ್ಯೂಷನ್ ಡ್ಯಾನ್ಸ್ ಬಹಳ ಚೆನ್ನಾಗಿತ್ತು.

ಅಭಿನವ ತಬಲ ವಾದ್ಯದಲ್ಲಿ 'ಹರಿವರಾಸನಮ್' ಹಾಡನ್ನ ಬಹಳ ಚೆನ್ನಾಗಿ ನುಡಿಸಿ ಪ್ರೇಕ್ಷಕರಲ್ಲಿ ಭಕ್ತಿ ಭಾವವನ್ನು ಮೂಡಿಸಿದನು. ರಿದಂ ರೆಬೆಲ್ಸ್ ನೃತ್ಯ ತಂಡದ ಆದ್ಯ, ಅರ್ಚಿತ, ಆರ್ಯ, ದಕ್ಷಿತ್, ಮೇಧ ಪುಟಾಣಿಗಳು ರಿಯಲ್ ಸ್ಟಾರ್ ಉಪೇಂದ್ರ ಹಾಡುಗಳಿಗೆ ಉತ್ಸಾಹಭರಿತ ನಾಟ್ಯ ಪ್ರದರ್ಶನ ನೀಡಿದರು. ಮೈರಾ ದೇವರನಾಮಗಳನ್ನು ಪಿಯಾನೋದಲ್ಲಿ ಬಹಳ ಚೆನ್ನಾಗಿ ನುಡಿಸಿ ಪ್ರೇಕ್ಷಕರಲ್ಲಿ ಧನ್ಯತಾ ಭಾವವನ್ನು ಮೂಡಿಸಿದಳು. ಗ್ರೋವ್ ಗಾಂಗ್ ನೃತ್ಯ ತಂಡದ ನೀನ, ಸುಮೇಧ, ಸೌಮ್ಯ, ಲಲಿತ, ನಾಗಶ್ರೀ, ಲಲಿತ, ಅಶ್ಮಿತಾ ನಾರಿಮಣಿಗಳ ಫ್ಯೂಷನ್ ನೃತ್ಯ ಚೇತೋಹಾರಿಯಾಗತ್ತು. ಪುಟ್ಟ ಆದ್ಯ ಪುರಂದರ ದಾಸರ ರಚನೆ 'ಭಾಗ್ಯದ ಲಕ್ಷ್ಮಿ ಬಾರಮ್ಮ' ಹಾಡನ್ನು ಮುದ್ದಾಗಿ ಹಾಡಿ ಪ್ರೇಕ್ಷಕರ ಮನ ಗೆದ್ದಳು. ಅಪ್ಸರ ನೃತ್ಯ ತಂಡದ ಅಶ್ವಿನಿ, ಆಕಾಂಕ್ಷಾ, ಅಂಜಲಿ, ದೀಪಾ, ಉಷಾ, ಶ್ರೇಯಸಿ 'ಡ್ಯಾನ್ಸ್ ಮೆಡ್ಲೆ' ಪ್ರದರ್ಶನ ಪ್ರಖ್ಯಾತ ಕನ್ನಡ ಮತ್ತು ಹಿಂದಿ ಚಲನ ಚಿತ್ರ ಹಾಡುಗಳನ್ನು ಒಳಗೊಂಡಿತ್ತು ಮತ್ತು ಅವರ ಭವ್ಯವಾದ ವೇಷಭೂಷಣ ಹಾಗು ನೃತ್ಯ ಪ್ರೇಕ್ಷಕರಲ್ಲಿ ನವ ಚೈತನ್ಯವನ್ನು ಮೂಡಿಸಿತು. ಐಶ್ವರ್ಯ ಮತ್ತು ಪ್ರಣತಿಯ ಕೃಷ್ಣ ಲೀಲಾ ನಾಟ್ಯ ಪ್ರದರ್ಶನ ಅಂದವಾಗಿತ್ತು. ಕೊನೆಯಲ್ಲಿ ಪೂರ್ಣಿಮಾ, ತೃಪ್ತಿ, ರೂಪ, ಸಿಂಧು, ಸೌಮ್ಯ ಸುಷ್ಮಾ ಅವರನ್ನು ಒಳಗೊಂಡ ಕೊಲೊರಾಡೋ ಗೆಳತಿಯರ ತಂಡ ಪ್ರಖ್ಯಾತ ಕನ್ನಡ ಚಲನಚಿತ್ರ ಹಾಡುಗಳ ಫ್ಯೂಷನ್ ಮನಮೋಹಕ ನೃತ್ಯ ಪ್ರೇಕ್ಷಕರ ಗಮನ ಸೆಳೆಯಿತು.

ಕೊಲೊರಾಡೋ ಕನ್ನಡಿಗರ ಯುವ ಸಮಿತಿಯ ಅನಿಕ, ಸ್ವರ, ರಿತಿಕ, ಗಾಯತ್ರಿ, ಅನಿರುದ್ಧ, ಸಾಕೇತ್, ನೀಲ್, ಅಕ್ಷಜ್ ಮತ್ತು ಶಮ ವಿವಿಧ ಸ್ವಯಂಸೇವೆ ಜವಾಬ್ದಾರಿಯನ್ನು ದಕ್ಷತೆಯಿಂದ ನಿಭಾಯಿಸಿದರು. ಶ್ರೀಮತಿ ಆಪರ್ಣ ಅವರು ಮನಮುಟ್ಟುವ ಸಂಭಾಷಣಾ ಶೈಲಿಯಲ್ಲಿ ಕಾರ್ಯಕ್ರಮವನ್ನು ನಿರೂಪಿಸುವ ಮೂಲಕ ಕಾರ್ಯಕ್ರಮಕ್ಕೆ ಶೋಭೆಯನ್ನಿತ್ತರು. ಅಂತಿಮವಾಗಿ ಕೊಲೊರಾಡೋ ಕನ್ನಡ ಕೂಟದ ಉಪಾಧ್ಯಕ್ಷರಾದ ವಾಸುದೇವ ರಾವ್ ಅವರು ಕಾರ್ಯಕರ್ತರಿಗೆ, ಸ್ವಯಂಸೇವಕರಿಗೆ ಹಾಗೂ ಈ ಕಾರ್ಯಕ್ರಮವನ್ನು ಸಾಧ್ಯವಾಗಿಸಿದ ಎಲ್ಲರಿಗೂ ಹೃತ್ಪೂರ್ವಕ ವಂದನಾರ್ಪಣೆಯನ್ನು ಅರ್ಪಿಸಿದರು. ಕೊಲೊರಾಡೋ ಕನ್ನಡ ಕೂಟದ ಯುಗಾದಿ ಹಬ್ಬಾಚರಣೆ ಯಶಸ್ವಿಯಾಗಿ ಮಂಗಳವಾಯಿತು. ಅತಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಕೊಲೊರಾಡೋ ಕನ್ನಡಿಗರ ಜನಸಮೂಹ, ಹೊರನಾಡಿನಲ್ಲಿ ಕನ್ನಡ ಸುಮವನ್ನು ಹರಡುವ ಸಂಘಟನಾಕಾರರ ಅವಿರತ ಪ್ರಯತ್ನಕ್ಕೂ, ಕನ್ನಡದ ಕಂಪನ್ನು ಅರಸಿ ಬಂದ ಕೊಲೊರಾಡೋ ಕನ್ನಡ ಮೂಲದ ಮಂದಿಯ ಮಾತೃಭಾಷೆಯ ಮೇಲಿನ ಒಲವಿಗೂ ಸುಂದರ ಸಾಕ್ಷಿಯಾಯಿತು.

unnamed.pngunnamed.pngunnamed.pngಜಂಟಿ ಲೇಖಕರು - ರಮೇಶ್ ಭೀಮಪ್ಪ, ಶ್ರುತಿ ಬಾಲಕೃಷ್ಣ, ಶಶಿಕಿರಣ್ ಕುಣಿಗಲ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net