More

    ಕಣ್ಣುಗಳ ಸ್ವಚ್ಛತೆ, ಏಕಾಗ್ರತೆ ವರ್ಧನೆ, ನಿದ್ರಾಹೀನತೆ ನಿವಾರಣೆಗೆ ತ್ರಾಟಕ

    ಯೋಗಕ್ಷೇಮತ್ರಾಟಕ ಎಂದರೆ ‘ನೋಡು, ದಿಟ್ಟಿಸು, ದೃಷ್ಟಿಸು’ ಎಂದರ್ಥ. ಷಟ್ಕರ್ಮಗಳಲ್ಲಿ ತ್ರಾಟಕವು ಕೊನೆಯದು. ಶಾರೀರಿಕ ಅಭ್ಯಾಸಗಳು ಮತ್ತು ಪ್ರಜ್ಞೆಯನ್ನು ಉನ್ನತ ಸ್ಥಿತಿಗೆ ಒಯ್ಯುವ ಮಾನಸಿಕ ಅಭ್ಯಾಸಗಳ ನಡುವೆ ಇದು ಸೇತುವೆಯಂತೆ ಇದೆ. ಇದು ಹಠಯೋಗ ಮತ್ತು ರಾಜಯೋಗದ ನಡುವಿನ ಸೇತುವೆಯಾಗಿದೆ. ಶಾಸ್ತ್ರೀಯವಾಗಿ ಇದು ಹಠಯೋಗದ ಭಾಗವಾಗಿದ್ದರೂ ಇದನ್ನು ರಾಜಯೋಗದ ಭಾಗವಾಗಿಯೂ ಗುರುತಿಸಬಹುದಾಗಿದೆ.

    ಪ್ರಯೋಜನಗಳು: ತ್ರಾಟಕ ಅಭ್ಯಾಸದಿಂದ ಕಣ್ಣುಗಳು ಸ್ವಚ್ಛವಾಗುತ್ತವೆ ಮತ್ತು ಪ್ರಕಾಶಮಾನವಾಗುತ್ತವೆ. ಇದು ನರಮಂಡಲದ ಆತಂಕ, ಬಿಗುವು, ಖಿನ್ನತೆ ಹಾಗೂ ನಿದ್ರಾಹೀನತೆಗಳನ್ನು ನಿವಾರಿಸಿ ನರಮಂಡಲ ವ್ಯವಸ್ಥೆಯಲ್ಲಿ ಸಮತೋಲನ ಉಂಟá-ಮಾಡುತ್ತದೆ. ಇದು ನೆನಪಿನ ಶಕ್ತಿಯನ್ನು ಸುಧಾರಿಸುತ್ತದೆ. ಉತ್ತಮ ಏಕಾಗ್ರತೆ ಹಾಗೂ ದೃಢಸಂಕಲ್ಪ ಶಕ್ತಿಯನ್ನು ಅಭಿವೃದ್ಧಿ ಪಡಿಸಲು ಸಹಾಯಕವಾಗಿದೆ. ಇದು ಆಜ್ಞಾಚಕ್ರವನ್ನು ಚುರುಕುಗೊಳಿಸುತ್ತದೆ ಮತ್ತು ಧ್ಯಾನಕ್ಕೆ ಇದು ಅತ್ಯುತ್ತಮ ಪೂರ್ವ ಸಿದ್ಧತೆಯಾಗಿದೆ.

    ಅನುಕ್ರಮಣಿಕೆ: ಆಸನ ಮತ್ತು ಪ್ರಾಣಾಯಾಮಗಳ ನಂತರ ಮತ್ತು ಜಪ ಅಥವಾ ಧ್ಯಾನಕ್ಕೆ ಮೊದಲು ತ್ರಾಟಕವನ್ನು ಮಾಡಬೇಕು.
    ಅಭ್ಯಾಸದ ಸಮಯ: ಇದನ್ನು ಯಾವಾಗಲಾದರೂ ಮಾಡಬಹುದು. ಹೊಟ್ಟೆಯು ಖಾಲಿಯಿರುವಂಥ ಬೆಳಗಿನ ಅಥವಾ ಸೂರ್ಯಾಸ್ತದ ಸಮಯ ಉತ್ತಮ.

    ತ್ರಾಟಕ ಅಭ್ಯಾಸ: ಒಂದು ನಂದಾದೀಪವನ್ನು ಚಿಕ್ಕ ಕುರ್ಚಿಯ ಮೇಲಿಡಿ. ಕುಳಿತುಕೊಂಡಾಗ ದೀಪದ ಉರಿಯು ಕಣ್ಣಿನ ಮಟ್ಟಕ್ಕೆ ಸರಿಯಾಗಿ ಇರಲಿ. ಹಿತವೆನಿಸಿದ ಯಾವುದಾದರೂ ಧ್ಯಾನಾಸನದಲ್ಲಿ ಕುಳಿತುಕೊಳ್ಳಿ. ತಲೆ ಮತ್ತು ಬೆನ್ನು ನೇರವಾಗಿರಲಿ. ಉರಿಯುವ ದೀಪವು ನಿಮ್ಮ ದೇಹದಿಂದ ಒಂದು ಗಜದಷ್ಟು ದೂರ ಇರುವಂತೆ ನೀವು ಕುಳಿತ ಭಂಗಿಯನ್ನು ಹೊಂದಾಣಿಸಿರಿ. ಕಣ್ಣುಗಳನ್ನು ಮುಚ್ಚಿ ಇಡಿ ದೇಹವನ್ನು, ಮುಖ್ಯವಾಗಿ ಕಣ್ಣುಗಳಲ್ಲಿ ಯಾವುದೇ ಬಿಗಿತವಿಲ್ಲದಂತೆ ಸಡಿಲಿಸಿರಿ. ದೇಹವು ದೃಢವಾಗಿರುವುದರ ಬಗ್ಗೆ ಕೆಲವು ನಿಮಿಷಗಳವರೆಗೆ ಗಮನಹರಿಸಿ. ಅಭ್ಯಾಸದಾದ್ಯಂತವೂ ದೇಹವು ನಿಶ್ಚಲವಾಗಿರಲಿ. ಕಣ್ಣುಗಳನ್ನು ತೆರೆದು ಜ್ಯೋತಿಯ ತುದಿಯನ್ನು ಏಕಾಗ್ರತೆಯಿಂದ ದೃಷ್ಟಿಸಿ. ಜ್ವಾಲೆಯು ಸ್ವಲ್ಪ ಅಲುಗಾಡಬಹುದು. ಬತ್ತಿಯ ತುದಿ ಮಾತ್ರ ಸ್ಥಿರವಾಗಿರಲಿ. ಕಣ್ಣುಗಳನ್ನು ಮಿಟುಕಿಸುವುದಾಗಲೀ, ಕಣ್ಣು ಗುಡ್ಡೆಗಳನ್ನು ಚಲಿಸುವುದಾಗಲೀ ಮಾಡದಂತೆ ಪ್ರಯತ್ನಿಸಿ. ಆಯಾಸ ಬೇಡ. ಆಯಾಸವಾದರೆ ಕಣ್ಣುಗಳು ಒತ್ತಡಕ್ಕೊಳಗಾಗುತ್ತವೆ ಮತ್ತು ಕಂಪಿಸುತ್ತವೆ. ಜ್ಯೋತಿಯ ಮೇಲೆ ನಿಮ್ಮ ಗಮನ ಎಷ್ಟರಮಟ್ಟಿಗೆ ಕೇಂದ್ರೀಕೃತವಾಗಿರಬೇಕೆಂದರೆ ದೇಹದ ಪರಿವೆಯೇ ಇಲ್ಲದಂತಾಗಲಿ. ಮನಸ್ಸು ಅತ್ತಿತ್ತ ಚಲಿಸಿದರೆ, ನಿಧಾನವಾಗಿ ಅದನ್ನು ಅಭ್ಯಾಸದೆಡೆಗೆ ಮರಳಿ ತನ್ನಿ. ಒಂದೆರಡು ನಿಮಿಷಗಳ ನಂತರ, ಕಣ್ಣುಗಳಿಗೆ ಧಣಿವಾದರೆ ಅಥವಾ ನೀರು ಸುರಿಯಲು ಆರಂಭವಾದರೆ, ಮೆಲುವಾಗಿ ಕಣ್ಣುಗಳನ್ನು ಮುಚ್ಚಿ. ಮುಚ್ಚಿದ ಕಣ್ಣುಗಳ ಮುಂದೆ ಜ್ಯೋತಿಯ ಅನುಬಿಂಬವನ್ನು ದೃಷ್ಟಿಸಲು ಪ್ರಯತ್ನಿಸಿ. ಬಿಂಬವು ಮೇಲೆ ಅಥವಾ ಕೆಳಗೆ ಚಲಿಸಿದರೆ ಅಥವಾ ಅತ್ತಿತ್ತ ಚಲಿಸಿದರೆ ಅದನ್ನು ಗಮನಿಸಿ ಮತ್ತು ಸ್ಥಿರಗೊಳಿಸಲು ಯತ್ನಿಸಿ. ಜ್ಯೋತಿಯ ಬಿಂಬವು ಮಸುಕಾದರೆ, ಅದನ್ನು ಮತ್ತೆ ತಂದುಕೊಳ್ಳಲು ಯತ್ನಿಸಿ. ಪ್ರತಿಬಿಂಬವನ್ನು ಇನ್ನು ಹಿಡಿದಿಡಲು ಸಾಧ್ಯವಿಲ್ಲವೆನಿಸಿದಾಗ ಮೆಲುವಾಗಿ ಕಣ್ಣುಗಳನ್ನು ತೆರೆಯಿರಿ. ಬಾಹ್ಯ ದೃಷ್ಟಿಯ ಕ್ರಿಯೆಯನ್ನು ಪುನರಾವರ್ತಿಸಿ, ಮತ್ತೊಮ್ಮೆ ಕಣ್ಣುಗಳನ್ನು ಮುಚ್ಚಿ, ಒಳಗಿನ ಪ್ರತಿ ಬಿಂಬವನ್ನು ದೃಷ್ಟಿಸಿ. ಪಾಮಿಂಗ್ ಮಾಡಿ ಕಣ್ಣುಗಳಿಗೆ ವಿಶ್ರಾಂತಿ ನೀಡಿ.

    ಅವಧಿ: ಆರಂಭದಲ್ಲಿ 1 ಅಥವಾ 2 ನಿಮಿಷಗಳವೆರೆಗೆ ಮಾತ್ರ ಅಭ್ಯಾಸ ಮಾಡಬೇಕು. ನಂತರದ ದಿನಗಳಲ್ಲಿ 10 ನಿಮಿಷಗಳ ಅಭ್ಯಾಸ ಸಾಕು.

    ಮುನ್ನೆಚ್ಚರಿಕೆ: ತ್ರಾಟಕವನ್ನು, ಸ್ಥಿರವಾದ ಜ್ಯೋತಿಯನ್ನು ದೃಷ್ಟಿಸಿ ಮಾಡಬೇಕು. ಆದ್ದರಿಂದ ಆ ಪರಿಸರದಲ್ಲಿ ಗಾಳಿ ಬೀಸದಂತಿ ರಬೇಕು. ಅನಗತ್ಯವಾಗಿ ಪ್ರಯಾಸವಾಗದಂತೆ ಗಮನವಹಿಸಬೇಕು. ಕಣ್ಣುಗಳನ್ನು ಮಿಟುಕಿಸದೆ ತೆರೆದಿರುವಂತೆ ಮಾಡುವ ಸಾಮರ್ಥ್ಯವನ್ನು ಸತತವಾದ ಅಭ್ಯಾಸದಿಂದ ಕ್ರಮೇಣ ಗಳಿಸಿಕೊಳ್ಳಬೇಕು.

    ಪ್ರಭೇದಗಳು: ತ್ರಾಟಕ ಅಭ್ಯಾಸಕ್ಕಾಗಿ ಯಾವ ವಸ್ತುವನ್ನು ಬೇಕಾದರು ಆಯ್ಕೆ ಮಾಡಬಹುದು. ಓಂಕಾರ, ದೇವರ ಮೂರ್ತಿ, ತುಳಸಿ, ಪ್ರಕೃತಿಯಲ್ಲಿ ಸ್ಥಿರವಾಗಿರುವ ಗಿಡ-ಮರ ಮುಂತಾದ ವಸ್ತುಗಳು.

    ಈ ಜ್ಯೂಸ್ ಕುಡಿದರೆ ದೇಹವು ಶುದ್ಧಿಯಾಗುತ್ತೆ, ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತೆ..!

    ಅಂದು ಕ್ರಿಕೆಟ್​ ಪಂದ್ಯ ಪ್ರಸಾರಕ್ಕೆ 5 ಲಕ್ಷ ರೂ. ಕೇಳಿತ್ತು ದೂರದರ್ಶನ! ಇಂದು ಪ್ರಸಾರ ಹಕ್ಕು ಖರೀದಿಗೆ ಪೈಪೋಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts