ಕುಕ್ಕೆಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ : 450ಕ್ಕೂ ಅಧಿಕ ಜನರಿಂದ ಕುಮಾರಧಾರಾದಿಂದ ಗೋಪುರದ ತನಕ ಕ್ಲೀನಿಂಗ್

New Project (10)
Published on

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಕುಕ್ಕೆ ಕ್ಷೇತ್ರದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ನೆರವೇರಿತು. 450ಕ್ಕೂ ಅಧಿಕ ಮಂದಿ ಕ್ಷೇತ್ರಾದ್ಯಂತ ಸ್ವಚ್ಛತಾ ಕಾರ್ಯ ನೆರವೇರಿಸಿದರು. ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ನಿರ್ದೇಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರಿಂದ ಮತ್ತು ದೇವಳದ ಸಿಬ್ಬಂದಿಯಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ದೇವಳದ ಎಇಒ ಯೇಸುರಾಜು,ದೇವಳದ ಆರೋಗ್ಯ ನಿರೀಕ್ಷಕ ಯೋಗೀಶ್ ಎಂ.ವಿಟ್ಲ ಮಾರ್ಗದರ್ಶನ ನೀಡಿದರು.

450 ಜನರಿಂದ ಶ್ರಮದಾನ: ಭಕ್ತರು ಸ್ವಯಂಪ್ರೇರಿತರಾಗಿ ನಡೆಸುವ ಬೀದಿ ಉರುಳು ಸೇವೆಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ 450 ಸ್ವಯಂಸೇವಕರು ಕುಮಾರಧಾರಾ ಸ್ನಾನಘಟ್ಟ ಪರಿಸರದಿಂದ ರಥಬೀದಿಯ ರಾಜಗೋಪುರದ ತನಕ ಸ್ವಚ್ಛತಾ ಸೇವೆ ನಡೆಸಿದರು. ಕುಮಾರಧಾರಾದಿಂದ ಆರಂಭಿಸಿ ರಥಬೀದಿ ತನಕ ರಸ್ತೆಯ ಇಕ್ಕೆಲದಲ್ಲಿದ್ದ ಕಸಕಡ್ಡಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಲಾಯಿತು. ಅಲ್ಲದೆ ರಸ್ತೆಯನ್ನು ಸಂಪೂರ್ಣವಾಗಿ ಗುಡಿಸಿ ಶುಚಿಗೊಳಿಸಲಾಯಿತು. ಇದರಿಂದಾಗಿ ಬೀದಿ ಉರುಳು ಸೇವೆ ಮಾಡುವ ಭಕ್ತರಿಗೆ ಮಣ್ಣಿನ ಕಣ, ಚಿಕ್ಕ ಕಲ್ಲುಗಳಿಂದ ತೊಂದರೆ ಆಗುವುದು ತಪ್ಪಿತು. ಕಾಶಿಕಟ್ಟೆ, ಬಿಲದ್ವಾರ, ಪಾರ್ಕಿಂಗ್ ಸ್ಥಳ, ಆದಿಸುಬ್ರಹ್ಮಣ್ಯ ಮೊದಲಾದ ಕಡೆಗಳಲ್ಲಿ ಸ್ವಚ್ಛತಾ ಕಾರ್ಯ ನೆರವೇರಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಬ್ರಹ್ಮಣ್ಯ ಮತ್ತು ಗುತ್ತಿಗಾರು ಒಕ್ಕೂಟಗಳ ಸ್ವಸಹಾಯ ಸಂಘಗಳ ಸದಸ್ಯರು, ಶೌರ್ಯ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ಮತ್ತು ಗುತ್ತಿಗಾರಿನ ಸದಸ್ಯರು ಸ್ವಚ್ಛತಾ ಸೇವೆಯನ್ನು ಬೆಳಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆ ತನಕ ನೆರವೇರಿಸಿದರು. ಇವರೊಂದಿಗೆ ದೇವಳದ ಸಿಬ್ಬಂದಿ ಕರಜೋಡಿಸಿದರು. ಸೇವೆ ನೆರವೇರಿಸಿದ ಸ್ವಯಂಸೇವಕರಿಗೆ ದೇವಳದಿಂದ ಊಟ ಉಪಹಾರ ವ್ಯವಸ್ಥೆ, ತ್ಯಾಜ್ಯ ವಿಲೇವಾರಿಗೆ ದೇವಳದಿಂದ ವಾಹನ ವ್ಯವಸ್ಥೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net