ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡದಿರುವುದೇ ಸಿಎಂ ಬದಲಾವಣೆ ಮುನ್ಸೂಚನೆ

KNR
Published on

ತುಮಕೂರು: ಸಂಪುಟ ವಿಸ್ತರಣೆಗೆ ಬಿಜೆಪಿ ವರಿಷ್ಠರು ಗ್ರೀನ್ ಸಿಗ್ನಲ್ ನೀಡದೇ ಇರುವುದು ರಾಜ್ಯದಲ್ಲಿ ಸಿಎಂ ಬದಲಾವಣೆಯ ಮನ್ಸೂಚನೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.

ನಗರದ ಟಿಎಪಿಸಿಎಂ ಮುಂಭಾಗ ಗುರುವಾರ ಏರ್ಪಡಿಸಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 103ನೇ ಜಯಂತ್ಯುತ್ಸವದಲ್ಲಿ ಇಂದಿರಾಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ರಾಜಣ್ಣ, ಬಿಎಸ್‌ವೈ ಅವರನ್ನು ಮುಂದುವರಿಸುವ ಆಸೆ ಬಿಜೆಪಿಗೆ ಇದ್ದರೆ ಅವರು ತೆಗೆದುಕೊಂಡು ಹೋಗಿದ್ದ ಪಟ್ಟಿಗೆ ಅನುಮೋದನೆ ನೀಡುತ್ತಿದ್ದರು. ಆದರೆ, ಅವರಿಗೆ ಯಡಿಯೂರಪ್ಪ ಬೇಕಾಗಿಲ್ಲ ಎಂಬುದು ಇದರಿಂದಲೇ ಅರಿವಾಗುತ್ತದೆ. ರಾಜ್ಯದ ಮುಖ್ಯಮಂತ್ರಿ ಭೇಟಿಗೆ 5 ನಿಮಿಷ ಸಮಯ ನೀಡದ ಕೇಂದ್ರ ಗೃಹ ಸಚಿವರ ವರ್ತನೆ ಖಂಡನೀಯ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಸಿ.ವೇಣುಗೋಪಾಲ್, ಸಹಕಾರ ಮಹಾಮಂಡಲ ಮಾಜಿ ಅಧ್ಯಕ್ಷ ಗಂಗಣ್ಣ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ನಾರಾಯಣಗೌಡ ಮತ್ತಿತರರು ಇದ್ದರು.

ಪರಂ ವಿರುದ್ಧ ದೂರು ಹೇಳಿಲ್ಲ: ಶಿರಾ ಸೋಲಿನ ನಂತರ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿದ್ದು ನಿಜ. ಆದರೆ, ಚುನಾವಣೆ ಉಸ್ತುವಾರಿ ಹೊತ್ತಿದ್ದ ಪರಮೇಶ್ವರ್ ವಿರುದ್ಧ ದೂರು ಹೇಳಿದ್ದೇನೆ ಎಂಬುದು ಕಪೋಲಕಲ್ಪಿತ. ಜಿಲ್ಲೆಯ ಎಲ್ಲ ನಾಯಕರು ಪ್ರಾಮಾಣಿಕವಾಗಿ ಗೆಲುವಿಗೆ ಶ್ರಮಿಸಿದ್ದರೂ ಬಿಜೆಪಿ ಕ್ಷೇತ್ರದಲ್ಲಿ ಹೇಳಿಕೊಂಡ ಅತಿಯಾದ ಸುಳ್ಳು ಅವರ ಗೆಲುವಿಗೆ ಕಾರಣವಾಗಿದೆ. ಕೊಟ್ಟ ಭರವಸೆ ಈಡೇರಿಸದಿದ್ದರೇ ಬೀದಿಗಿಳಿದು ಹೋರಾಟ ನಡೆಸುತ್ತೇವೆ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net