25 ವರ್ಷಗಳ ಬಳಿಕ ಮತ್ತೆ ಕಮಾಲ್ ಮಾಡಲು ಒಂದಾದ ವಡಿವೇಲು-ಪ್ರಭುದೇವ

ಬ್ಯಾಂಗ್ ಬ್ಯಾಂಗ್ ಚಿತ್ರದ ಪೋಸ್ಟರ್​
ಬ್ಯಾಂಗ್ ಬ್ಯಾಂಗ್ ಚಿತ್ರದ ಪೋಸ್ಟರ್​
Published on

ಪ್ರಮುಖ ಮುಖ್ಯಾಂಶಗಳು

  • ಹಲವು ತಮಿಳು ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿರುವ ವಡಿವೇಲು-ಪ್ರಭುದೇವ
  • ‘ಮನದೈ ತಿರುಡಿವಿಟೈ’ ಚಿತ್ರವೇ ಇಬ್ಬರ ಕಾಂಬಿನೇಷನ್ ಕೊನೆಯ ಸಿನಿಮಾ
  • ಬ್ಯಾಂಗ್ ಬ್ಯಾಂಗ್ ಮೂಲಕ ಬಹುವರ್ಷಗಳ ಬಳಿಕ ಒಂದಾದ ನಟ-ಹಾಸ್ಯನಟ

ನಟ-ನಿರ್ದೇಶಕ ಪ್ರಭುದೇವ ಮತ್ತು ಹಾಸ್ಯ ನಟ ವಡಿವೇಲು ತಮಿಳು ಚಿತ್ರರಂಗದಲ್ಲಿ ಕಮಾಲ್ ಮಾಡಿದ್ದಾರೆ. ಈಗಾಗಲೇ ಅವರು ‘ಕದಲಾನ್’, ‘ರಾಸಯ್ಯ’, ‘ಲವ್‌ಬರ್ಡ್ಸ್’, ‘ಎಂಗಲ್ ಅಣ್ಣಾ’ ಸೇರಿ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ‘ಮನದೈ ತಿರುಡಿವಿಟೈ’ (2001) ಬಳಿಕ ಈ ಜೋಡಿ ಮತ್ತೆ ಒಟ್ಟಿಗೆ ನಟಿಸಿಲ್ಲ. ಇನ್ನು ಪ್ರಭುದೇವ ನಿರ್ದೇಶನದ ‘ಪೊಕಿರಿ’, ‘ವಿಲ್ಲು’ ಸಿನಿಮಾಗಳಲ್ಲಿ ವಡಿವೇಲು ಕಾಣಿಸಿಕೊಂಡಿದ್ದಾದರೂ, ಆ ಚಿತ್ರಗಳಲ್ಲಿ ನಟ ಅಭಿನಯಿಸಿರಲಿಲ್ಲ. ಇದೀಗ 25 ವರ್ಷಗಳ ಬಳಿಕ ಈ ಇಬ್ಬರು ತಮಿಳಿನ ‘ಬ್ಯಾಂಗ್ ಬ್ಯಾಂಗ್’ ಸಿನಿಮಾ ಮೂಲಕ ಮತ್ತೆ ಒಂದಾಗುತ್ತಿದ್ದಾರೆ. ಕಳೆದ ವರ್ಷ ಈ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಗಿತ್ತು. ಈ ಚಿತ್ರಕ್ಕೆ ‘ಮೈಕಲ್ ಮುಸಾಸಿ’ ಖ್ಯಾತಿಯ ಸ್ಯಾಮ್ ರೋಡ್ರಿಗಸ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿದ್ದು, ತೆರೆಗೆ ಬರಲು ಸಜ್ಜಾಗಿದೆ. ಇತ್ತೀಚೆಗೆ ಚಿತ್ರದ ಟೀಸರ್ ರಿಲೀಸ್ ಮಾಡಲಾಗಿದೆ. ಹಾಸ್ಯದ ಜತೆಗೆ ಭಾವನಾತ್ಮಕ ದೃಶ್ಯಗಳನ್ನು ಕಾಣಬಹುದು. ಮೊದಲಿಗೆ ಒಂದು ಪ್ರದೇಶವನ್ನು ಜಾಂಬಿಗಳು ವಶಪಡಿಸಿಕೊಳ್ಳುತ್ತಾರೆ. ಅದನ್ನು ಮರಳಿ ಪಡೆಯಲು ಪ್ರಭುದೇವ ಮತ್ತು ವಡಿವೇಲು ತೆರಳುತ್ತಾರೆ. ಇಲ್ಲಿ ಇಬ್ಬರು ಹೆಸರನ್ನು ‘ಪ್ರಭು ವೇಲು’ ಮತ್ತು ‘ವಡಿ ದೇವಾ’ ಎಂದು ಅದಲು ಬದಲು ಮಾಡಿಕೊಂಡಿದ್ದಾರೆ. ಇನ್ನು ಟೀಸರ್‌ನಲ್ಲಿ ನಟರು ಬಂದೂಕು ಹಿಡಿದು ಜಾಂಬಿಗಳ ವಿರುದ್ಧ ಹೋರಾಟಕ್ಕೆ ನಿಂತಿರುವುದು ಕಾಣಬಹುದು. ಕೊನೆಯಲ್ಲಿ ‘ಮನದೈ ತಿರುಡಿವಿಟೈ’ ಚಿತ್ರದ ‘ವೈ ಬ್ಲಡ್, ಸೇಮ್ ಬ್ಲಡ್’ ಎಂಬ ಸಂಭಾಷಣೆ ಬಳಸಿಕೊಂಡಿರುವುದು ವಿಶೇಷ. ಇದೇ ವರ್ಷಕ್ಕೆ ‘ಬ್ಯಾಂಗ್ ಬ್ಯಾಂಗ್’ ಸಿನಿಮಾ ತೆರೆಗೆ ಬರಲಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net