ಉತ್ತರ, ದಕ್ಷಿಣ ಎಂದು ವಿಭಜಿಸಬೇಡಿ! : ಸೌತ್ ಇಂಡಸ್ಟ್ರಿ ಬಗೆಗಿನ ಬಾಲಿವುಡ್ ನಟಿಯ ಹೇಳಿಕೆ ಖಂಡಿಸಿದ ನಟಿ ರೆಜಿನಾ REGINA CASSANDRA

ದಕ್ಷಿಣ ಭಾರತ ಚಿತ್ರರಂಗದ ಕುರಿತು ಇತ್ತೀಚೆಗೆ ಬಾಲಿವುಡ್ ನಟಿಯರು ನೀಡುತ್ತಿರುವ ಹೇಳಿಕೆಯಿಂದಾಗಿ ಉತ್ತರ-ದಕ್ಷಿಣ ಎಂಬ ಕಂದಕ ಮತ್ತಷ್ಟು ದೊಡ್ಡದಾಗಲಿದೆ ಎಂಬ ಚರ್ಚೆ ಶುರುವಾಗಿದೆ. ಕೆಲ ದಿನಗಳ ಹಿಂದಷ್ಟೆ ನಟಿ ಜಾಹ್ನವಿ ಕಪೂರ್ ತೆಲುಗಿನ ‘ಪೆದ್ದಿ’ ಚಿತ್ರದ ಬೋಲ್ಡ್ ದೃಶ್ಯಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು
ರೆಜಿನಾ ಕೆಸಾಂಡ್ರಾ
ರೆಜಿನಾ ಕೆಸಾಂಡ್ರಾ
Published on: 

ದಕ್ಷಿಣ ಭಾರತ ಚಿತ್ರರಂಗದ ಕುರಿತು ಇತ್ತೀಚೆಗೆ ಬಾಲಿವುಡ್ ನಟಿಯರು ನೀಡುತ್ತಿರುವ ಹೇಳಿಕೆಯಿಂದಾಗಿ ಉತ್ತರ-ದಕ್ಷಿಣ ಎಂಬ ಕಂದಕ ಮತ್ತಷ್ಟು ದೊಡ್ಡದಾಗಲಿದೆ ಎಂಬ ಚರ್ಚೆ ಶುರುವಾಗಿದೆ. ಕೆಲ ದಿನಗಳ ಹಿಂದಷ್ಟೆ ನಟಿ ಜಾಹ್ನವಿ ಕಪೂರ್ ತೆಲುಗಿನ ‘ಪೆದ್ದಿ’ ಚಿತ್ರದ ಬೋಲ್ಡ್ ದೃಶ್ಯಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಮತ್ತೊಬ್ಬ ನಟಿ ರಾಧಿಕಾ ಅಪ್ಟೆ ಕೂಡ ತಾವು ನಟಿಸಿದ್ದ ತೆಲುಗು ಚಿತ್ರವೊಂದರಲ್ಲಿ ಹಿರಿಯ ವಯಸ್ಸಿನ ಹೀರೋಗಳ ಜತೆ ಸಣ್ಣ ವಯಸ್ಸಿನ ನಾಯಕಿಯರು ಡೂಯೆಟ್ ಹಾಡುವ ವಿಚಾರವನ್ನು ವ್ಯಂಗ್ಯವಾಡಿದ್ದರು. ಅವರ ಹೇಳಿಕೆಯು ದಕ್ಷಿಣ ಚಿತ್ರರಂಗದ ಅಭಿಮಾನಿಗಳ ಕಣ್ಣು ಕೆಂಪಾಗಿಸಿತ್ತು. ಇದೀಗ ದಕ್ಷಿಣ ಭಾರತದ ನಟಿ ರೆಜಿನಾ ಕೆಸಾಂಡ್ರಾ ಬಾಲಿವುಡ್ ನಟಿಯರ ಹೇಳಿಕೆಯನ್ನು ಖಂಡಿಸಿದ್ದು, ‘ತಪ್ಪು ನಡೆದಾಗ ದಕ್ಷಿಣ-ಉತ್ತರ ಎಂದು ವಿಭಜಿಸಬೇಡಿ’ ಎಂದಿದ್ದಾರೆ. ‘ಸೌತ್ ಸಿನಿಮಾಗಳಲ್ಲಿ ನಟಿಸುವಾಗ ಆದ ತಪ್ಪುಗಳನ್ನೇ ಬಾಲಿವುಡ್‌ನ ಕೆಲ ನಟ-ನಟಿಯರು ಒತ್ತಿ ಒತ್ತಿ ಹೇಳುತ್ತಾರೆ. ತಪ್ಪುಗಳಾದಾಗ ದಕ್ಷಿಣ- ಉತ್ತರ ಎಂದು ವಿಭಜಿಸಬೇಡಿ. ಸಿನಿಮಾಗಳಲ್ಲಿ ಯಾವಾಗ ಅಹಿತಕರ ಅನಿಸುತ್ತದೆಯೇ ಕೂಡಲೇ ಹೊರಬನ್ನಿ. ಅಂದಿನ ಪರಿಸ್ಥಿತಿಯನ್ನು ಒಪ್ಪಿಕೊಳ್ಳಲು ಬೇರೆ ದಾರಿಯೇ ಇರಲಿಲ್ಲ ಎಂಬ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ನನ್ನನ್ನೂ ಬಾಲಿವುಡ್‌ನಲ್ಲಿ ಸರಿಯಾಗಿ ನೋಡಿಕೊಂಡಿಲ್ಲ. ‘ಕೇಸರಿ 2’ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರೂ ನನ್ನನ್ನು ಪ್ರಚಾರದಿಂದ ಸಂಪೂರ್ಣವಾಗಿ ಹೊರಗಡೆ ಇಡಲಾಗಿತ್ತು. ಆದರೆ, ಅದನ್ನೇ ಹೇಳಿಕೊಂಡು ನಾನು ತಿರುಗಾಡಲಿಲ್ಲ’ ಎಂದು ಬಾಲಿವುಡ್ ನಟಿಯರಿಗೆ ರೆಜಿನಾ ಟಾಂಗ್ ನೀಡಿದ್ದಾರೆ. ರೆಜಿನಾ ಅಭಿನಯದ ‘ಮೂಕುತಿ ಅಮ್ಮನ್ 2’ ಶುಕ್ರವಾರ ತೆರೆಕಂಡಿದ್ದು, ಅವರು ಸದ್ಯ ಹಿಂದಿಯ ‘ದ ವ್‌ಸೈ’, ‘ಸೆಕ್ಷನ್ 108’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. -ಏಜೆನ್ಸೀಸ್