ಸರ್ಕಾರಿ ಜಾಗದ ಬೇಲಿ ತೆರವು : ತಾಪಂ ಇಒ ಸಚಿನ್ ಕುಮಾರ್‌ಗೆ ಶಾಸಕ ರಾಜೇಶ್ ನೈಾಕ್ ಸೂಚನೆ

New Project (25)
Published on

ಬಂಟ್ವಾಳ: ಇಲ್ಲಿಯ ತಾ.ಪಂ.ಕಚೇರಿ ಪಕ್ಕ ಎಸ್‌ಜಿಎಸ್‌ವೈ ಸಭಾಂಗಣದ ಮುಂಭಾಗ ಅಧಿಕಾರಿಗಳ ವಾಹನ ನಿಲುಗಡೆಗಾಗಿ ಸರ್ಕಾರಿ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಸರಪಳಿ ಹಾಕಿ ಅತಿಕ್ರಮಿಸಿರುವುದನ್ನು ಇನ್ನು ಕೂಡ ತೆರವುಗೊಳಿಸದ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನೈಾಕ್ ಉಳಿಪ್ಪಾಡಿಗುತ್ತು ಮಂಗಳವಾರ ಮತ್ತೊಮ್ಮೆ ಭೇಟಿ ನೀಡಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿಯವರೊಂದಿಗೆ ಸಮಾಲೋಚಿಸಿದರು.

ಸಾರ್ವಜನಿಕರಿಗೆ ತೊಂದರೆಯಾಗುವಂತೆ ರಸ್ತೆಯನ್ನು ಅತಿಕ್ರಮಿಸುವ ರೀತಿಯಲ್ಲಿ ಖಾಲಿ ಜಾಗಕ್ಕೆ ಕಬ್ಬಿಣದ ಸರಪಳಿಯ ಬೇಲಿ ಹಾಕಿರುವ ಕ್ರಮವನ್ನು ಇ.ಒ.ಅವರಲ್ಲಿ ಪ್ರಶ್ನಿಸಿದರು. ಈಗ ಹಾಕಿರುವ ಬೇಲಿಯ ಆರ್ಧಭಾಗವನ್ನಾದರೂ ಸಾರ್ವಜನಿಕರ ವಾಹನ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸುವಂತೆ ಶಾಸಕ ರಾಜೇಶ್  ನೈಾಕ್ ತಾ.ಪಂ. ಇಒ ಸಚಿನ್ ಕುಮಾರ್ ಅವರಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಇದಕ್ಕೆ ಇಒ ಅವರು ಒಪ್ಪಿಗೆ ಸೂಚಿಸಿದರು.

ಹಾಗೆಯೇ ಪಕ್ಕದಲ್ಲಿರುವ ಸಮಾಜಕಲ್ಯಾಣ ಇಲಾಖೆಗೊಳಪಟ್ಟ ಆಶ್ರಮ ಶಾಲೆಯ ಕಟ್ಟಡ ತೆರವಿಗೆ ಈಗಾಗಲೇ ಆದೇಶವಾಗಿರುವ ಹಿನ್ನೆಲೆಯಲ್ಲಿ ಅದನ್ನು ತೆರವುಗೊಳಿಸಿದ ಬಳಿಕ ಅಲ್ಲಿನ ಖಾಲಿ ಸ್ಥಳವನ್ನು ವಾಹನ ನಿಲುಗಡೆಗೆ ಬಳಸುವಂತೆ ಶಾಸಕರು ಸೂಚಿಸಿದರು. ಕಟ್ಟಡದ ತೆರವಿಗೆ ಬೇಕಾದ ವ್ಯವಸ್ಥೆಯನ್ನು ತಾನೇ ಮಾಡಿಕೊಡುವುದಾಗಿಯು ಸಮಾಜ ಕಲ್ಯಾಣಾಧಿಕಾರಿಗೆ ಶಾಸಕರು ತಿಳಿಸಿದರು.

ಬೇಲಿ ಹಾಕಿರುವ ಹಿನ್ನೆಯಲ್ಲಿ ತಾ.ಪಂ.ಸಹಿತ ಅಲ್ಲಿನ ಕಟ್ಟಡದಲ್ಲಿರುವ ಇಲಾಖೆಗಳಿಗೆ ಬರುವ ಜನರು ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆಗೊಳಿಸುವುದರಿಂದ ಸುಗಮ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆಯಲ್ಲದೆ ಇಲ್ಲಿಯೇ ತಾಲೂಕು ಅಂಬೇಡ್ಕರ್ ಭವನವಿದ್ದು, ಇಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಬರುವಂತ ವಾಹನಗಳಿಗೆ ಎಲ್ಲಿ ಪಾರ್ಕಿಂಗ್ ವ್ಯವಸ್ಥೆ ಎಂಬುದನ್ನು ಸರ್ಕಾರಿ ಜಾಗಕ್ಕೆ ಅನಧಿಕೃತವಾಗಿ ಬೇಲಿ ಹಾಕಿರುವ ತಾ.ಪಂ.ಅಧಿಕಾರಗಳು ತಿಳಿಸಬೇಕೆಂಬ ಅಭಿಪ್ರಾಯವು ಇದೀಗ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net