

ಬೆಂಗಳೂರು: ಶಿವರಾಜಕುಮಾರ್ ನಟನೆಯ ‘ಭೈರತಿ ರಣಗಲ್’ ಬಿಡುಗಡೆ ಸಮಯದಲ್ಲೇ ಅವರ ಮತ್ತೊಂದು ಸಿನಿಮಾ ಘೋಷಣೆಯಾಗಿದೆ. ಈ ಚಿತ್ರವನ್ನು ‘ಟೋಪಿವಾಲ’, ‘ಬೀರ್‌ಬಲ್’, ಘೋಸ್ಟ್’ ಖ್ಯಾತಿಯ ಎಂ.ಜಿ. ಶ್ರೀನಿವಾಸ್ (ಶ್ರೀನಿ) ನಿರ್ದೇಶಿಸುತ್ತಿದ್ದು, ‘ಎ ಫಾರ್ ಆನಂದ್’. ವಿಶೇಷ ಅಂದರೆ 1986ರಲ್ಲಿ ‘ಆನಂದ್’ ಚಿತ್ರದ ಮೂಲಕ ಶಿವಣ್ಣ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಬಳಿಕ ‘ರಣರಂಗ’, ‘ಆನಂದ ಜ್ಯೋತಿ’, ‘ಮನ ಮಿಡಿಯಿತು’, ‘ಪ್ರೇಮರಾಗ ಹಾಡು ಗೆಳತಿ’, ‘ಅಂಡಮಾನ್’, ‘ಮದುವೆ ಆಗೋಣ ಬಾ’ ಮತ್ತು ‘ಜೇಮ್ಸ್’ ಚಿತ್ರಗಳಲ್ಲಿ ಅವರ ಪಾತ್ರದ ಹೆಸರು ಆನಂದ್ ಎಂದಿತ್ತು. ಇದೀಗ ‘ಎ ಾರ್ ಆನಂದ್’ ಸಿನಿಮಾದಲ್ಲಿ ಶಿವಣ್ಣ ಮತ್ತೊಮ್ಮೆ ಆನಂದ್ ಆಗಿದ್ದಾರೆ.
ಇದೊಂದು ನೈಜ ಘಟನೆಯಾಧಾರಿತ ಚಿತ್ರವಾಗಿದ್ದು, ಶಿಕ್ಷಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಮಕ್ಕಳ ದಿನಾಚರಣೆ ಅಂಗವಾಗಿ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. 2020ರಲ್ಲಿ ಬಿಡುಗಡೆಯಾಗಿದ್ದ ‘ದ್ರೋಣ’ ಚಿತ್ರದಲ್ಲಿ ಶಿವಣ್ಣ ಟೀಚರ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಶಿಕ್ಷಕರಾಗಿದ್ದಾರೆ. ಇದೊಂದು ಉತ್ತಮ ಸಂದೇಶವಿರುವ ಚಿತ್ರವಾಗಿದ್ದು ಶ್ರೀನಿ ಮಾಡಿಕೊಂಡಿರುವ ವಿಭಿನ್ನ ಕಥೆಯಲ್ಲಿ, ವಿಭಿನ್ನ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ. ಗೀತಾ ಪಿಕ್ಚರ್ಸ್ ಬ್ಯಾನರಡಿಯಲ್ಲಿ ಗೀತಾ ಶಿವರಾಜಕುಮಾರ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಚಿತ್ರಕ್ಕೆ ಮಹೇನ್ ಸಿಂಹ ಛಾಯಾಗ್ರಹಣ, ವಿ.ಎಂ.ಪ್ರಸನ್ನ ಸಂಭಾಷಣೆ, ದೀಪು ಎಸ್.ಕುಮಾರ್ ಸಂಕಲನ ಇರಲಿದೆ. ಮಾರ್ಚ್ ಅಥವಾ ಏಪ್ರಿಲ್‌ನಿಂದ ಶೂಟಿಂಗ್ ಆರಂಭವಾಗಲಿದೆ.