

ಬಂಟ್ವಾಳ: ಬಿ.ಸಿ.ರೋಡಿನ ಹೃದಯ ಭಾಗದಲ್ಲಿರುವ ಹಣ್ಣು ಹಾಗೂ ಹೂ ಮಾರಾಟದ ಅಂಗಡಿಯೊಂದು ಪುಟ್ಪಾತ್ವರೆಗೆ ಶೀಟ್ ಹಾಕಿ ವ್ಯಾಪಾರ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ನಡೆದಾಡಲು ತೊಂದರೆಯಾಗುತ್ತಿರುವ ಬಗ್ಗೆ ಕೊನೆಗೂ ಪುರಸಭೆಯ ಸದಸ್ಯರು ಮೌನ ಮುರಿದ್ದಾರೆ.
ಬಿ.ಸಿ.ರೋಡಿನ ಗಣೇಶ್ ಮೆಡಿಕಲ್ ಬಳಿ ಇರುವ ಈ ಹಣ್ಣಿನ ಅಂಗಡಿ ಚಿಕ್ಕದಾಗಿದ್ದರೂ ಹೆಚ್ಚುವರಿ ಶೀಟ್ಗಳನ್ನು ಅಳವಡಿಸಿ ಜನರು ನಡೆದಾಡುವ ಪುಟ್ಪಾತ್ವರಗೆ ವಿಸ್ತರಿಸಿಕೊಂಡಿದೆ. ಈ ಅಂಗಡಿಯ ಮುಂದೆ ಗ್ರಾಹಕರು ಖರೀದಿಗೆ ನಿಂತರೆ ಪುಟ್ಪಾತ್ನಲ್ಲಿ ನಡೆದಾಡುವ ಸಾರ್ವಜನಿಕರು ಮುಂದೆ ಸಾಗಲು ಪರದಾಡಬೇಕಾಗುತ್ತದೆ. ನಗರದ ಕೇಂದ್ರ ಭಾಗದಲ್ಲೇ ಜನರಿಗೆ ತೊಂದರೆಯಾಗುವ ರೀತಿಯಲ್ಲಿ ಅಂಗಡಿಗಳನ್ನು ಶೀಟ್ ಹಾಕಿ ವಿಸ್ತರಿಸಿಕೊಂಡು ವ್ಯಾಪಾರ ನಡೆಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದಲೂ ದೂರುಗಳು ಕೇಳಿ ಬಂದಿವೆ.
ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಅಂಗಡಿಗಿಂತ ಹೆಚ್ಚು ವಿಸ್ತರಿಸಿ ಶೀಟ್ಗಳನ್ನು ಹಾಕಿ ವ್ಯಾಪಾರ ನಡೆಸುವ ಅಂಗಡಿಗಳು ಹಲವಾರಿವೆ. ಈ ಹಿಂದೆಯೂ ಈ ಬಗ್ಗೆ ಪುರಸಭೆಯಲ್ಲಿ ಚರ್ಚೆ ನಡೆದು ಅನಧಿಕೃತ ಶೀಟ್ಗಳನ್ನು ತೆರವುಗೊಳಿಸಲು ದಿನ ನಿಗದಿ ಪಡಿಸಿದರೂ ರಾಜಕೀಯ ಒತ್ತಡದಿಂದ ಅದು ಸಾಧ್ಯವಾಗಿರಲಿಲ್ಲ.
ಬಿ.ಸಿ.ರೋಡಿನ ಗಣೇಶ್ ಮೆಡಿಕಲ್ ಬಳಿ ಕಾರ್ಯನಿರ್ವಹಿಸುತ್ತಿರುವ ಹೂ ಹಾಗೂ ಹಣ್ಣು ವ್ಯಾಪಾರ ಮಾಡುತ್ತಿರುವ ಈ ಅಂಗಡಿಯಲ್ಲಿ ಅನಧಿಕೃತವಾಗಿ ಹಾಕಿರುವ ಶೀಟ್ಗಳನ್ನು ತೆರವುಗೊಳಿಸುವಂತೆ ಬುಧವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದಿದೆ. ಆಡಳಿತ ಪಕ್ಷದ ಸದಸ್ಯ ಮಹಮ್ಮದ್ ಶರೀಫ್ ವಿಷಯ ಪ್ರಸ್ತಾಪಿಸಿ ಅಂಗಡಿಯ ವ್ಯಾಪ್ತಿಯನ್ನು ಮೀರಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಕಾರಣ ಇದನ್ನು ಶ್ರೀ ತೆರವುಗೊಳಿಸಬೇಕೆಂದು ಅಧ್ಯಕ್ಷರಲ್ಲಿ ಆಗ್ರಹಿಸಿದರು.