ನೂಯಿ ಇಂದಿರಾನಗರದಲ್ಲಿ ಕುಸಿದು ಬಿದ್ದ ಮನೆ: ಸರ್ಕಾರದ ಪರಿಹಾರಕ್ಕೆ ಶಿಫಾರಸು ಭರವಸೆ

house
ಭಾರಿ ಮಳೆಗೆ ಗುರುವಾರ ಅಡ್ಡೂರು ಗ್ರಾಮದ ನೂಯಿ ಇಂದಿರಾನಗರದಲ್ಲಿ ಮನೆ ಸಂಪೂರ್ಣ ಕುಸಿದಿದೆ.
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಗುರುವಾರ ಸಂಜೆ ಅಡ್ಡೂರು ಗ್ರಾಮದ ನೂಯಿ ಇಂದಿರಾನಗರದಲ್ಲಿ ಮನೆಯೊಂದು ಸಂಪೂರ್ಣ ಕುಸಿದಿದ್ದು, ತೀವ್ರ ನಷ್ಟ ಉಂಟಾಗಿದೆ.ಧನಲಕ್ಷ್ಮೀ ಎಂಬುವರ 30 ವರ್ಷ ಹಳೆಯದಾದ ಮಣ್ಣಿನ ಮನೆ ಕುಸಿದಿದೆ. ಸಂಜೆ ಹೊತ್ತು ಮನೆ ಹಿಂಬದಿಯಲ್ಲಿ ಹೊಗೆ ಬೀಳುತ್ತಿರುವುದು ಗಮನಕ್ಕೆ ಬಂದ ತಕ್ಷಣ ಮನೆಯಿಂದ ಹೊರ ಬಂದಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಮನೆ ಗೋಡೆ ಹಾಗೂ ಮೇಲ್ಛಾವಣಿ ಸಂಪೂರ್ಣ ಕುಸಿದಿದೆ. ಸದ್ಯ ಮನೆ ಕಳೆದುಕೊಂಡಿರುವ ಧನಲಕ್ಷ್ಮೀ ಹಾಗೂ ಇಬ್ಬರು ಮಕ್ಕಳು ನೆರೆಮನೆಯಲ್ಲಿದ್ದಾರೆ.

ಮನೆ ಕಳೆದುಕೊಂಡು ಕಂಗಾಲಾಗಿದ್ದೇನೆ. ಮಳೆಗಾಲ ಮುಗಿಯುವವರೆಗೆ ಬಾಡಿಗೆ ಮನೆಯಲ್ಲಿ ಇರಬೇಕಾಗುತ್ತದೆ. ಬಡ ಕುಟುಂಬಕ್ಕೆ ಸರ್ಕಾರದ ನೆರವು ಆಶಿಸಿದ್ದೇನೆ ಎಂದು ಧನಲಕ್ಷ್ಮೀ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಗುರುಪುರ ಪಿಡಿಒ ಪಂಕಜಾ ಶೆಟ್ಟಿ, ಗ್ರಾಮ ಆಡಳಿತಾಧಿಕಾರಿ ಶಿಲ್ಪಾ, ಪಂಚಾಯಿತಿ ಸದಸ್ಯ ಯಶವಂತ ಶೆಟ್ಟಿ, ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಪಂಚಾಯಿತಿಯಿಂದ ತಾತ್ಕಾಲಿಕ ಸಹಾಯವಾಗಿ 5 ಸಾವಿರ ರೂ. ನೀಡಬಹುದು ಎಂದು ಪಿಡಿಒ ತಿಳಿಸಿದ್ದಾರೆ. ಸರ್ಕಾರದಿಂದ ಸಿಗುವ ಪರಿಹಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಕಂದಾಯ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net