

ಬೆಂಗಳೂರು: ಕರೊನಾ ಬಂದಾಕ್ಷಣ ಯಾರೂ ಸಾಯುವುದಿಲ್ಲ. ಬೇರೆ ಬೇರೆ ಸಮಸ್ಯೆ ಇರುವವರು ಕೆಲವರು ತಡವಾಗಿ ಆಸ್ಪತ್ರೆಗೆ ಬರುವುದರಿಂದ ಮೃತರಾಗುವ ಸಾಧ್ಯತೆ ಹೆಚ್ಚು. ಆದರೆ ಮಾಧ್ಯಮಗಳು ಸಂಯಮದಿಂದ ವರದಿ ಮಾಡಬೇಕು ಎಂದು ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮ್ಮುಖದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಹುತೇಕ ವೈದ್ಯರು, ‘ಸಾಕಷ್ಟು ರೋಗಿಗಳು ಗುಣಮುಖರಾಗುತ್ತಾರೆ, ಅದರ ಬಗ್ಗೆ ಹೆಚ್ಚು ವರದಿ ಮಾಡಿ ಜನರಲ್ಲಿ ಧೈರ್ಯ ಮೂಡಿಸಬೇಕು’ ಎಂದರು.
ಮಣಿಪಾಲ ಆಸ್ಪತ್ರೆ ಸಮೂಹದ ಮುಖ್ಯಸ್ಥ ಡಾ. ಸುದರ್ಶನ ಬಲ್ಲಾಳ್ ಮಾತನಾಡಿ, ‘ರಿಕವರಿ ಪ್ರಮಾಣ ಸಹ ಹೆಚ್ಚಾಗಿದೆ. ಅದರ ಬಗ್ಗೆಯೂ ವರದಿ ಮಾಡಿ. ರೋಗಲಕ್ಷಣ ಇಲ್ಲದವರು ಆಸ್ಪತ್ರೆಗೆ ಬಂದು ಅಡ್ಮಿಟ್ ಆಗಬೇಕಿಲ್ಲ. ಆಗ ಆಸ್ಪತ್ರೆಗಳಲ್ಲಿ ಬೆಡ್ಗಳ ತೊಂದರೆಯಾಗುವುದಿಲ್ಲ. ಖಾಸಗಿ ಆಸ್ಪತ್ರೆಗಳು ಸರ್ಕಾರದ ಜತೆ ಸೇರಿ ಕೆಲಸ ಮಾಡುತ್ತೇವೆ’ ಎಂದರು.
ಸ್ಪರ್ಶ ಆಸ್ಪತ್ರೆಯ ಮುಖ್ಯಸ್ಥ ಡಾ. ಶರಣ ಪ್ರಕಾಶ್ ಪಾಟೀಲ್ ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ ಅನೇಕರು ರಿಕವರಿಯಾಗಿ ಮನೆಗೆ ಹೋಗಿದ್ದಾರೆ. ಇಂತಹ ಸುದ್ದಿಗಳ ಕಡೆ ಹೆಚ್ಚಿನ ಆದ್ಯತೆ ಇರಲಿ. ರೋಗ ಲಕ್ಷಣ ಇಲ್ಲದ ಅನೇಕರು ಆಸ್ಪತ್ರೆಗೆ ಬಂದು ಲ್ಯಾಪ್ ಹಿಡಿದುಕೊಂಡು ಕೂತಿದ್ದಾರೆ. ರೋಗ ಲಕ್ಷಣ ಇಲ್ಲದಿದ್ದರೆ ಆಸ್ಪತ್ರೆಗೆ ಬರುವ ಅಗತ್ಯವೇ ಇಲ್ಲ ಎಂದರು.
ನಾರಾಯಣ ನೇತ್ರಾಲಯದ ಡಾ. ಭುಜಂಗ ಶೆಟ್ಟಿ, ‘ನಾವು ಸಲಹೆಗಳನ್ನು ನೀಡಿದ್ದೇವೆ. ಅವುಗಳನ್ನು ಸರ್ಕಾರ ಜಾರಿ ಮಾಡಬೇಕಷ್ಟೇ’ ಎಂದರು.