ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಸಂಘಟಿತ ಹೊಣೆಗಾರಿಕೆ: ಪ್ರಧಾನಿ ನರೇಂದ್ರ ಮೋದಿ

PM Modi's address at the inaugural session of the Governors’ Conference on NEP 2020
Published on

ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಷ್ಠಾನವು ಸಂಘಟಿತ ಹೊಣೆಗಾರಿಕೆಯಾಗಿದ್ದು, ಎಲ್ಲ ಪಾಲುದಾರರು ಅದನ್ನು ಹಾಗೆಯೇ ಸ್ವೀಕರಿಸಿಕೊಂಡು ಕೆಲಸ ಮಾಡಬೇಕು. ಸ್ವಾಭಿಮಾನಿ ಭಾರತ ನಿರ್ಮಾಣಕ್ಕೆ ಇದು ಅವಶ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ಸೋಮವಾರ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಕುರಿತ ರಾಜ್ಯಪಾಲರ ಸಮಾವೇಶವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುತ್ತ ಈ ವಿಚಾರ ತಿಳಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿ 1986ರ ನಂತರದಲ್ಲಿ ಇದೇ ಮೊದಲ ಸಲ ಬದಲಾವಣೆ ಮಾಡಲಾಗುತ್ತಿದ್ದು, ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಆಮೂಲಾಗ್ರ ಪರಿಷ್ಕರಣೆ ಮಾಡಲಾಗಿದೆ. ಭವಿಷ್ಯದ ಉತ್ತಮ ಜೀವನಕ್ಕಾಗಿ ಪ್ರತಿಯೊಬ್ಬರೂ ಆರಂಭಿಕ ಹಂತದಿಂದಲೇ ಕೌಶಲ ಅಭಿವೃದ್ಧಿಗೆ ಒತ್ತು ನೀಡಿದ ಶಿಕ್ಷಣ ವ್ಯವಸ್ಥೆ ಜಾರಿಗೆ ಬರುತ್ತಿದೆ. ಎಲ್ಲರೂ ಅವರವರ ಆಸಕ್ತಿಗೆ ಅನುಗುಣವಾದ ವಿಷಯಗಳನ್ನೇ ಕಲಿಯಲಿದ್ದಾರೆ ಎಂದು ಪ್ರಧಾನಿ ಹೇಳಿದರು.

ಭಾರತವು ಪುರಾತನ ಕಾಲದಿಂದಲೂ ಶಿಕ್ಷಣಕ್ಕೆ ಹೆಸರುವಾಸಿಯಾಗಿತ್ತು. ಸರ್ಕಾರವೂ ಈಗ 21ನೇ ಶತಮಾನದ ನಾಲೆಜ್​ ಎಕಾನಮಿ ಹಬ್​ ಆಗಿ ಭಾರತವನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಈ ಹೊಸ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವುದು ನಮ್ಮೆಲ್ಲರ ಸಂಘಟಿತ ಹೊಣೆಗಾರಿಕೆಯಾಗಿದೆ. ಹೆಚ್ಚು ಹೆಚ್ಚು ಪಾಲಕರು, ವಿದ್ಯಾರ್ಥಿಗಳು ಇದರಲ್ಲಿ ಕೈ ಜೋಡಿಸಿಕೊಂಡಷ್ಟು ಯಶಸ್ಸು ಸುಲಭ ಸಾಧ್ಯವಾಗಲಿದೆ ಎಂದು ಅವರು ಹೇಳಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net