ವಿಶ್ವಕರ್ಮ ಸಮುದಾಯದ ಕುಲಶಾಸ್ತ್ರ ಅಧ್ಯಯನ: ನಗರದಲ್ಲಿ ಮಾಹಿತಿ ಸಂಗ್ರಹಿಸಿದ ಸಮಿತಿ ಸದಸ್ಯರು

1 (2)
Published on

ಮಂಡ್ಯ: ವಿಶ್ವಕರ್ಮ ಸಮುದಾಯದ ಕುಲಶಾಸತ್ರ ಅಧ್ಯಯನ ನಡೆಸಲು ರಾಜ್ಯ ಸರ್ಕಾರ ನೇಮಕ ಮಾಡಿರುವ ಸಮಿತಿಯ ಸದಸ್ಯರಾದ ಡಾ.ಮಹದೇವ ಹಾಗೂ ಡಾ.ಕೃಷ್ಣಮೂರ್ತಿ ಅವರು ನಗರದ ವಿಶ್ವಕರ್ಮ ಪ್ರಾರ್ಥನಾ ಮಂದಿರದಲ್ಲಿ ಸಮುದಾಯದವರಿಂದ ಮಾಹಿತಿ ಸಂಗ್ರಹಿಸಿದರು.

ಸಭೆಯಲ್ಲಿ ಸಮುದಾಯದ ಮುಖಂಡರು ಪಾಲ್ಗೊಂಡು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಓಜ ಎಂದರೆ ಊರಿನ ಮುಖಂಡ ಎಂಬ ಅರ್ಥವಿದೆ. ಆದರೆ ಅದು ಅಪಪ್ರಂಶವಾಗಿ ವಾಜ ಎಂದಾಗಿದೆ. ಸೂರ್ಯವಂಶದವರು ಎಂಬ ಅರ್ಥದಲ್ಲಿ ಅರ್ಕಶಾಲಿ ಎಂಬ ಹೆಸರಿತ್ತು. ಅದು ಕಾಲಾನಂತರದಲ್ಲಿ ಅಕ್ಕಸಾಲಿಗ ಎಂದಾಯಿತು. ಹೀಗೆ ವಿಶ್ವಕರ್ಮರನ್ನು ಹತ್ತಾರು ಹೆಸರಿನಿಂದ ಕರೆಯಲಾಗುತ್ತದೆ. ಮನುಷ್ಯ ಜನ್ಮ ತಾಳುವುದರಿಂದ ಹಿಡಿದು ಅಂತ್ಯಕ್ರಿಯವರೆಗೂ ವಿಶ್ವಕರ್ಮರ ಅವಶ್ಯಕತೆ ಇದೆ. ಎಲ್ಲ ಜನರ ವೃತ್ತಿ ಬದುಕಿಗೆ ಅಗತ್ಯವಾದ ಉಪಕರಣಗಳನ್ನು ತಯಾರಿಸಿಕೊಡುವ ಸಮುದಾಯ ಇದಾಗಿದೆ. ಆದರೂ ನಾವು ಸಮಾಜದ ಮುಖ್ಯವಾಹಿನಿಗೆ ಬರಲಾಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ವಿಶ್ವಕರ್ಮರ ಬದುಕು ಶೋಚನೀಯ ಸ್ಥಿತಿಯಲ್ಲಿದೆ. ಶೈಕ್ಷಣಿಕ, ಔದ್ಯೋಗಿಕ, ರಾಜಕೀಯ ಕ್ಷೇತ್ರಗಳಲ್ಲಿ ಯಾವುದೇ ಪ್ರಗತಿ ಸಾಧಿಸಲಾಗಿಲ್ಲ ಎಂಬ ಬೇಸರಿಸಿದರು.

ವಿಶ್ವಕರ್ಮ ಸಮಾಜದ ಅಧ್ಯಕ್ಷ ತಿರುಮಲಾಚಾರ್, ಮುಖಂಡ ವೈ.ಡಿ.ಶ್ರೀನಿವಾಸ್‌ಮೂರ್ತಿ, ನಗರಸಭೆ ಸದಸ್ಯ ಬಿ.ಕುಮಾರ್, ಮಾಜಿ ಸದಸ್ಯ ಪ್ರಸನ್ನ, ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ದೊಡ್ಡಾಚಾರ್, ಪಾಂಡವಪುರ ದೇವರಾಜ್, ಮಳವಳ್ಳಿ ಪ್ರಕಾಶ್, ಬ್ಯಾಡ್ರಳ್ಳಿ ನಿಂಗರಾಜ್, ನರಸಿಂಹಾಚಾರ್ ಇತರರಿದ್ದರು.

ಒಂದು ವರ್ಷ ಕಾಲದ ಸಮಗ್ರ ಅಧ್ಯಯನ: ಸರ್ಕಾರ ವಿಶ್ವಕರ್ಮ ಸಮುದಾಯದ ಕುಲಶಾಸ್ತ್ರ ಅಧ್ಯಯನ ನಡೆಸಲು ಮೈಸೂರು ವಿಶ್ವವಿದ್ಯಾನಿಲಯದ ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರದ ಪ್ರೊ.ಡಿ.ಸಿ.ನಂಜುಂಡ ಅವರ ನೇತೃತ್ವದಲ್ಲಿ ಸಮಿತಿದೆ ಎಂದು ಸಹ ಸಂಶೋಧಕ ಡಾ.ಮಹದೇವ ಹೇಳಿದರು.

ಸಮುದಾಯದ ಕುಲಶಾಸ್ತ್ರ ಅಧ್ಯಯನ ನಡೆಸುವುದು ಎಂದರೆ ಆ ಸಮುದಾಯದ ಪೂರ್ವ ಇತಿಹಾಸ, ಕಲೆ, ಬದುಕು, ಬವಣೆ, ವೃತ್ತಿ, ಜೀವನಶೈಲಿ, ಪೂರ್ವಾಪರ ಇತಿಹಾಸ ಕಲೆ ಹಾಕುವುದಾಗಿದೆ. ಅದರಂತೆ ನಾವು ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಅಂದರೆ, ವಿಶ್ವಕರ್ಮ ಸಮುದಾಯದ ಐತಿಹಾಸಿಕ, ಸಾಮಾಜಿಕ, ಕೌಶಲಭರಿತ ವೃತ್ತಿ ಜೀವನ ಮುಂತಾದ ಪ್ರಾಮುಖ್ಯತೆ ಹೊಂದಿರುವ ಸ್ಥಳಗಳಿಗೆ ಭೇಟಿ ನೀಡಿ, ಅಲ್ಲಿನ ಸ್ಥಳ ಪುರಾಣ ಮತ್ತು ಜನ ಜೀವನ ಕುರಿತಂತೆ ಮಾಹಿತಿ ದಾಖಲಿಸುವುದು. ವಿಶ್ವಕರ್ಮರ ಪಂಚ ಕಸುಬುಗಳಾದ ಬಡಗಿ, ಕಮ್ಮಾರಿಕೆ, ಆಭರಣ ತಯಾರಿಕೆ, ಲೋಹ ಹಾಗೂ ಕಾಷ್ಟ ಶಿಲ್ಪಿ ಮುಂತಾದ ವೃತ್ತಿ ಅವಲಂಬಿಸಿರುವವರನ್ನು ಭೇಟಿ ಮಾಡಿ ವಿಸ್ತೃತ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅದರಂತೆ ಮಂಡ್ಯ ಜಿಲ್ಲೆಯ ಚಿಕ್ಕಲ್ಲೂರು, ಹಲಗೂರಿನ ಜಿಲ್ಲಾಪುರ, ನಾಗಮಂಗಲದ ಮೌನೇಶ್ವರ ಸೇರಿದಂತೆ ಹಲವು ಸ್ಥಳಗಳಿಗೂ ಭೇಟಿ ನೀಡಿ ಮಾಹಿತಿ ಕಲೆಹಾಕಲಾಗುತ್ತಿದೆ. ಒಂದು ವರ್ಷದಲ್ಲಿ ಈ ಎಲ್ಲ ಮಾಹಿತಿಯನ್ನು ಅಭ್ಯಸಿಸಿ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net