ಎನ್​ಎಸ್​ಎಸ್​ನಿಂದ ಶ್ರಮ ಸಂಸ್ಕೃತಿಯ ಅರಿವು

NSS
Published on

ಕೆ.ವಿಜಯ್​ ಕೊಡವೂರು ಅನಿಸಿಕೆ

ಬೋರ್ಡ್​ ಹೈಸ್ಕೂಲ್​ ಟಕದ ಶಿಬಿರ ಸಮಾರೋಪ

ವಿಜಯವಾಣಿ ಸುದ್ದಿಜಾಲ ಉಡುಪಿ

ಎನ್​ಎಸ್​ಎಸ್​ ಚಟುವಟಿಕೆಯಲ್ಲಿ ತೊಡಗುವುದರಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು, ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತದೆ. ಪ್ರಮುಖವಾಗಿ ಸಮಾಜದಲ್ಲಿ ಸೇವಾ ಕಾರ್ಯ ಕೈಗೊಳ್ಳುವುದರಿಂದ ಶ್ರಮ ಸಂಸ್ಕೃತಿಯ ಅರಿವು ಉಂಟಾಗುತ್ತದೆ ಎಂದು ನಗರಸಭಾ ಸದಸ್ಯ ಕೆ.ವಿಜಯ್​ ಕೊಡವೂರು ಅಭಿಪ್ರಾಯಪಟ್ಟರು.

ಉಡುಪಿ ಮಲ್ಪೆ ಸಮೀಪದ ಕೊಡವೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಶಾಮುಕ್ತ ಭಾರತ ಅಭಿಯಾನದಡಿ ವಾರಗಳ ಕಾಲ ನಡೆದ ಸರ್ಕಾರಿ ಪದವಿ ಪೂರ್ವ ಕಾಲೇಜು (ಬೋರ್ಡ್​ ಹೈ ಸ್ಕೂಲ್​) ಉಡುಪಿಯ ಎನ್​ಎಸ್​ಎಸ್​ ಟಕದ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಲೀಲಾಬಾಯಿ ಭಟ್​ ಮಾತನಾಡಿ, ಶಿಬಿರದಲ್ಲಿ ಕಲಿತ ಶಿಸ್ತು ಮತ್ತು ಸೇವಾ ಮನೋಭಾವವನ್ನು ಮುಂದಿನ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯ

ಶಿಬಿರದಲ್ಲಿ ಪಾಲ್ಗೊಂಡಿದ್ದ 50 ವಿದ್ಯಾರ್ಥಿಗಳು ಗ್ರಾಮೀಣ ಜನರೊಂದಿಗೆ ಬೆರೆತು ಶ್ರಮದಾನದ ಸಂತಸ ಅನುಭವಿಸಿದರು. ಪ್ರತಿಭಾ ಪ್ರದರ್ಶನ, ವ್ಯಕ್ತಿತ್ವ ವಿಕಸನ, ಪರಿಸರಕ್ಕೆ ಮಾರಕ ಪ್ಲಾಸ್ಟಿಕ್​ ಸಂಗ್ರಹಣೆ ಮಾಡಿದರು. ಶಂಕರನಾರಾಯಣ ದೇವಾಲಯದ ಹಾಗೂ ಕೆರೆಕಟ್ಟೆ ಗಣಪತಿ ದೇವಾಲಯದ ಆವರಣ ಸ್ವಚ್ಛಗೊಳಿಸಿದರು. ವಾಸುಕಿ ನಗರದ ಪಾರ್ಕ್​ನಲ್ಲಿ ಗಿಡ ನೆಟ್ಟರು. ಕೊಡವೂರಿನ ಮತ್ತು ಲಕ್ಷ್ಮೀ ನಗರದ ಮುಖ್ಯ ರಸ್ತೆಗಳ ಬದಿಯಲ್ಲಿದ್ದ ಪ್ಲಾಸ್ಟಿಕ್​ ತ್ಯಾಜ್ಯಗಳನ್ನು ಆಯ್ದು, ಸುಮಾರು 10 ಕ್ವಿಂಟಲ್​ನಷ್ಟು ಕಸವನ್ನು ನಗರಸಭೆಯ ಕಸದ ವಾಹನದ ಮೂಲಕ ಸಾಗಿಸಿದರು.

ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಬ್ಯಾಂಕಿಂಗ್​ ಸೌಲಭ್ಯ, ಕಾನೂನುಗಳ ಅರಿವು, ಕಲಿಕೆಯೊಂದಿಗೆ ನಶಾಮುಕ್ತ ಭಾರತ ನಿಮಾರ್ಣದಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತಾಗಿ ಮಾಹಿತಿ ನೀಡಿದರು.

ಶಿಬಿರಾಧಿಕಾರಿ ಪರಮೇಶ್ವರ ಎಂ. ಮೊಗವೀರ ಶಿಬಿರದ ವರದಿ ವಾಚಿಸಿದರು. ಸಹಶಿಬಿರಾಧಿಕಾರಿ ನಾಗರಾಜ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸತೀಶ ಕೊಡವೂರು, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಭಾತ ಕೋಟ್ಯಾನ್​, ವಿನಯಕುಮಾರ್​ ಉಪಸ್ಥಿತರಿದ್ದರು.

ಧನ್ನಿ ಸಂಗಡಿಗರು ಪ್ರಾರ್ಥಿಸಿದರು. ಶಿಬಿರಾರ್ಥಿ ಸಂಗನ ಬಸು ಸ್ವಾಗತಿಸಿದರು. ಸಲೋನಿ ವಂದಿಸಿದರು. ಸಂತೋಷ ಕೆ. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net