ಉಡುಪಿ ನಗರದಲ್ಲಿ ವಾಹನ ನಿಲ್ಲಿಸಬೇಕು ಎಲ್ಲಿ...?

Traffic Lead
Published on

ಜಿಲ್ಲಾಡಳಿತಕ್ಕೆ ಸಾರ್ವಜನಿಕರ ಪ್ರಶ್ನೆ

ರಸ್ತೆ ಬದಿ ನಿಲ್ಲಿಸಲು ಪೊಲೀಸರ ತಡೆ

ಪ್ರಶಾಂತ ಭಾಗ್ವತ, ಉಡುಪಿ

ನಗರದ ಮುಖ್ಯ ರಸ್ತೆಯ ಅಕ್ಕ-ಪಕ್ಕದಲ್ಲಿ ನಿಲ್ಲಿಸುತ್ತಿರುವ ಬೈಕ್​, ಕಾರು ಹಾಗೂ ಇನ್ನಿತರ ವಾಹನಗಳನ್ನು ಸಂಚಾರಿ ಪೊಲೀಸರು ತೆರವು ಮಾಡಿಸುತ್ತಿದ್ದು, ಕೆಲ ವಾಹನಗಳ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದರೆ, ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಮುಖ್ಯ ರಸ್ತೆಗಳಲ್ಲಿ ದಿನವೂ ಸಂಚಾರ ಸಿಕ್ಕು (ಟ್ರಾಫಿಕ್​ ಜಾಮ್​) ಉಂಟಾಗುತ್ತಿದ್ದು, ಬೃಹತ್​ ಕಟ್ಟಡಗಳು ಹಾಗೂ ದೊಡ್ಡ ಹೋಟೆಲ್​ಗಳ ಮುಂಭಾಗದ ರಸ್ತೆಯ ಅಕ್ಕ-ಪಕ್ಕ ನಿಲ್ಲಿಸುವ ವಾಹನ ತೆರವು ಮಾಡಿಸುವಂತೆ ಫೆ.11ರಂದು ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಪೊಲೀಸ್​ ಇಲಾಖೆಗೆ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಆದೇಶಿಸಿದ್ದು, ಸಂಚಾರಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

Traffic-2

ಪೊಲೀಸರೊಂದಿಗೆ ಜಟಾಪಟಿ

ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಟ್ರಾಫಿಕ್​ ಪೊಲೀಸರು ಕಲ್ಸಂಕ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳ ಅಕ್ಕ-ಪಕ್ಕದಲ್ಲಿ ನಿಲ್ಲಿಸಿದ್ದ ಕಾರು, ಬೈಕ್​ಗಳನ್ನು ತೆರವು ಮಾಡಿಸಿದರು. ಮತ್ತೆ ಆ ಜಾಗಕ್ಕೆ ಬಂದವರ ವಾಹನ ನಿಲ್ಲಿಸದಂತೆಯೂ ತಡೆದರು. ಇದರಿಂದ ಆಕ್ರೋಶಿತರಾದ ವಾಹನಗಳ ಮಾಲೀಕರು, 'ಇಲ್ಲಿ ನೋ ಪಾರ್ಕಿಂಗ್​' ಎಂಬ ಫಲಕವೂ ಇಲ್ಲ. ಕಾನೂನು ಉಲ್ಲಂಘಿಸಿಲ್ಲ. ನನ್ನ ವಾಹನ ಇಲ್ಲಿ ನಿಂತಿದ್ದರಿಂದ ವಾಹನ ದಟ್ಟನೆಯೂ ಆಗುತ್ತಿಲ್ಲ. ಮತ್ತೇಕೆ ವಾಹನ ತೆರವು ಮಾಡಿಸುತ್ತೀರಿ? ನಗರಕ್ಕೆ ಕಾರು ಅಥವಾ ಬೈಕ್​ನಲ್ಲಿ ಬರುವ ಜನರು ತಮ್ಮ ವಾಹನ ಎಲ್ಲಿ ನಿಲ್ಲಿಸಬೇಕು' ಎಂದು ಸಂಚಾರಿ ಪೊಲೀಸರೊಂದಿಗೆ ಜಟಾಪಟಿ ನಡೆಸಿದರು.

ಮೇಲಿನ ಅಧಿಕಾರಿ ಕೇಳಿ

ಜನರ ಪ್ರಶ್ನೆಗೆ ಉತ್ತರಿಸುತ್ತಿರುವ ಟ್ರಾಫಿಕ್​ ಪೊಲೀಸರು, ನಮ್ಮ ಬಳಿ ಕೇಳಬೇಡಿ. ಅದನ್ನು ಎಸ್ಪಿ, ಡಿಸಿ ಅವರ ಬಳಿ ಕೇಳಿ. ನಮಗೆ ಮೇಲಿನ ಅಧಿಕಾರಿಗಳು ರಸ್ತೆ ಪಕ್ಕ ವಾಹನ ನಿಲ್ಲಿಸದಂತೆ ನೋಡಿಕೊಳ್ಳಲು ತಿಳಿಸಿದ್ದಾರೆ. ಅದರಂತೆ ನಾವು ಕರ್ತವ್ಯ ಮಾಡುತ್ತಿದ್ದೇವೆ ಎಂದು ಉತ್ತರಿಸತೊಡಗಿದ್ದಾರೆ.

ನಗರಕ್ಕೆ ಇನ್ನು ವಾಹನ ತರಬಾರದೇ?

ಜಿಲ್ಲಾಡಳಿತದ ಹಾಗೂ ಪೊಲೀಸ್​ ಇಲಾಖೆಯ ಕ್ರಮವನ್ನು ಉಡುಪಿಯ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ನಗರದಲ್ಲಿ ಆಗುತ್ತಿರುವ ವಾಹನ ದಟ್ಟಣೆಯ ವಿರುದ್ಧ ಜನರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾಗೆಂದು ವಾಹನಗಳನ್ನು ಇನ್ನು ಯಾರೂ ನಗರದತ್ತ ತರಬಾರದೇ? ಎಲ್ಲರೂ ನಡೆದೇ ಸಾಗಬೇಕೇ? ಹಿರಿಯರು, ವೃದ್ಧರು ಅಥವಾ ಚಿಕ್ಕ ಮಕ್ಕಳನ್ನೂ ಸಹ ವಿವಿಧ ಕಾರಣದಿಂದ ನಗರದತ್ತ ಕರೆ ತಂದಿರುತ್ತೇವೆ. ಆಸ್ಪತ್ರೆ, ಹೋಟೆಲ್​, ಮೆಡಿಕಲ್​ ಶಾಪ್​ ಅಥವಾ ಬ್ಯಾಂಕ್​ ಕೆಲಸದ ನಿಮಿತ್ತ ಸಿಟಿಗೆ ಕಾರು ಅಥವಾ ಬೈಕ್​ನಲ್ಲಿ ಬರುತ್ತೇವೆ. ಆ ವಾಹನಗಳನ್ನು ಕೆಲ ಸಮಯ ರಸ್ತೆಯ ಅಕ್ಕ-ಪಕ್ಕದಲ್ಲಿ ಇಡುವುದು ಸಹಜವಲ್ಲವೇ? ಇನ್ನು ಮುಂದೆ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಬಾರದೆಂದು ಜಿಲ್ಲಾಡಳಿತ ಸುತ್ತೋಲೆ ಹೊರಡಿಸಲಿ. ಜತೆಗೆ ವಾಹನ ಎಲ್ಲಿ ನಿಲ್ಲಿಸಬೇಕೆಂಬ ಬಗ್ಗೆಯೂ ಸ್ಪಷ್ಟ ಆದೇಶ ನೀಡಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕಟ್ಟಡ ಮಾಲೀಕರಿಗೆ ನೋಟಿಸ್​

ಉಡುಪಿ ನಗರ ವ್ಯಾಪ್ತಿಯಲ್ಲಿ 58ಕ್ಕೂ ಹೆಚ್ಚು ವಾಣಿಜ್ಯ ಕಟ್ಟಡಗಳ ಮುಂಭಾಗದ ರಸ್ತೆಯ ಪಕ್ಕದಲ್ಲಿಯೇ ಅಂಗಡಿ ಮಾಲೀಕರು ಹಾಗೂ ಗ್ರಾಹಕರು ತಮ್ಮ ವಾಹನ ನಿಲ್ಲಿಸುತ್ತಿದ್ದು, ಅದು ವಾಹನ ದಟ್ಟಣೆಗೆ ಕಾರಣವಾಗುತ್ತಿದೆ. ಹೀಗಾಗಿ ಕಟ್ಟಡಗಳ ನಿಮಾರ್ಣಕ್ಕೆ ನಗರಸಭೆಯಿಂದ ಅನುಮತಿ ಪಡೆಯುವ ಸಂದರ್ಭದಲ್ಲಿ ವಾಹನ ಪಾರ್ಕಿಂಗ್​ಗೆ ಸೂಕ್ತ ವ್ಯವಸ್ಥೆ ಮಾಡಬೇಕೆಂಬ ನಿಯಮ ಪಾಲನೆ ಆಗಿಲ್ಲ. ಅಂತಹ ಕಟ್ಟಡದ ಮಾಲೀಕರಿಗೆ ನೋಟಿಸ್​ ನೀಡುವಂತೆ ಹಾಗೂ ಅವರ ಕಟ್ಟಡದ ಜಾಗದಲ್ಲಿ ಪಾರ್ಕಿಂಗ್​ ವ್ಯವಸ್ಥೆಗೆ ಅನುವು ಮಾಡಿಕೊಡುವಂತೆ ಸೂಚಿಸಲು ನಗರಸಭೆಯವರಿಗೆ ಇಗಾಗಲೇ ಆದೇಶ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ವಿಜಯವಾಣಿಗೆ ತಿಳಿಸಿದ್ದಾರೆ.

DC
ಮುಖ್ಯ ರಸ್ತೆಯ ಬದಿಯಲ್ಲಿ ವಾಹನ ನಿಲ್ಲಿಸುವಂತಿಲ್ಲ. ನಗರದಲ್ಲಿ ಉಂಟಾಗುತ್ತಿರುವ ವಾಹನ ದಟ್ಟಣೆ ನಿಯಂತ್ರಿಸಲು ಇದೂ ಪ್ರಮುಖ ಕಾರ್ಯವಾಗಿದೆ. ಎಲ್ಲ ಕಟ್ಟಡಗಳ ಮಾಲೀಕರು ಅವರ ಗ್ರಾಹಕರಿಗೆ ಪಾರ್ಕಿಂಗ್​ ವ್ಯವಸ್ಥೆ ಕಲ್ಪಿಸಿಕೊಡಬೇಕು. ಉಡುಪಿಯ ಸರ್ವಿಸ್​ ಬಸ್​ ನಿಲ್ದಾಣದ ಸುತ್ತಮುತ್ತ, ಬೋರ್ಡ್​ ಹೈಸ್ಕೂಲ್​ ಮುಂಭಾಗದಲ್ಲಿ ಗೂಡಂಗಡಿ ನಿಮಾರ್ಣ ಹಾಗೂ ತಳ್ಳುವ ಗಾಡಿಗಳಲ್ಲಿ ಹಣ್ಣು-ಹಂಪಲು ಮಾರಾಟ ಮಾಡುವುದರಿಂದ ವಾಹನ ದಟ್ಟಣೆ ಉಂಟಾಗುತ್ತಿದೆ. ಅವೆಲ್ಲವನ್ನೂ ತೆರವುಗೊಳಿಸಲು ನಗರಸಭೆಗೆ ಸೂಚಿಸಿದ್ದೇನೆ. | ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net