

ವಿಜಯವಾಣಿ ಸುದ್ದಿಜಾಲ ಬ್ರಹ್ಮಾವರ
ಉಡುಪಿ ಜಿಲ್ಲೆ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತಿರುವ ಕಾರಣ ಇಲ್ಲಿ ದಾನಿಗಳೂ ನೆರವಾಗುತ್ತಿರುವುದು ರಾಷ್ಟ್ರಕ್ಕೆ ಮಾದರಿ ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು. ಬ್ರಹ್ಮಾವರದ 128 ವರ್ಷದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಾನಿ ಎಚ್.ಎಸ್ ಶೆಟ್ಟಿ 2.80 ಕೋಟಿ ರೂ. ವೆಚ್ಚದಲ್ಲಿ ಕೊಡುಗೆಯಾಗಿ ನೀಡಿದ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಕೊಠಡಿಗಳನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಗುಣಮಟ್ಟದ ಶಿಕ್ಷಣಕ್ಕೆ ಜನರು ಹೆಚ್ಚು ಒತ್ತು ನೀಡುವ ಕಾರಣ ಸರ್ಕಾರಿ ಶಾಲೆ ಇಂತಹ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು. ವಾರಂಬಳ್ಳಿ ಗ್ರಾಪಂ ಅಧ್ಯಕ್ಷ ನಿತ್ಯಾನಂದ ಬಿ.ಆರ್., ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಮ್, ನಿವೃತ್ತ ಮುಖ್ಯಶಿಕ್ಷಕ ಬಿ.ಟಿ.ನಾಯ್ಕ, ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ರವೀಂದ್ರ ಉಪಾದ್ಯಾ, ಪ್ರೌಢಶಾಲೆ ಮುಖ್ಯಶಿಕ್ಷಕಿ ಉಮಾ ಪಿ., ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ದೇವಕುಮಾರಿ, ಕರ್ನಾಟಕ ಪಬ್ಲಿಕ್ ಸ್ಕೂಲ್ ಉಪಾಧ್ಯಕ್ಷ ಪಂಚಮಿ ಮೋಹನ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ರಾಮಕೃಷ್ಣ ಹಾರಾಡಿ, ಅರುಣ್ ಭಂಡಾರಿ ಬೈಕಾಡಿ, ಉದ್ಯಮಿ ಪ್ರಭಾಕರ ಆಚಾರ್ಯ ಉಪಸ್ಥಿತರಿದ್ದರು. 93 ವಿದ್ಯಾರ್ಥಿಗಳ 3 ಕೊಠಡಿಗೆ ಪಿಠೋಪಕರಣಗಳನ್ನು ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ ಮತ್ತು ಮೋಹನ್ ಶೆಟ್ಟಿ ಕೊಡುಗೆ ನೀಡಿದರು.