

ಬೆಂಗಳೂರು: ಮಾದನಾಯಕನಹಳ್ಳಿಯಿಂದ ಹೆಸರಘಟ್ಟಕ್ಕೆ ಸಂಪರ್ಕಿಸುವ ಕುದುರುಗೆರೆ ರಸ್ತೆಯ ಎರಡು ಬದಿಗಳಲ್ಲಿ ಜನ ನಿರಂತರವಾಗಿ ತಮ್ಮ ಮನೆಯ ಕಸವನ್ನು ತಂದು ಎಸೆಯುತ್ತಿರುವುದರಿಂದ ರಸ್ತೆಯಲ್ಲಿ ಓಡಾಡುವರಿಗೆ ಕಿರಿಕಿರಿ ಉಂಟಾಗಿದೆ. ಸಮಸ್ಯೆಯಿಂದ ಅಧಿಕಾರಿಗಳಿಗೂ ತಲೆನೋವಾಗಿದೆ. ದಿನನಿತ್ಯ ಸಾವಿರಾರು ಜನ ಸಂಚರಿಸುವ ಮುಖ್ಯರಸ್ತೆಯಲ್ಲಿ ರಾಶಿ ರಾಶಿ ಕಸ ತಂದು ಸುರಿಯುತ್ತಿರುವುದರಿಂದ ಕಸದ ಗುಡ್ಡೆ ಬೆಳೆಯುತ್ತಿದೆ. ವಾಹನಗಳಲ್ಲಿ ಸಂಚರಿಸುವ ಸವಾರರು ತಮ್ಮ ಮನೆಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಕವರ್‌ಗಳಲ್ಲಿ ಕಟ್ಟಿ ಹೋಗುವಾಗ ರಸ್ತೆಬದಿ ಎಸೆಯುತ್ತಿದ್ದಾರೆ. ಈ ಕುರಿತು ನಗರಸಭೆ ಬಾರಿ ಅಧಿಕಾರಿಗಳು ಎಚ್ಚರಿಕೆ ಲಕಗಳನ್ನು ಅಳವಡಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ವಚ್ಛತೆ ಕಾಪಾಡಲು ಅಧಿಕಾರಿಗಳು ಕೈಗೊಳ್ಳುವ ಕ್ರಮಗಳಿಗೆ ಕೈಜೋಡಿಸಬೇಕಾದ ಸಾರ್ವಜನಿಕರು ತಮ್ಮ ಮನೆಗಳ ಬಳಿ ಬರುವ ಕಸದ ಗಾಡಿಗಳಿಗೆ ತ್ಯಾಜ್ಯವನ್ನು ನೀಡಿ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ಇದೆ.
ನಗರಸಭೆ ಸಿಬ್ಬಂದಿಗಳ ನಿರ್ಲಕ್ಷ್ಯವೋ, ಸಾರ್ವಜನಿಕರ ಬೇಜವಾಬ್ದಾರಿಯೋ ಒಟ್ಟಿನಲ್ಲಿ ಮಾದನಾಯಕನಹಳ್ಳಿಯಲ್ಲಿ ರಸ್ತೆಬದಿ ಹಾಕುತ್ತಿರುವ ಕಸದ ರಾಶಿಯಿಂದಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಕಸದ ರಾಶಿಯಿಂದ ಸೊಳ್ಳೆಗಳು ಮತ್ತು ನೊಣಗಳು ವ್ಯಾಪಕವಾಗಿ ಉತ್ಪತ್ತಿಯಾಗುತ್ತಿದ್ದು, ರಸ್ತೆ ಬದಿಯ ಹೋಟೆಲ್‌ಗಳಲ್ಲಿ, ತಿಂಡಿ ತಿನಿಸುಗಳ ಮಾರಾಟ ಮಳಿಗೆಗಳಲ್ಲಿನ ಪದಾರ್ಥಗಳ ಮೇಲೆ ಕುಳಿತು ರೋಗ ಹರಡಲು ಕಾರಣವಾಗುತ್ತಿವೆ.
ನಾಮಲಕವನ್ನು ಅಳವಡಿಸಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರದೇ ಇರುವುದರಿಂದ ನಗರಸಭೆಯು ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಸಾರ್ವಜನಿಕವಾಗಿ ಕಸ ಎಸೆಯುವರ ವಿರುದ್ಧ ದಂಡಾಸ್ತ್ರ ಪ್ರಯೋಗ ಮಾಡಿದರೆ ಪರಿಸ್ಥಿತಿ ನಿಯಂತ್ರಣಗೊಳ್ಳಲಿದೆ. ದಂಡ ಪ್ರಯೋಗದ ಹೊರತು ಸಾರ್ವಜನಿಕರು ಬುದ್ಧಿ ಕಲಿಯುವುದಿಲ್ಲ. ಹಾಗಾಗಿ ನಗರಸಭೆ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದು ಅಗತ್ಯ.