ಬಂದ್ಲು ಗಡಂಗ್ ರಕ್ಕಮ್ಮ; ವಿಕ್ರಾಂತ್ ರೋಣ ಚಿತ್ರದ ಮೊದಲ ಹಾಡು ಬಿಡುಗಡೆ

Gadang Rakkamma
Published on

ಬೆಂಗಳೂರು: ಈ ವರ್ಷದ ನಿರೀಕ್ಷಿತ ಚಿತ್ರಗಳಲ್ಲಿ ‘ವಿಕ್ರಾಂತ್ ರೋಣ’ ಕೂಡ ಒಂದು. ಅನೂಪ್ ಭಂಡಾರಿ ಮತ್ತು ಸುದೀಪ್ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ಚಿತ್ರದಲ್ಲಿ ಶ್ರೀಲಂಕಾ ಮೂಲದ ಬಾಲಿವುಡ್ ಚೆಲುವೆ ಜಾಕ್​ಲೀನ್ ಫರ್ನಾಂಡಿಸ್ ಎರಡು ವಿಭಿನ್ನ ಶೇಡ್​ಗಳಲ್ಲಿ ಮಿಂಚಿದ್ದಾರೆ.

ರಾಕಿಲ್ ಡಿಸೋಜಾ ಹಾಗೂ ಗಡಂಗ್ ರಕ್ಕಮ್ಮ ಎಂಬ ಎರಡು ಲುಕ್​ಗಳಲ್ಲಿ ಜಾಕ್​ಲೀನ್ ಕಾಣಿಸಿಕೊಳ್ಳಲಿದ್ದಾರೆ. ನಿನ್ನೆ ಸೋಮವಾರ (ಮೇ 23)ರಂದು ಜಾಕ್​ಲೀನ್ ಅಭಿನಯದ ‘ರಾರಾ ರಕ್ಕಮ್ಮ’ ಹಾಡು ಬಿಡುಗಡೆಯಾಗಿದ್ದು, ಯೂಟ್ಯೂಬ್​ನಲ್ಲಿ ಸದ್ದು ಮಾಡುತ್ತಿದೆ. ‘ನಾ ಗೋಲಿ ಸೋಡ ಬಾಟಲಿ, ನಾ ಬಂದೆ ಬುಲ್ಲಕ್ ಕಾರ್ಟಲಿ...’ ಎಂದು ಪ್ರಾರಂಭವಾಗುವ ಈ ಹಾಡಿಗೆ ಖುದ್ದು ನಿರ್ದೇಶಕ ಅನೂಪ್ ಭಂಡಾರಿ ಸಾಹಿತ್ಯ ಬರೆದಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ನಕಾಶ್ ಅಜೀಜ್ ಹಾಗೂ ಸುನಿಧಿ ಚೌಹಾನ್ ಈ ಹಾಡಿಗೆ ಧ್ವನಿಯಾ ಗಿದ್ದು, ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ.

ವಿಶೇಷವೆಂದರೆ, ಐದು ಭಾಷೆಗಳಲ್ಲಿ ಏಕಕಾಲದಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದ್ದರೂ, ಈ ಲಿರಿಕಲ್ ಹಾಡನ್ನು ಮಾತ್ರ ಚಿತ್ರತಂಡ ಐದೂ ಭಾಷೆಗಳಲ್ಲಿ ಒಂದೊಂದು ದಿನ ಬಿಡುಗಡೆ ಮಾಡುತ್ತಿದೆ. ಸೋಮವಾರ ಕನ್ನಡ ಅವತರಣಿಕೆಯ ಹಾಡು ಬಿಡುಗಡೆಯಾಗಿದ್ದು, ಇಂದು ಮಧ್ಯಾಹ್ನ 1.05ಕ್ಕೆ ಹಿಂದಿಯಲ್ಲಿ, 25ರಂದು ಅದೇ ಸಮಯಕ್ಕೆ ತೆಲುಗಿನಲ್ಲಿ, 26ರಂದು ತಮಿಳಿನಲ್ಲಿ ಹಾಗೂ 27ರಂದು ಮಲಯಾಳಂನಲ್ಲಿ ‘ರಾರಾ ರಕ್ಕಮ್ಮ’ ಹಾಡು ಬಿಡುಗಡೆ ಆಗಲಿದೆ.

ಈ ಹಾಡಿನಲ್ಲಿ ಜಾಕ್​ಲೀನ್​ಗೆ, ‘ದಿ ಕ್ವೀನ್ ಆಫ್ ಗುಡ್ ಟೈಮ್್ಸ’ ಎಂಬ ಬಿರುದು ನೀಡಿರುವುದು ಮತ್ತೊಂದು ವಿಶೇಷತೆ. ಇದೇ ಜುಲೈ 28ರಂದು ‘ವಿಕ್ರಾಂತ್ ರೋಣ’ ವಿಶ್ವದಾದ್ಯಂತ ಥ್ರೀಡಿ ರೂಪದಲ್ಲಿ ಬಿಡುಗಡೆ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net