ಶಕ್ತಿನಗರದಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ಶಾಸಕ ವೇದವ್ಯಾಸ್ ಕಾಮತ್ ಸಹಿತ ಹಲವರ ವಿರುದ್ಧ ಪ್ರಕರಣ ದಾಖಲು

veda
Published on

ಮಂಗಳೂರು: ಶಕ್ತಿನಗರ ಕೃಷ್ಣ ಭಜನಾ ಮಂದಿರದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ವೇಳೆ ಶಾಸಕ ವೇದವ್ಯಾಸ್ ಕಾಮತ್ ಪ್ರಚೋದನೆಯಿಂದ ತನ್ನ ಮೇಲೆ ಹಲ್ಲೆ ತಂಡವೊಂದು ಹಲ್ಲೆ ನಡೆಸಿದೆ ಎಂದು ಕಾಂಗ್ರೆಸ್ ಕಾರ್ಯಕರ್ತ ಯಶವಂತ ಪ್ರಭು ಹಾಗೂ ಇದಕ್ಕೆ ಪ್ರತಿಯಾಗಿ ತನ್ನ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತ ಮಣಿ ಎಂಬವರು ನೀಡಿದ ದೂರಿನಂತೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಇತ್ತಂಡಗಳ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.

ಶಾಸಕ ವೇದವ್ಯಾಸ ಕಾಮತ್ ಭಾನುವಾರ ರಾತ್ರಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಕೂಡಾ ಅಲ್ಲಿಗೆ ಬರುವವರಿದ್ದರು. ಇದಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರೂ ಕೂಡಾ ಅಲ್ಲಿ ಸೇರಿದ್ದರು. ಈ ವೇಳೆ ಶಾಸಕ ವೇದವ್ಯಾಸ ಕಾಮತ್ ನೀಡಿರುವ ಹೇಳಿಕೆಯೊಂದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ, ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತ ಯಶವಂತ್ ಎನ್ನುವರ ಮೇಲೆ ಆರೇಳು ಮಂದಿ ಸೇರಿ ಹಲ್ಲೆ ಮಾಡಿದ್ದಾರೆ. ಇದರಿಂದ ಅವರು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದು, ವೇದವ್ಯಾಸ ಕಾಮತ್ ಅವರ ಪ್ರಚೋದನೆಯಿಂದ ಆರೇಳು ಮಂದಿ ಬಿಜೆಪಿ ಕಾರ್ಯಕರ್ತರು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅವರು ನೀಡಿದರುವ ಹೇಳಿಕೆಯಂತೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತ ಮಣಿ ಎನ್ನುವವರು ಕಂಕನಾಡಿ ನಗರ ಠಾಣೆಯಲ್ಲಿ ಪ್ರತಿ ದೂರು ನೀಡಿದ್ದು, ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ಘರ್ಷಣೆ ವೇಳೆ ಬಿಡಿಸಲು ಮಧ್ಯಸ್ಥಿಕೆ ವಹಿಸಲು ಹೋದಾಗ ತನ್ನ ಮೇಲೆ ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ 11 ಮಂದಿಯ ಮೇಲೆ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಶಾಸಕ ವೇದವ್ಯಾಸ ಕಾಮತ್ ಅವರ ಮೇಲೂ ಎ್ಐಆರ್ ದಾಖಲಾಗಿದ್ದು, ನಾಲ್ಕನೇ ಆರೋಪಿಯನ್ನಾಗಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net