ಮಾಜಿಗಳ ಜತೆ ಸಂಪರ್ಕದಲ್ಲಿದ್ದಾರಂತೆ ರಶ್ಮಿಕಾ ಮಂದಣ್ಣ

Rashmika
Published on

ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ನಡುವಿನ ಪ್ರೀತಿ, ಪ್ರೇಮ, ನಿಶ್ಚಿತಾರ್ಥ ಕೊನೆಗೆ ಮುರಿದುಬಿದ್ದ ಸಂಬಂಧ... ಎಲ್ಲವೂ ಈಗ ಹಳೆಯ ವಿಷಯವೇ. ಆ ಬಳಿಕ ಒಬ್ಬರು ಮತ್ತೊಬ್ಬರಿಗೆ ಶುಭ ಹಾರೈಸುವುದನ್ನು ಬಿಟ್ಟರೆ ಅವರ ಬಗ್ಗೆ ಇವರು, ಇವರ ಬಗ್ಗೆ ಅವರು ಎಲ್ಲೂ ತುಟಿ ಪಿಟಕ್ ಅಂದಿಲ್ಲ. ಹೀಗೆ ತಮ್ಮದೇ ಸಿನಿಮಾಗಳಲ್ಲಿ ಇಬ್ಬರೂ ಬಿಜಿಯಾಗಿದ್ದಾರೆ.

ಆದರೆ, ಇತ್ತೀಚೆಗಷ್ಟೇ ರಶ್ಮಿಕಾ ಮಾಜಿ ಬಾಯ್​​ಫ್ರೆಂಡ್​ಗಳ ಬಗ್ಗೆ ಸಂದರ್ಶನವೊಂದರಲ್ಲಿ ಮೌನ ಮುರಿದಿದ್ದಾರೆ. ‘ನಾನು ಈಗಲೂ ಮಾಜಿ ಬಾಯ್​​ಫ್ರೆಂಡ್​ಗಳ ಜತೆ ಸಂಪರ್ಕದಲ್ಲಿದ್ದೇನೆ. ಅವರ ಕುಟುಂಬದವರನ್ನೂ ಭೇಟಿಯಾಗುತ್ತಿರುತ್ತೇನೆ. ಎಲ್ಲರ ಜತೆಗೂ ಉತ್ತಮ ಬಾಂಧವ್ಯ ಹೊಂದಿದ್ದೇನೆ’ ಎಂದಿದ್ದಾರೆ. ರಶ್ಮಿಕಾ ಹೆಸರು ತೆಲುಗು ನಟ ವಿಜಯ್ ದೇವರಕೊಂಡ ಜತೆ ಕೇಳಿಬಂದಿತ್ತು.

‘ಸಾಮಿ’ ಹಾಡಿಗೆ ಸ್ಟೆಪ್ಸ್ ಹಾಕಿದ ಮಾಧುರಿ, ರಶ್ಮಿಕಾ: ಸದ್ಯ ರಶ್ಮಿಕಾ ‘ಗುಡ್​ಬೈ’ ಚಿತ್ರದ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ವಿಕಾಸ್ ಬೆಹ್ಲ್ ನಿರ್ದೇಶನದ ಈ ಕಾಮಿಡಿ ಡ್ರಾಮಾದಲ್ಲಿ ಅಮಿತಾಭ್ ಬಚ್ಚನ್, ನೀನಾ ಗುಪ್ತಾ ಜತೆ ರಶ್ಮಿಕಾ ನಟಿಸಿದ್ದಾರೆ. ಚಿತ್ರ ಇದೇ ಅಕ್ಟೋಬರ್ 7ರಂದು ಬಿಡುಗಡೆಯಾಗಲಿದ್ದು, ಚಿತ್ರತಂಡ ಇತ್ತೀಚೆಗಷ್ಟೇ ‘ಝುಲಕ್ ದಿಖ್​ಲಾಜಾ 10’ ಡಾನ್ಸ್ ರಿಯಾಲಿಟಿ ಶೋನಲ್ಲಿ ಪ್ರಚಾರಕ್ಕೆ ಆಗಮಿಸಿತ್ತು. ಆ ಸಂದರ್ಭದಲ್ಲಿ ಮಾಧುರಿ ದೀಕ್ಷಿತ್ ಬಗ್ಗೆ ಮಾತನಾಡಿದ ರಶ್ಮಿಕಾ, ‘ನಾನಿಂದು ನಟಿಯಾಗಲು ಕಾರಣ ನೀವೇ. ನಿಮ್ಮನ್ನು ಕಾಪಿ ಮಾಡುತ್ತಾ, ನಿಮ್ಮ ಹಾಡುಗಳಿಗೆ ಡಾನ್ಸ್ ಮಾಡುತ್ತಾ ಇವತ್ತು ಈ ಜಾಗದಲ್ಲಿ ನಿಂತಿದ್ದೇನೆ’ ಎಂದಿದ್ದಾರೆ. ‘ಪುಷ್ಪ’ ಚಿತ್ರದ ‘ಸಾಮಿ ಸಾಮಿ’ ಹಾಡಿಗೆ ಮಾಧುರಿ ಜತೆ ವೇದಿಕೆ ಮೇಲೆ ಕುಣಿದು ಸಂಭ್ರಮಿಸಿದ್ದಾರೆ. - ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net