

ಬಂಟ್ವಾಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಖಾಸಗಿ ಕಾರ್ಯಕ್ರಮದ ನಿಮಿತ್ತ ಮಂಗಳೂರು ವಿಮಾನ ನಿಲ್ದಾಣದಿಂದ ರಸ್ತೆ ಮೂಲಕ ಪುತ್ತೂರಿಗೆ ತೆರಳುವ ಸಂದರ್ಭ ಫರಂಗಿಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತಿಸಿದರು.
ಸಿಎಂ ಕಾರಿನಿಂದಿಳಿದು ಕಾರ್ಯಕರ್ತರ ಗೌರವ ಹಾಗೂ ವಿವಿಧ ಬೇಡಿಕೆಯ ಅಹವಾಲು ಸ್ವೀಕರಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು ಸಿ.ಎಂ. ಅವರಿಗೆ ಪುಷ್ಪಗುಚ್ಛ ನೀಡಲು, ಕೈಕುಲುಕಲು ಮುಗಿಬಿದ್ದರು.
ಜಿ.ಪಂ. ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಉಮ್ಮರ್ ಫಾರೂಕ್ ಫರಂಗಿಪೇಟೆ, ಪುದು ಗ್ರಾ.ಪಂ. ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಉಪಾಧ್ಯಕ್ಷೆ ರುಕ್ಸಾನಾ ಬಾನು ಅಮ್ಮೆಮಾರ್, ಮಂಗಳೂರು ತಾ.ಪಂ. ಮಾಜಿ ಅಧ್ಯಕ್ಷ ಮಹಮ್ಮದ್ ಮೋನು, ಮೇರಮಜಲು ಗ್ರಾ.ಪಂ. ಮಾಜಿ ಅಧ್ಯಕ್ಷೆ ವೃಂದಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಸಿ.ಎಂ. ರಸ್ತೆ ಮೂಲಕ ಪುತ್ತೂರಿಗೆ ತೆರಳಿ ವಾಪಾಸ್ ಆಗುವವರೆಗೂ ಹೆದ್ದಾರಿಯುದ್ದಕ್ಕೂ ಸಂಚಾರಕ್ಕೆ ಅಡಚಣೆಯಾಗದಂತೆ ಪೊಲೀಸರು ಬಂದೋಬಸ್ತು ಏರ್ಪಡಿಸಿದ್ದರು. ಬಿ.ಸಿ.ರೋಡ್‌ನ ಖಾಸಗಿ ಬಸ್ ನಿಲ್ದಾಣದ ಮುಂಭಾಗ ಪ್ರತಿನಿತ್ಯ ಹೆದ್ದಾರಿಯಲ್ಲಿ ಸರ್ಕಾರಿ, ಖಾಸಗಿ ಬಸ್‌ಗಳು ನಿಲುಗಡೆಯಾಗಿ ಸುಗಮ ಸಂಚಾರಕ್ಕೆ ಅಡಚಣೆಯಾದರೂ ಅತ್ತ ಸುಳಿಯದ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸರು ಶನಿವಾರ ಸಿಎಂ ಅವರ ಸಂಚಾರ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಬಸ್‌ಗಳನ್ನು ರಸ್ತೆಯಲ್ಲಿ ಹೆಚ್ಚು ಹೊತ್ತು ನಿಲ್ಲಲು ಬಿಡದ ದೃಶ್ಯ ಕಂಡುಬಂತು.