

ಬೈಂದೂರು: ಕರಾವಳಿ ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಮೀನುಗಾರರ ಕಡಲ ಚಟುವಟಿಕೆ ಬಹುತೇಕ ಸ್ಥಗಿತಗೊಂಡಿದೆ. ಪ್ರತಿ ವರ್ಷದಂತೆ ಈ ವರ್ಷವೂ ಬೈಂದೂರು ಭಾಗದ ದೊಂಬೆ, ಪಡುವರಿ ಜನರಿಗೆ ಕಡಲ್ಕೊರೆತದ ಭೀತಿ ಎದುರಾಗಿದೆ.
ಬೈಂದೂರು ತಾಲೂಕಿನ ಪಡುವರಿ ಗ್ರಾಮದ ಸೋಮೇಶ್ವರ, ದೊಂಬೆ ಸಮೀಪದ ಪುಂಡನಮನೆ, ಚೋಣುಮನೆ ಮುಂತಾದ ಕಡೆ ಪ್ರತಿವರ್ಷ ಕಡಲ್ಕೊರೆತ ಉಂಟಾಗುತ್ತಿದೆ. ಕಳೆದ ವರ್ಷ ನಾಲ್ಕೈದು ಬಾರಿ ಸಮುದ್ರದ ಅಬ್ಬರ ಹೆಚ್ಚಾದ ಪರಿಣಾಮ ಕಡಲ ತಡಿಯ ನಿವಾಸಿಗಳನ್ನು ಸ್ಥಳಾಂತರಿಸುವ ಪರಿಸ್ಥಿತಿ ಬಂದಿತ್ತು. ಸುಮನಾವತಿ ನದಿ ಮತ್ತು ಅರಬ್ಬಿ ಸಮುದ್ರ ಸಂಧಿಸುವ ಸೋಮೇಶ್ವರ ಬಳಿ ಕಡಲ ಉಬ್ಬರದ ಸಮಯದಲ್ಲಿ ಕಡಲ್ಕೊರೆತ ಉಂಟಾಗುತ್ತಿದೆ. ಪ್ರತಿವರ್ಷ ಮಳೆಗಾಲದಲ್ಲಿ ಈ ಭಾಗದ ಜನರು ಆತಂಕದಿಂದಲೇ ದಿನ ಕಳೆಯುವಂತಾಗಿದೆ. ಇಲ್ಲಿ 250ಕ್ಕೂ ಅಧಿಕ ಮನೆಗಳು ಹಾಗೂ ದೊಂಬೆ ಪರಿಸರದಲ್ಲಿ 50ಕ್ಕೂ ಹೆಚ್ಚು ಮನೆಗಳಿವೆ. ಕಳೆದ ವರ್ಷ ಕಡಲ್ಕೊರೆತ ಅಬ್ಬರಕ್ಕೆ ಸಮುದ್ರ ಕಿನಾರೆಯಲ್ಲಿರುವ ಚಿಕ್ಕ ಗುಡಿ ಸೇರಿದಂತೆ ಐವತ್ತಕ್ಕೂ ಅಧಿಕ ತೆಂಗಿನಮರಗಳು ಕಡಲ ಪಾಲಾಗಿತ್ತು.
ಬೈಂದೂರು ಪ್ರದೇಶದಲ್ಲಿ ಕಡಲ್ಕೊರೆತ ಪ್ರತಿ ವರ್ಷ ಮರುಕಳಿಸುತ್ತಿದೆ. ಕಳೆದ ಹಲವು ವರ್ಷಗಳಿಂದ ಶಾಶ್ವತ ಬೇಡಿಕೆಗೆ ಸ್ಥಳೀಯರು ಆಗ್ರಹಿಸಿದರೂ ಜಿಲ್ಲಾಡಳಿತ ಸಂದಿಸಿಲ್ಲ. ದೊಂಬೆ ಪರಿಸರದಲ್ಲಿ ಕೆಲವು ಕಡೆ ಕಲ್ಲುಗಳನ್ನು ಹಾಕಲಾಗಿದ್ದರೂ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಂಡಿಲ್ಲ. ಈ ವರ್ಷ ಕಡಲ್ಕೊರೆತ ಜಾಸ್ತಿಯಾಗುವ ಸಾಧ್ಯತೆಯಿದ್ದು, ಕಡಲ ತೀರದ ನಿವಾಸಿಗಳು ಭಯದಿಂದಲೇ ಬದುಕು ಸಾಗಿಸುವಂತಾಗಿದೆ. ಮೂರು ವರ್ಷಗಳ ಹಿಂದೆ ಕಡಲ್ಕೊರೆತ ಉಂಟಾದಾಗ ಸರ್ಕಾರ 50 ಲಕ್ಷ ರೂ. ಅನುದಾನ ನೀಡಿ ತಡೆಗೋಡೆ ನಿರ್ಮಿಸುವ ಭರವಸೆ ನೀಡಿದ್ದು ಇದುವರೆಗೆ ಈಡೇರಿಲ್ಲ.
ಸೋಮೇಶ್ವರ ಕಡಲ ತೀರದ ಸಮೀಪ ಪ್ರತಿವರ್ಷ ಕಡಲ್ಕೊರೆತ ಉಂಟಾಗುತ್ತಿದೆ. ಇಲ್ಲಿ 250ಕ್ಕೂ ಹೆಚ್ಚು ಮನೆಗಳಿದ್ದು, ಹಲವು ಬಾರಿ ಮನವಿ ಮಾಡಿದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಈ ವರ್ಷ ಇನ್ನಷ್ಟು ಆತಂಕದಿಂದ ದಿನ ಕಳೆಯುವಂತಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ಶಾಶ್ವತ ಪರಿಹಾರ ಒದಗಿಸಬೇಕು. -ಬುದ್ಧಿವಂತ, ಮೊಗವೀರ ಭಂಡಾರಿಮನೆ ಪಡುವರಿ https://www.vijayavani.net/if-the-road-develops-the-town-develops https://www.vijayavani.net/savitri-manohar-ajit-sharmas-work-released