

ಬೆಂಗಳೂರು: ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಸದ್ಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲಿಂದಲೇ ರಾಜ್ಯದ ಜನತೆಗೆ ವಿಡಿಯೋ ಸಂದೇಶ ಕಳಿಸಿದ್ದಾರೆ.
'ನನಗೆ ಕರೊನಾ ಸೋಂಕು ಇರುವುದು ನಿನ್ನೆ(ಭಾನುವಾರ) ರಾತ್ರಿ 8.30ಕ್ಕೆ ದೃಢಪಟ್ಟಿತ್ತು. ನಿನ್ನೆ ರಾತ್ರಿಯೇ ಆಸ್ಪತ್ರೆಗೆ ದಾಖಲಾಗಿದ್ದು, ಆರೋಗ್ಯವಾಗಿದ್ದೇನೆ. ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿ ಇದ್ದೇನೆ. ವೈದ್ಯರು ಚಿಕಿತ್ಸೆ ಕೊಡುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು, ಸಿದ್ದರಾಮಯ್ಯ, ಕುಮಾರಸ್ವಾಮಿ ಸೇರಿದಂತೆ ಮಠಾಧೀಶರು ಬೇಗ ಗುಣ ಮುಖರಾಗುವಂತೆ ಹಾರೈಸಿದ್ದಾರೆ. ಜೆಪಿ ನಡ್ಡಾ ಮತ್ತು ನಿರ್ಮಲಾ ಸೀತಾರಾಂ ಕರೆ ಮಾಡಿದ್ರು. ಆರೂವರೆ ಕೋಟಿ ಕನ್ನಡಿಗರ ರಕ್ಷಣೆ ನಮ್ಮ ಮೇಲಿದೆ' ಎಂದಿರುವ ಸಿಎಂ, ಕರೊನಾ ವಿರುದ್ಧ ಗೆಲ್ಲುವ ಬಗೆಯನ್ನೂ ವಿವರಿಸಿದ್ದಾರೆ.
'ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡ್ರೆ ಮಾತ್ರ ನಾವು ಇದರ(ಕರೊನಾ) ವಿರುದ್ಧ ಗೆಲ್ಲಬಹುದು. ಆಸ್ಪತ್ರೆಯಿಂದಲೇ ಅಧಿಕಾರಿಗಳಿಗೆ ಸಲಹೆ ಸೂಚನೆ ಕೊಡ್ತಿದ್ದೇನೆ. ಬೇಗ ಗುಣಮುಖನಾಗಿ ಎಂದಿನಂತೆ ಜನಪರ ಕೆಲಸದಲ್ಲಿ ನಿರತನಾಗುತ್ತೇನೆ. ನಾನು ಸುರಕ್ಷಿತ, ನೀವು ಸುರಕ್ಷಿತರಾಗಿರಿ.. ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿ.. ಕರೊನಾ ಓಡ್ಸಿ.. ಬೇಗ ಮೀಟ್ ಆಗೋಣ..' ಎಂದು ವಿಡಿಯೋ ಸಂದೇಶ ಕಳಿಸಿರುವ ಸಿಎಂ, 'ಸರ್ಕಾರದ ಕೆಲಸಗಳಿಗೆ ಯಾವುದೇ ಅಡ್ಡಿ- ಆತಂಕ ಆಗಬಾರದು' ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.