

ಬಾಲಿವುಡ್ ನಟ ಸಲ್ಮಾನ್ ಖಾನ್ ಜೀವನದಲ್ಲಿ ಅದೆಷ್ಟು ಗರ್ಲ್ಫ್ರೆಂಡ್ಗಳು ಬಂದು ಹೋಗಿದ್ದಾರೆ ಎಂದು ಲೆಕ್ಕ ಇಟ್ಟವರಿಲ್ಲ. ಸಂಗೀತಾ ಬಿಜಲಾನಿಯಿಂದ ಪ್ರಾರಂಭಿಸಿ ಇಯೂಲಿಯಾ ವಂಟೂರ್ವರೆಗೂ ಹಲವರು ಪ್ರೇಯಸಿಯರು ಸಲ್ಮಾನ್ ಜೀವನದಲ್ಲಿ ಬಂದು ಹೋಗಿದ್ದಾರೆ. ಆ ಸಾಲಿಗೆ ಹೊಸ ಸೇರ್ಪಡೆ ಸಮಂತಾ. ಯಾರು, ಟಾಲಿವುಡ್ ನಟಿ ಸಮಂತಾನಾ? ಎಂಬ ಪ್ರಶ್ನೆ ಬರುವುದು ಸಹಜ. ಇಲ್ಲ ಇದು ಆ ಸಮಂತಾ ಅಲ್ಲ. ಈಕೆ ಹಾಲಿವುಡ್ ನಟಿ ಸಮಂತಾ ಲಾಕ್ವುಡ್.
‘ಶೂಟ್ ದಿ ಹೀರೋ’, ‘ಹವಾಯ್ 5-0’ ಮುಂತಾದ ಚಿತ್ರಗಳ ಖ್ಯಾತಿಯ ಸಮಂತಾ, ಇತ್ತೀಚೆಗೆ ಸಲ್ಮಾನ್ ಹುಟ್ಟುಹಬ್ಬದಲ್ಲಿ ಭಾಗವಹಿಸಿದ್ದರು. ಅದಲ್ಲದೆ, ಸಲ್ಮಾನ್ ಜತೆಗೆ ಹಲವು ಕಡೆ ಕಾಣಿಸಿಕೊಂಡಿದ್ದರು. ಇದೆಲ್ಲದರಿಂದ, ಅವರನ್ನು ಸಲ್ಮಾನ್ನ ಹೊಸ ಗೆಳತಿ ಎಂದು ಕರೆಯಲಾಗುತ್ತಿದೆ. ಆದರೆ, ಸಮಂತಾ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ತಾನು ಸಲ್ಮಾನ್ ಗರ್ಲ್ಫ್ರೆಂಡ್ ಅಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
‘ಜನ ಏನು ಬೇಕಾದರೂ ಮಾತನಾಡುತ್ತಾರೆ. ಸಲ್ಮಾನ್ ಅವರನ್ನು ಭೇಟಿ ಮಾಡುವ ಅವಕಾಶವೊಂದು ಸಿಕ್ಕಿತ್ತು. ಅವರೊಬ್ಬ ಒಳ್ಳೆಯ ಮನುಷ್ಯ. ಅದಕ್ಕಿಂತ ಅವರ ಬಗ್ಗೆ ಹೆಚ್ಚು ಹೇಳುವುದಕ್ಕೆ ನನಗೆ ಆಗುವುದಿಲ್ಲ. ಆದರೆ, ನಾನು ಅವರ ಗರ್ಲ್ಫ್ರೆಂಡ್ ಎಂದು ಜನ ಅದ್ಯಾಕೆ ನಿರ್ಧಾರಕ್ಕೆ ಬಂದರೋ ನನಗೆ ಗೊತ್ತಿಲ್ಲ. ಸಲ್ಮಾನ್ ತರಹ ಹೃತಿಕ್ ರೋಶನ್ ಅವರನ್ನು ಸಹ ಭೇಟಿ ಮಾಡಿದ್ದೇನೆ. ಹೃತಿಕ್ ಮತ್ತು ನನ್ನ ಮಧ್ಯೆ ಯಾಕೆ ಸಂಬಂಧ ಕಲ್ಪಿಸಲಿಲ್ಲ? ನಮ್ಮಿಬ್ಬರ ಬಗ್ಗೆ ಯಾಕೆ ಯಾರೂ ಮಾತನಾಡುವುದಿಲ್ಲ? ಈ ತರಹದ ಸುದ್ದಿಗಳನ್ನು ಯಾರು ಸೃಷ್ಟಿ ಮಾಡುತ್ತಾರೋ ನನಗೆ ಗೊತ್ತಿಲ್ಲ’ ಎಂದು ಸಮಂತಾ ಲಾಕ್ವುಡ್ ಹೇಳಿಕೊಂಡಿದ್ದಾರೆ. - ಏಜೆನ್ಸೀಸ್