ಸಾಹಿತಿ ಡಾ. ನಿಕೇತನಾ ಆಶಯ
ಕಲಾಯತನ ಸಮ್ಮೇಳನದಲ್ಲಿ ಸಮಾರೋಪ ಭಾಷಣ
ವಿಜಯವಾಣಿ ಸುದ್ದಿಜಾಲ ಉಡುಪಿ
ಮಾನವೀಯ ನೆಲೆಯಲ್ಲಿ ಧರ್ಮ ಮತ್ತು ಪ್ರಭುತ್ವವನ್ನು ಸಮನ್ವಯದಿಂದ ಮುನ್ನಡೆಸುವ ಶಕ್ತಿ ಸಾಹಿತ್ಯಕ್ಕಿದೆ. ಕನ್ನಡವು ಸ್ವಾಭಿಮಾನ, ಅನ್ನದ ಭಾಷೆಯಾಗಿ ಎಲ್ಲರನ್ನೂ ಒಂದಾಗಿಸಬೇಕು. ಮುಖ್ಯವಾಗಿ ಬಹು ಸಂಸ್ಕೃತಿಯ ನೆಲೆಯಲ್ಲಿ ಅರಳಬೇಕು ಎಂದು ಕನ್ನಡ ಪ್ರಾಧ್ಯಾಪಕಿ, ಸಾಹಿತಿ ಡಾ. ನಿಕೇತನಾ ಆಶಯ ವ್ಯಕ್ತಪಡಿಸಿದರು.

ಉಡುಪಿಯ ಕೊಡವೂರು ಶಂಕರನಾರಾಯಣ ದೇವಳದ ವಸಂತ ಮಂಟಪದಲ್ಲಿ ಮೇ 17ರಂದು ಸಂಜೆ ಕವಿ ಅರುಣಾಬ್ಜ ವೇದಿಕೆಯಲ್ಲಿ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ 15ನೇ ಸಮ್ಮೇಳನ ಕಲಾಯತನ ಯಕ್ಷ-ಸಾಹಿತ್ಯ ಸಂಭ್ರಮದ ಸಮಾರೋಪದಲ್ಲಿ ಭಾಷಣ ಮಾಡಿದರು.
ದೃಶ್ಯ, ಭಾಷೆ, ಸಂಸ್ಕೃತಿ ವಿಚಾರ ಗೋಷ್ಠಿ
ದೃಶ್ಯ, ಭಾಷೆ, ಸಂಸ್ಕೃತಿ ಕುರಿತ ವಿಚಾರ ಗೋಷ್ಠಿಯಲ್ಲಿ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಎಸ್. ಆರ್. ಆಶಯ ವ್ಯಕ್ತಪಡಿಸಿದರು. ದೃಶ್ಯ ಕಾವ್ಯ ವಿಚಾರವಾಗಿ ಛಾಯಾಚಿತ್ರ ಹಿರಿಯ ಕಲಾವಿದ ಆಸ್ಟ್ರೋ ಮೋಹನ, ಆಡಳಿತದಲ್ಲಿ ಕನ್ನಡ ವಿಷಯವಾಗಿ ಅಪರ ಜಿಲ್ಲಾಧಿಕಾರಿ ಅಬೀದ ಗದ್ಯಾಳ, ಸಂಸ್ಕೃತಿ ಮತ್ತು ಕನ್ನಡ ವಿಚಾರವಾಗಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿದರು.
ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ ಎಚ್.ಪಿ. ಸಮಾರೋಪದ ಅಧ್ಯಕ್ಷತೆ ವಹಿಸಿದ್ದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ ಕೊಡವೂರು, ಉದ್ಯಮಿ ಸಾಧು ಸಾಲಿಯಾನ್, ಪ್ರತಿಭಾ ಸಾಮಗ, ಯಕ್ಷಗಾನ ಕಲಾವಿದ ಡಾ. ಭಾಸ್ಕರಾನಂದ ಕುಮಾರ್, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ಉಡುಪಿ ವಿಶ್ವನಾಥ ಶೆಣೈ, ಜನಾರ್ದನ ಕೊಡವೂರು, ರಂಜಿನಿ ವಸಂತ, ಪೂರ್ಣಿಮಾ ಜನಾರ್ದನ, ರಾಜೇಶ್ ಭಟ್ ಪಣಿಯಾಡಿ, ರಾಘವೇಂದ್ರ ಪ್ರಭು ಕರ್ವಾಲು, ಯಕ್ಷ ರಂಗಾಯಣದ ನಿರ್ದೇಶಕ ವೆಂಕಟರಮಣ ಐತಾಳ ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಪ್ರಭಾಕರ ತುಮರಿ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ
ಕಾವ್ಯಾ ಸೀತಾರಾಮ-ಗೀತ ಗಾಯನ, ಯಕ್ಷ ಗೋಷ್ಠಿ, ಯಕ್ಷೋನ್ನತಿ ಕಲಾ ತಂಡದಿಂದ ‘ಚಿತ್ರ ಫಲ್ಗುಣಿ’ ಯಕ್ಷ ರೂಪಕ ಪ್ರದರ್ಶನಗೊಂಡಿತು. ಅಭಿಜ್ಞಾ ನೃತ್ಯಭೂಮಿ ಟ್ರಸ್ಟ್ನ ನೃತ್ಯ ವಿದುಷಿ ಡಾ. ರಶ್ಮಿ ಗುರುಮೂರ್ತಿ ಮತ್ತು ಬಳಗದಿಂದ ಜಾನಪದ ನೃತ್ಯ ನಡೆಯಿತು.
ಹೆಂಡತಿ ತಾಳಕ್ಕೆ ಕುಣಿಯದವರು ಯಾರಿಲ್ಲ?
ವೃತ್ತಿ ಧರ್ಮಕ್ಕೆ ಚ್ಯುತಿಯಾಗದಂತೆ ಸ್ವಯಂ ಆಸಕ್ತಿಯಿಂದ ಪ್ರವೃತ್ತಿಯಲ್ಲಿ ನಾನು ತೊಡಗಿದೆ. ಯಕ್ಷಗಾನದ ಪ್ರಭಾವ ಪಾಠಕ್ಕೆ ಅನುಕೂಲವೇ ಆಯಿತು. ವೃತ್ತಿ, ಪ್ರವೃತ್ತಿಗೆ ನ್ಯಾಯ ಒದಗಿಸಬೇಕು. ಏಕೆಂದರೆ, ತರ್ಕದಲ್ಲಿ ಜಯವಾದರೆ ಜೀವನದಲ್ಲಿ ಸೋಲು ಉಂಟಾಗುತ್ತದೆ. ಮನೆಯ ವಿಚಾರಕ್ಕೆ ಬಂದರೆ, ಹೆಂಡತಿ ಭರತನಾಟ್ಯ ವಿದುಷಿ. ಆಕೆಯ ತಾಳಕ್ಕೆ ಕುಣಿಯುತ್ತಿದ್ದೇನೆ. ಹೆಂಡತಿಯ ತಾಳಕ್ಕೆ ಕುಣಿಯದವರು ಯಾರಿಲ್ಲ ಹೇಳಿ ಎಂದು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಪ್ರೊ.ಎಂ.ಎಲ್. ಸಾಮಗ ತಮಾಷೆಯಾಗಿ ಪ್ರಶ್ನಿಸಿದರು. ಸಮ್ಮೇಳನಾಧ್ಯಕ್ಷ ರೊಂದಿಗೆ ಮಾತುಕತೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಟ ಹೆಚ್ಚು ತೃಪ್ತಿ ನೀಡಿದೆ ಎಂದರು. ಶಿಕ್ಷಣ ತಜ್ಞ ಅಶೋಕ ಕಾಮತ, ನಿವೃತ್ತ ಪ್ರಾಧ್ಯಾಪಕ ನಾರಾಯಣ ಹೆಗಡೆ, ವಿದ್ವಾಂಸ ಡಾ. ವಾದಿರಾಜ ಕಲ್ಲೂರಾಯ ಪಾಲ್ಗೊಂಡಿದ್ದರು. ರಮಾನಂದ ರಾವ್ ಸ್ವಾಗತಿಸಿದರು. ನಾಗರಾಜ ಹೆಬ್ಬಾರ ಕಾರ್ಯಕ್ರಮ ನಿರೂಪಿಸಿದರು. ಮುರಳೀಧರ ಆಚಾರ್ಯ ವಂದಿಸಿದರು.