

ಮೈಸೂರು: ಮೈಸೂರು ತಾಲೂಕಿನ ಇಲವಾಲ ಹೋಬಳಿ ಮಾದಗಳ್ಳಿಯ ಗದ್ದಿಗೆ ಮುಖ್ಯರಸ್ತೆಯಲ್ಲಿ ಗುರುವಾರ ಸರ್ಕಾರಿ ಜಾಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು.
ಈ ಮೂಲಕ ಸರ್ಕಾರಿ ಜಾಗ ಕಬಳಿಸಿ ಅಕ್ರಮವಾಗಿ ವಾಣಿಜ್ಯ ಮಳಿಗೆ ನಿರ್ಮಿಸಿದವರಿಗೆ ಬಿಸಿ ಮುಟ್ಟಿಸಲಾಯಿತು.
ಸುಮಾರು 12 ವಾಣಿಜ್ಯ ಮಳಿಗೆಗಳನ್ನು ತೆರುವುಗೊಳಿಸಿ ಕೋಟ್ಯಂತರ ಬೆಲೆಬಾಳುವ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಲಾಯಿತು. ತಹಸೀಲ್ದಾರ್ ಮಹೇಶ್‌ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಸರ್ವೇ ನಂ.54ರಿಂದ 57ರ ವರೆಗಿನ ಜಾಗವು ಸರ್ಕಾರಿ ರಸ್ತೆ ಆಗಿದೆ. ಸದರಿ ಸ್ಥಳವನ್ನು ಒತ್ತುವರಿ ಮಾಡಿಕೊಂಡಿದ್ದ ಭೂಗಳ್ಳರು ವಾಣಿಜ್ಯ ಮಳಿಗೆ ನಿರ್ಮಿಸಿದ್ದರು. ಈ ಮಾಹಿತಿ ಅರಿತ ಕಂದಾಯ ಅಧಿಕಾರಿಗಳು, ದಾಖಲೆ ಪರಿಶೀಲಿಸಿ ಸುಮಾರು 3 ಕೋಟಿ ರೂ. ಬೆಲೆಬಾಳುವ ಆಸ್ತಿಯನ್ನು ಸರ್ಕಾರದ ವಶಕ್ಕೆ ಪಡೆದರು.
ಕಾರ್ಯಾಚರಣೆಯಲ್ಲಿ ಇಲವಾಲ ಹೋಬಳಿ ಉಪ ತಹಸೀಲ್ದಾರ್ ಕುಬೇರ್, ರಾಜಸ್ವ ನಿರೀಕ್ಷಕ ಶಿವಕುಮಾರ್, ಗ್ರಾಮ ಆಡಳಿತ ಅಧಿಕಾರಿ ಭಾರತೀಶ್, ಬೋಗಾದಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಬಸವರಾಜ್, ಕಂದಾಯ ನಿರೀಕ್ಷಕ ವಿಜಯ್‌ಕುಮಾರ್ ಹಾಗೂ ಪಿಡಬ್ಲುೃ ಡಿ ಸಿಬ್ಬಂದಿ ಭಾಗವಹಿಸಿದ್ದರು. ಇಲವಾಲ ಠಾಣೆಯ ಪೊಲೀಸರು ಭದ್ರತೆ ಒದಗಿಸಿದ್ದರು.