ಕರಾವಳಿಯಲ್ಲಿ ಕಾಫಿ ಅಂತರ ಬೆಳೆ; ಅಧಿಕೃತ ಮಂಡಳಿ ಶಿಫಾರಸು, ಬೆಳೆಗಾರರ ಪ್ರಯೋಗಕ್ಕೆ ಜೈ

ಕರಾವಳಿಯಲ್ಲಿ ಕಾಫಿ ಅಂತರ ಬೆಳೆ; ಅಧಿಕೃತ ಮಂಡಳಿ ಶಿಫಾರಸು, ಬೆಳೆಗಾರರ ಪ್ರಯೋಗಕ್ಕೆ ಜೈ
Published on

- ಪ್ರಕಾಶ್ ಮಂಜೇಶ್ವರ, ಮಂಗಳೂರು

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಗುಡ್ಡ ಪ್ರದೇಶಗಳು ಅಂತರ ಬೆಳೆಯಾಗಿ ಕಾಫಿ ಬೆಳೆಸಲು ಸೂಕ್ತ ಎನ್ನುವುದು ಕಾಫಿ ಮಂಡಳಿಯ ತಜ್ಞರ ಶಿಾರಸು!

ಹಳದಿ ರೋಗ ಹಾಗೂ ಎಲೆಚುಕ್ಕಿ ರೋಗದಿಂದ ಕರಾವಳಿಯ ಕೃಷಿಕರು ಆರ್ಥಿಕ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಅಡಕೆಗೆ ಪರ್ಯಾಯ ಬೆಳೆಯನ್ನು ಪ್ರಾಯೋಗಿಕವಾಗಿ ದಕ್ಷಿಣ ಕನ್ನಡದಲ್ಲಿ ಬೆಳೆಸುವ ಕುರಿತು ಇತ್ತೀಚೆಗೆ ಜಿಲ್ಲಾಡಳಿತ ಹಂತದಲ್ಲಿ ಚರ್ಚೆಯಾಗಿತ್ತು. ದಕ್ಷಿಣ ಕನ್ನಡದಲ್ಲಿ 30 ವರ್ಷಗಳಿಂದ ಕಾಫಿಯನ್ನು ಯಶಸ್ವಿಯಾಗಿ ಬೆಳೆಸುವವರು ಇದ್ದಾರೆ. ಪ್ರಾಯೋಗಿಕವಾಗಿ ಬೆಳೆಸುವ ಬದಲು ಈಗಾಗಲೇ ಬೆಳೆಸುವವರಿಗೆ ಬೆಂಬಲ, ಹೊಸ ಬೆಳೆ ತೆಗೆಯುವ ಉತ್ಸಾಹದಲ್ಲಿ ಇರುವವರಿಗೆ ಮಾರ್ಗದರ್ಶನ ನೀಡುವವರು ಬೇಕು ಎನ್ನುತ್ತಾರೆ ಹಾಲಿ ಕೃಷಿಕರು.

ಕಾಫಿಯಲ್ಲಿ ಮುಖ್ಯವಾಗಿ ರೋಬೋಸ್ಟ ಹಾಗೂ ಅರೆಬಿಕಾ ಎರಡು ತಳಿಗಳಿವೆ. ಕೇಂದ್ರ ಸರ್ಕಾರದ ಕಾಫಿ ಮಂಡಳಿಯ ತಜ್ಞರ ಅಭಿಪ್ರಾಯ ಪ್ರಕಾರ ಸಮುದ್ರ ಮಟ್ಟದಿಂದ 500 ಅಡಿಗಿಂತ ಅಧಿಕ ಎತ್ತರದ ಪ್ರದೇಶ ರೋಬೋಸ್ಟ ಹಾಗೂ ಸಾವಿರ ಅಡಿ ಎತ್ತರದ ಪ್ರದೇಶಗಳಲ್ಲಿ ಅರೆಬಿಕಾ ತಳಿಯ ಕಾಫಿ ಉತ್ತಮ ಇಳುವರಿ ದೊರೆಯುತ್ತದೆ. ಪ್ರಸ್ತುತ ದಕ್ಷಿಣ ಕನ್ನಡದ ಸುಳ್ಯ, ಬೆಳ್ತಂಗಡಿ, ಪುತ್ತೂರು ಭಾಗದ ಕೃಷಿಗಳ ತೋಟಗಳು 200-250 ಅಡಿ ಎತ್ತರದಲ್ಲಿವೆ.

ಕಾಫಿ ಅಧಿಕ ಇಳುವರಿ ಇರುವ ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಬೆಟ್ಟ ಪ್ರದೇಶಗಳು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಲ್ಲ. ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಹಲವು ಜಿಲ್ಲೆಗಳಲ್ಲಿ ಕಾಫಿ ಉತ್ತಮ ಬೆಳೆ ಬಂದಿದ್ದು, ಇಲ್ಲಿಯ ಕೃಷಿಕರು ಕಾಫಿಯನ್ನು ಮುಖ್ಯ ಬೆಳೆಯಾಗಿಸಿಲ್ಲ. ಅಂತರ ಬೆಳೆಯಾಗಿಯೇ ಇದು ಸೂಕ್ತ ಎಂದು ಕಾಫಿ ಮಂಡಳಿಯ ತಜ್ಞರೋರ್ವರು ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ತಜ್ಞರು ಅಧ್ಯಯನ ಕೈಗೊಳ್ಳುವ ಮೊದಲೇ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಕೃಷಿಕರು ಅಡಕೆ, ರಬ್ಬರ್ ನಡುವೆ ಉಪ ಬೆಳೆಯಾಗಿ ಕಾಫಿ ಬೆಳೆಸಿ ಯಶಸ್ವಿಯಾಗಿದ್ದಾರೆ. ರೋಬೋಸ್ಟ ಮಾತ್ರವಲ್ಲ, ಅತ್ಯಂತ ಎತ್ತರದ ಗುಡ್ಡಗಳಲ್ಲಿ ಮಾತ್ರ ಬೆಳೆಯುತ್ತದೆ ಎನ್ನಲಾಗುವ ಅರೆಬಿಕಾ ತಳಿಯ ಕಾಫಿ ಬೆಳೆಯಲ್ಲಿಯೂ ಉತ್ತಮ ಇಳುವರಿ ಪಡೆದಿದ್ದಾರೆ. ‘ಕಾಫಿ ಬೆಳೆಗಾರರ ಒಕ್ಕೂಟ’ ಎನ್ನುವ ವಾಟ್ಸಾೃಪ್ ಗ್ರೂಪ್‌ನಲ್ಲಿ ನೂರಕ್ಕೂ ಹೆಚ್ಚು ಕೃಷಿಕರು ಈ ಬಗ್ಗೆ ಸಂವಹನ ನಡೆಸಿ, ಅನುಭವ ಹಂಚಿಕೊಳ್ಳುತ್ತಾರೆ. ಹೊಸಬರಿಗೆ ಮಾರ್ಗದರ್ಶನ ಪಡೆಯಲು ಇಂದೊಂದು ವೇದಿಕೆಯೂ ಆಗಿದೆ.

*******

ಅಂತರ ಬೆಳೆಯಾಗಿ ಕಾಫಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳೆಸಬಹುದು. ಉತ್ತಮ ಇಳುವರಿ ದೊರೆಯುತ್ತದೆ. ಅಧ್ಯಯನಕ್ಕಾಗಿ ಜಿಲ್ಲೆಗೆ ಆಗಮಿಸಿದ ಕಾಫಿ ಮಂಡಳಿಯ ತಜ್ಞರು ಪೂರಕ ವರದಿ ನೀಡಿದ್ದಾರೆ. ತಾನು 30 ವರ್ಷಗಳಿಂದ ಅಡಕೆ ನಡುವೆ ಅಂತರ ಬೆಳೆಯಾಗಿ ಕಾಫಿ ಬೆಳೆಯುತ್ತೇನೆ. ಪ್ರಸ್ತುತ ಸಕಲೇಶಪುರ, ಮೂಡಿಗೆರೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತೇನೆ. ಉತ್ತಮ ದರವಿದೆ.

- ಚಂದ್ರಶೇಖರ ತಾಳ್ತಜೆ

ಕಾಫಿ ಬೆಳೆಗಾರರು, ಉಪ್ಪಿನಂಗಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net