

ಬಂಟ್ವಾಳ: ಸುರಿಯುತ್ತಿರುವ ಗಾಳಿ-ಮಳೆಗೆ, ಬಾಳ್ತಿಲ ಗ್ರಾಮದ ಪಳನೀರು ಎಂಬಲ್ಲಿ ಕಮಲ ಕೊಟ್ಟಾರಿ ಎಂಬುವರ ಮನೆಗೆ ಹಾನಿಯಾಗಿದೆ. ಕಾವಳ ಪಡೂರು ಗ್ರಾಮದ ಕೊಮ್ಮಾಲೆ ನಿವಾಸಿ ಮೀನಾಕ್ಷಿ ಎಂಬುವರ ಮನೆಗೆ ತಾಗಿಕೊಂಡಿರುವ ಬಚ್ಚಲು ಮನೆ ಕುಸಿದು ಬಿದ್ದಿದೆ. ಮಾಣಿ ಗ್ರಾಮದ ಕೊಡಾಜೆ ಕೋಚಪಲ್ಕೆ ನಿವಾಸಿ ಸಂಜೀವ ಮೇರ ಎಂಬುವರ ಮನೆ ಮಳೆಗೆ ಕುಸಿದು ಬಿದ್ದಿದೆ. ಏಕಾಂಗಿಯಾಗಿ ವಾಸವಿದ್ದು ಅವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ನೆಟ್ಲ ಮುಡ್ನೂರು ಗ್ರಾಮದ ಕಮಲಾಕ್ಷಿ ಎಂಬುವರ ಮನೆಗೆ ಹಾನಿಯಾಗಿದೆ.
ಕೊಳ್ನಾಡು ಗ್ರಾಮದ ಸುರಿಬೈಲ್ ಖಂಡಿಗ ರಸ್ತೆ ಮಧ್ಯೆ ಇರುವ ಸೇತುವೆ ಕೆಳಗಿನ ಮೋರಿಯು ಮಳೆ ನೀರಿಗೆ ಹೋಗಿದ್ದು ಸೇತುವೆ ಅಪಾಯಕಾರಿ ಸ್ಥಿತಿಯಲ್ಲಿದೆ. ಪ್ರಸ್ತುತ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು ಬ್ಯಾರಿಕೇಡ್ ಅಳವಡಿಸಿ ಕ್ರಮ ಕೈಗೊಳ್ಳಲಾಗಿದೆ.