ಬಾಗಿಲು ಮುಚ್ಚಿದ ಚಿತ್ರಮಂದಿರ

DND CINEMA
Published on

ದಾಂಡೇಲಿ: ಪ್ರೇಕ್ಷಕರ ಕೊರತೆ ಹಾಗೂ ಆಧುನಿಕ ತಂತ್ರಜ್ಞಾನಗಳ ಭರಾಟೆಯಿಂದಾಗಿ 40 ವರ್ಷಗಳಿಂದ ಗೌಜು- ಗದ್ದಲದಲ್ಲಿ ಇರುತ್ತಿದ್ದ ಚಿತ್ರಮಂದಿರಗಳು ಈಗ ಬಾಗಿಲು ಮುಚ್ಚಿವೆ.

ನಗರದ ಹೃದಯ ಭಾಗದಲ್ಲಿರುವ ಶ್ರೀಹರಿ ಹಾಗೂ ಅಶೋಕ ಚಿತ್ರಮಂದಿರಗಳು ಸದಾ ಪ್ರೇಕ್ಷಕರಿಂದ ಭರ್ತಿಯಾಗಿರುತ್ತಿದ್ದವು. ಆದರೀಗ ಚಿತ್ರಮಂದಿರದತ್ತ ಯಾರೂ ಸುಳಿಯದ ಕಾರಣ ಚಿತ್ರಮಂದಿರ ಮಾಲೀಕರು ನಿರ್ವಹಣೆಗೂ ಪರದಾಡಿ ಬೀಗ ಜಡಿದಿದ್ದಾರೆ.

ಶ್ರೀಹರಿ ಚಿತ್ರಮಂದಿರ 1985ರಲ್ಲಿ ತಾಳಿಭಾಗ್ಯ ಸಿನಿಮಾದಿಂದ ಆರಂಭವಾಗಿ, 2024ರಲ್ಲಿ ಉಪಾಧ್ಯಕ್ಷ ಚಿತ್ರದ ನಂತರ ಪ್ರದರ್ಶನ ನಿಲ್ಲಿಸಿದೆ. ಇನ್ನು ಅಶೋಕ ಚಿತ್ರಮಂದಿರ ಕೋವಿಡ್ ಅಬ್ಬರದ ವೇಳೆಯೇ ಪ್ರದರ್ಶನ ನಿಲ್ಲಿಸಿದೆ. ಮಧ್ಯಮ ವರ್ಗದ ಮನರಂಜನೆ ಮಾಧ್ಯಮವಾಗಿದ್ದ ಸಿನಿಮಾ ಅಂತರ್ಜಾಲ ಮತ್ತು ಟಿವಿಯಿಂದಾಗಿ ತನ್ನ ವೈಭವ ಕಳೆದುಕೊಂಡಿತು. ಒಂದು ಕಾಲದಲ್ಲಿ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಪಡೆದು ಸಿನಿಮಾ ನೋಡಿ ಖುಷಿ ಅನುಭವಿಸುತ್ತಿದ್ದ ಪ್ರೇಕ್ಷಕರು ಇಂದು ನಾಲ್ಕು ಗೋಡೆಗಳ ನಡುವೆ ಸಿನಿಮಾ ವೀಕ್ಷಿಸುತ್ತಿದ್ದಾರೆ.

ನೆಟ್‌ಫ್ಲ್ಲಿಕ್ಸ್, ಒಟಿಟಿ ಅಬ್ಬರ: ಹಿಂದೆ ಕುಟುಂಬ ಸಮೇತರಾಗಿ ಚಿತ್ರಮಂದಿರಕ್ಕೆ ಬಂದು ಚಿತ್ರ ವೀಕ್ಷಿಸುತ್ತಿದ್ದ ಮಂದಿ, ಇಂದು ಮನೆಯಲ್ಲೇ ಕುಳಿತು ಚಿತ್ರ ವೀಕ್ಷಿಸುತ್ತಿದ್ದಾರೆ. ಅದಕ್ಕೆ ಕಾರಣ ನೆಟ್‌ಫ್ಲಿಕ್ಸ್ ಹಾಗೂ ಒಟಿಟಿ ಅಬ್ಬರ. ಚಿತ್ರ ಬಿಡುಗಡೆಯಾದ ಎರಡ್ಮೂರು ವಾರದಲ್ಲೇ ಒಟಿಟಿಯಲ್ಲಿ ಸಿನಿಮಾ ಬಿಡುಗಡೆಯಾಗುತ್ತದೆ. ಜತೆಗೆ ಒಟಿಟಿಗಾಗಿಯೇ ಚಿತ್ರಗಳು ತಯಾರಾಗುತ್ತವೆ. ಹೀಗಾಗಿ ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ನೋಡುವ ಆಸಕ್ತಿ ಈಗ ಕಡಿಮೆಯಾಗಿದೆ.

ಹಣ, ಸಮಯ ಉಳಿತಾಯ: ಚಿತ್ರ ವೀಕ್ಷಿಸಲು ಚಿತ್ರಮಂದಿರಕ್ಕೆ ಹೋದರೆ ಸಮಯದ ಜತೆಗೆ ಹಣವೂ ವ್ಯರ್ಥವಾಗುತ್ತದೆ ಎಂಬ ಆಲೋಚನೆಯೂ ಹಲವರಲ್ಲಿದೆ. ಕುಟುಂಬ ಸಮೇತರಾಗಿ ಸಿನಿಮಾ ವೀಕ್ಷಿಸಲು ಚಿತ್ರಮಂದಿರಕ್ಕೆ ಹೋದರೆ ಕನಿಷ್ಠ 1ರಿಂದ 2 ಸಾವಿರ ರೂ. ಬೇಕು. ಮನೆಯಲ್ಲೇ ಎರಡು ವಾರ ಬಿಟ್ಟು ಒಟಿಟಿಯಲ್ಲಿ ವೀಕ್ಷಿಸಿದರೇ ತಿಂಗಳ ಪ್ಯಾಕೇಜ್‌ನಡಿ 500 ರೂ. ಗಳಲ್ಲಿ ಮನೆ ಮಂದಿಯೆಲ್ಲ ವೀಕ್ಷಿಸಬಹುದು. ಜತೆಗೆ ಹೋಗಿ ಬರುವ ಸಮಯವೂ ಉಳಿತಾಯವಾಗಲಿದೆ ಎಂಬ ತರ್ಕವೂ ಇದರಲ್ಲಿ ಅಡಗಿದೆ.

ಕೋವಿಡ್ ನಂತರ ಜನರು ಅತಿಯಾದ ಮೊಬೈಲ್ ಬಳಕೆಯಿಂದಾಗಿ ಚಿತ್ರಮಂದಿರಕ್ಕೆ ಬರುತ್ತಿಲ್ಲ. ಚಿತ್ರಮಂದಿರದ ವೈಭವದ ದಿನಗಳು ಕಾಣೆಯಾದವು. 40 ವರ್ಷಗಳಿಂದ ಗೇಟ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದೇನೆ. ಚಿತ್ರ ಮಂದಿರವನ್ನೇ ನಂಬಿಕೊಂಡಿದ್ದ ಕನಿಷ್ಠ ಹತ್ತಾರು ಜನ ನೌಕರರು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಗುರು ಕಲ್ಮಡ್ಕರ್ ಶ್ರೀಹರಿ ಚಿತ್ರ ಮಂದಿರದ ಗೇಟ್ ಕೀಪರ್ ಐದಾರು ವರ್ಷಗಳ ಹಿಂದೆ ಸರದಿ ಸಾಲಿನಲ್ಲಿ ನಿಂತು ಟಿಕೆಟ್‌ಗಾಗಿ ಹೊಡೆದಾಡಿ ಸಿನಿಮಾ ನೋಡಿ ಖುಷಿ ಪಡುತ್ತಿದ್ದೇವು. ಆದರೆ, ಆ ಆಸಕ್ತಿ ಕಡಿಮೆಯಾಗಿದೆ. ಐದಾರು ವರ್ಷಗಳಿಂದ ಚಿತ್ರಮಂದಿರದ ಕಡೆ ಮುಖ ಮಾಡಿಲ್ಲ. ಶ್ರೀಮಂತ ಮದರಿ ಸಿನಿಪ್ರಿಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net